ನವದೆಹಲಿ: ಉಚಿತ ಕರೆ, ಟಾಡಾ ಮೂಲಕ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ್ದ ರಿಲಯನ್ಸ್‌ ಜಿಯೋಗೆ ಸೆಡ್ಡು ಹೊಡೆಯಲು ಸರ್ಕಾರಿ ಸ್ವಾಮ್ಯದ ಭಾರತ್‌ ಸಂಚಾರ ನಿಗಮ ಲಿಮಿಡೆಟ್‌ (ಬಿಎಸ್‌ಎನ್‌ಎಲ್‌) ಸಿದ್ದತೆ ನಡೆಸಿದೆ. ಜನವರಿಯಿಂದ ಹೊಸ ಯೋಜನೆಗಳನ್ನು ಘೋಷಿಸಲಿದೆ.
149 ರೂ.ಗೆ ಅನಿಯಮಿತ ಉಚಿತ ಕರೆ ಮತ್ತು 300 ಎಂಬಿ ಡಾಟಾ ಮತ್ತು ಎಸ್‌ಎಂಎಸ್‌ ಒದಗಿಸಲಿದೆ. ಇದು ರಿಲಯನ್ಸ್‌ ಜಿಯೋ ಒದಗಿಸುತ್ತಿರುವ ವೆಲ್‌ಕಮ್‌ ಆಫರ್‌'ಗೆ ಸ್ಪರ್ಧೆ ನೀಡುವ ತಂತ್ರವಾಗಿದೆ.

ನಾವು ಯಾವುದೇ ರೀತಿಯ ಸ್ಪರ್ಧೆಗೆ ಸಿದ್ಧರಾಗಿದ್ದೇವೆ, 149 ರೂ.ಗೆ ಎಲ್ಲಾ ನೆಟ್‌ವರ್ಕ್ಗಳಿಗೂ ಉಚಿತ ಕರೆ ಸೌಲಭ್ಯ ನೀಡುತ್ತಿದ್ದೇವೆ. ಜತೆಗೆ 300 ಎಂಬಿ ಟಾಡಾವನ್ನು ಉಚಿತ ನೀಡುತ್ತಿದ್ದೇವೆ ಎಂದು ಬಿಎಸ್‌ಎನ್‌ಎಲ್‌ ಅಧ್ಯಕ್ಷ ಅನುಪಮ್‌ ಶ್ರೀವಾಸ್ತವ್‌ ತಿಳಿಸಿದ್ದಾರೆ ಎಂದು ಎಕಾನಾಮಿಕ್‌ ಟೈಮ್ಸ್‌ ವರದಿ ಮಾಡಿದೆ.

ಮಾರುಕಟ್ಟೆಗೆ ಬಂದ ಮೂರೇ ತಿಂಗಳಲ್ಲಿ 5 ಕೋಟಿ ಗ್ರಾಹಕರನ್ನು ಸಂಪಾದಿಸಿರುವುದಾಗಿ ಜಿಯೋ ಹೇಳಿಕೊಂಡಿದೆ. ರಿಲಯನ್ಸ್‌ ಜಿಯೋ ತನ್ನ ಉಚಿತ ಸೇವೆಯನ್ನು ಮಾರ್ಚ್ 31ರವರೆಗೆ ವಿಸ್ತರಿಸಿದೆ.  ಜಿಯೋ ಮಾರುಕಟ್ಟೆಪ್ರವೇಶ ಮಾಡಿದಾಗ ಬಿಎಸ್‌ಎನ್‌ಎಲ್‌ 249 ಮತ್ತು 1099 ರೂ. ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳನ್ನು ಘೋಷಿಸಿತ್ತು. ಆ ಪ್ಲಾನ್‌ಗಳು ಇನ್ನೂ ಜಾರಿಯಲ್ಲಿವೆ. ಜನವರಿ 1ರಿಂದ ಜಾರಿಗೆ ಬರಲಿರುವ 149 ರೂ. ಪ್ಲಾನ್‌ ಅನ್ನು ಹೆಚ್ಚು ಗ್ರಾಹಕರನ್ನು ತಲುಪಲು ಬಳಸಲಾಗುತ್ತದೆ. ಈಗ ಹಾಲಿ ಇರುವ ಗ್ರಾಹಕರಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗುತ್ತದೆ. ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳುವುದು ಮತ್ತು ಹಾಲಿ ಗ್ರಾಹಕರನ್ನು ಉಳಿಸಿಕೊಳ್ಳುವುದು ಬಿಎಸ್‌ಎನ್‌ಎಲ್‌ ಮುಂದಿನ ಗುರಿಯಾಗಿದೆ. ಈಗಾಗಲೇ ರೂ.249ಕ್ಕೆ ಬ್ರಾಡ್‌ ಬ್ಯಾಂಡ್‌ ವೈಫೈ ಅನ್‌'ಲಿಮಿಟೆಡ್‌ ಟಾಡಾ ಒದಗಿಸುತ್ತಿರುವ ಬಿಎಸ್‌ಎನ್‌ಎಲ್‌ ಮೊಬೈಲ್‌ ಜತೆಜತೆಗೆ ಮತ್ತು ಸ್ಥಿರ ದೂರವಾಣಿ ಸೇವೆಯನ್ನು ವಿಸ್ತರಿಸುವ ಗುರಿ ಹೊಂದಿದೆ.

7 ಲಕ್ಷ ಕಿ.ಮೀ.ನಷ್ಟು ಒಎಫ್‌ಸಿ ಬ್ರಾಡ್‌ಬ್ಯಾಂಡ್‌ ಸಂಪರ್ಕ ಹೊಂದಿರುವ ಬಿಎಸ್‌ಎನ್‌ಎಲ್‌ ತನ್ನೆಲ್ಲ ಸೇವಾ ಸಾರ್ಮಥ್ಯವನ್ನು ಬಳಸಿಕೊಳ್ಳಲು ಮುಂದಾಗಿದೆ. ಪ್ರಸ್ತುತ ಪ್ರತಿ ಬಳಕೆದಾರರ ಸರಾಸರಿ ಆದಾಯ(ಎಆರ್‌ಪಿಯು) ರೂ.88 ರಷ್ಟಿದೆ. 2015-16ರಲ್ಲಿ ಬಿಎಸ್‌ಎನ್‌ಎಲ್‌ ರೂ.3855 ಕಾರ್ಯಾಚರಣೆ ಲಾಭ ಗಳಿಸಿದ್ದ ಬಿಎಸ್‌ಎನ್‌ಎಲ್‌ ತನ್ನ ನಷ್ಟವನ್ನು ರೂ.8234ಕೋಟಿಯಿಂದ ರೂ.3879ಕೋಟಿಗೆ ತಗ್ಗಿಸಿದೆ. ಒಟ್ಟಾರೆ ಆದಾಯವು ಶೇ.15ರಷ್ಟುಹೆಚ್ಚಿದ್ದು ರೂ.32,918ಕ್ಕೆ ಏರಿದೆ.

(epaper.kannadaprabha.in)