ಗೂಗಲ್ ಟಾಪ್ ಹುದ್ದೆಗೆ ಮತ್ತೊಬ್ಬ ಭಾರತೀಯ, ಕ್ಲೌಡ್ ಮುಖ್ಯಸ್ಥರಾಗಿ ಬೆಂಗಳೂರಿಗ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 18, Nov 2018, 9:20 PM IST
bangalorean thomas kurian to head google cloud business
Highlights

  • ಜನವರಿ 2019ರಿಂದ ಗೂಗಲ್‌ನ ಕ್ಲೌಡ್ ವಿಭಾಗದ ಮುಖ್ಯಸ್ಥರಾಗಿ ಥಾಮಸ್ ಕುರಿಯನ್
  • ಆರೇಕಲ್ ಕಂಪನಿಯಲ್ಲಿ ಪ್ರಾಡಕ್ಟ್ ಚೀಫ್ ಆಗಿದ್ದ ಬೆಂಗಳೂರಿನ ಥಾಮಸ್ ಕುರಿಯನ್ 

ಬೆಂಗಳೂರು: ಸುಂದರ್ ಪಿಚೈ ಬಳಿಕ ಮತ್ತೊಬ್ಬ ಭಾರತೀಯನಿಗೆ ಸಾಫ್ಟ್‌ವೇರ್ ದೈತ್ಯ ಗೂಗಲ್ ಕಂಪನಿಯಲ್ಲಿ ಉನ್ನತ ಹುದ್ದೆ ದೊರೆತಿದೆ.

ಆರೇಕಲ್ ಕಾರ್ಪ್‌ನ ಪ್ರಾಡಕ್ಟ್ ಚೀಫ್ ಆಗಿದ್ದ ಬೆಂಗಳೂರಿನ ಥಾಮಸ್ ಕುರಿಯನ್ ಈಗ ಗೂಗಲ್ ಕ್ಲೌಡ್‌ನ ಮುಖ್ಯಸ್ಥರಾಗಿ ನೇಮಕವಾಗುವ ಮೂಲಕ ಬೆಂಗಳೂರಿನ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿದಂತಾಗಿದೆ.

ನ.26ರಂದು ಗೂಗಲ್ ಸೇರಲಿರುವ ಕುರಿಯನ್, 2019 ವರ್ಷಾರಂಭದಲ್ಲಿ ಗೂಗಲ್ ಕ್ಲೌಡ್‌ನ ಮುಖ್ಯಸ್ಥರಾಗಿ ಕೆಲಸ ಆರಂಭಿಸಲಿದ್ದಾರೆ ಎಂದು ಗೂಗಲ್ ಪ್ರಕಟಿಸಿದೆ.

ಈಗ ಡಯಾನ್ ಗ್ರೀನ್ ಗೂಗಲ್ ಕ್ಲೌಡ್‌ನ ಮುಖ್ಯಸ್ಥರಾಗಿದ್ದಾರೆ. ಅವರು 2019 ಜನವರಿವರೆಗೆ ತಮ್ಮ ಹುದ್ದೆಯಲ್ಲಿ ಮುಂದುವರಿಯಲಿದ್ದು, ಜವಾಬ್ದಾರಿಯನ್ನು ಕುರಿಯನ್‌ಗೆ ವಹಿಸಲಿದ್ದಾರೆ. ಗೂಗಲ್‌ನ ಮಾತೃಸಂಸ್ಥೆಯಾದ ಆಲ್ಪಾಬೆಟ್‌ನ ನಿರ್ದೇಶಕರಾಗಿ ಗ್ರೀನ್ ಮುಂದುವರಿಯಲಿದ್ದಾರೆ. 

ಕುರಿಯನ್ ಸುಮಾರು 22 ವರ್ಷಗಳ ಕಾಲ ಆರೇಕಲ್‌ನಲ್ಲಿ ಸೇವೆ ಸಲ್ಲಿಸಿದ್ದು, ಆರೇಕಲ್‌ನ ‘ಕ್ಲೌಡ್’ ವಿಭಾಗವನ್ನು ವಿಸ್ತರಿಸಲು ಸಾಕಾಷ್ಟು ಶ್ರಮಪಟ್ಟಿದ್ದಾರೆ. ಅಲ್ಲದೇ ಆರೇಕಲ್ ಸಂಸ್ಥಾಪಕ ಲ್ಯಾರಿ ಎಲಿಸನ್ ಅವರ ಆಪ್ತ ವಲಯದಲ್ಲೂ ಗುರುತಿಸಿಕೊಂಡಿದ್ದರು.

ಆದರೆ ಉದ್ಯಮ ವಿಸ್ತರಣೆ ವಿಚಾರವಾಗಿ ಎಲಿಸನ್ ಜೊತೆ ಭಿನ್ನಾಭಿಪ್ರಾಯ ಹೊಂದಿ, ಕಳೆದ ಸಪ್ಟೆಂಬರ್‌ನಲ್ಲಿ ಆರೇಕಲ್‌ಗೆ ರಾಜೀನಾಮೆ ನೀಡಿದ್ದರು.

ಸುಮಾರು 13 ವರ್ಷ ಆರೇಕಲ್‌ನ ಎಕ್ಸಿಕ್ಯೂಟಿವ್ ಸಮಿತಿ ಸದಸ್ಯರಾಗಿದ್ದ ಕುರಿಯನ್, 32 ದೇಶಗಳಿಗೆ ವಿಸ್ತರಿಸಿರುವ 35 ಸಾವಿರ ಮಂದಿಯ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.

ಕುರಿಯನ್ ನೇಮಕಾತಿಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಗೂಗಲ್ ಸಿಇಓ ಸುಂದರ್ ಪಿಚೈ, ಅವರ ದೂರದೃಷ್ಟಿ, ಗ್ರಾಹಕ ಕೇಂದ್ರಿತ ಸೇವೆ, ಹಾಗೂ ಅಗಾಧ ಅನುಭವ ಗೂಗಲ್‌ನ ಕ್ಲೌಡ್ ವ್ಯವಹಾರಕ್ಕೆ ದೊಡ್ಡ ಕೊಡುಗೆಯಾಗಲಿದೆ, ಎಂದು ಹೇಳಿದ್ದಾರೆ.

ಕುರಿಯನ್ ಅವಳಿ ಸಹೋದರ ಜಾರ್ಜ್ ಕುರಿಯನ್, ಕ್ಯಾಲಿಫೋರ್ನಿಯದ ಹೈಬ್ರಿಡ್ ಡೇಟಾ ಸರ್ವಿಸಸ್ ಕಂಪನಿಯ ಸಿಇಓ ಆಗಿದ್ದಾರೆ.

loader