ಬೆಂಗಳೂರು(ನ.20): ಚೀನಾದಿಂದ ಹೊರಬಂದಿರುವ ಆ್ಯಪಲ್ ಕಂಪನಿಯ ಒಂದು ಉತ್ಪಾದನಾ ಘಟಕ  ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ ಎಂದು ಕೇಂದ್ರ ಐಟಿ ಮತ್ತು ಸಂಪರ್ಕ ಸಚಿವ ರವಿಶಂಕರ್‌ ಪ್ರಸಾದ್‌ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಆರಂಭವಾದ ಬೆಂಗಳೂರು ಟೆಕ್‌ ಶೃಂಗಸಭೆ-2020 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೋವಿಡ್‌ ವೇಳೆಯಲ್ಲಿ ಚೀನಾದಲ್ಲಿರುವ ಒಂಬತ್ತು ಘಟಕಗಳು ಭಾರತಕ್ಕೆ ಸ್ಥಳಾಂತರಗೊಳ್ಳಲು ನಿರ್ಧರಿಸಿದೆ ಎಂದು ಹೇಳಿದ್ದಾರೆ. ವಿಶೇಷವಾಗಿ ಬೆಂಗಳೂರಿನಲ್ಲಿ ಆ್ಯಪಲ್ ಕಂಪನಿ ತನ್ನ ಗುಣಮಟ್ಟದ ಫೋನ್‌ಗಳನ್ನು ತಯಾರಿಸಿ, ವಿದೇಶಗಳಿಗೆ ರಫ್ತು ಸಹ ಮಾಡಲದೆ ಎಂದು ಹೇಳಿದ್ದಾರೆ. 

ಮೊದಲ ದಿನವೇ ಅದ್ಭುತ ಟೇಕಾಫ್‌

ಮೂರು ದಿನಗಳ ಟೆಕ್‌ ಸಮಿಟ್‌ಗೆ ಗುರುವಾರ ಚಾಲನೆ ಸಿಕ್ಕಿದ್ದು, ಅದ್ಭುತವಾದ ಟೇಕಾಫ್‌ ಸಿಕ್ಕಿದೆ. ನೇರ ವೇದಿಕೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಸಚಿವ ಜಗದೀಶ್‌ ಶೆಟ್ಟರ್‌ ಹಾಗೂ ಸಂಬಂಧಿತ ಅಧಿಕಾರಿಗಳು ಭಾಗಿಯಾದರೆ, ವರ್ಚುವಲ್‌ ಮೂಲಕ ದಿಲ್ಲಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ರವಿಶಂರ್ಕ ಪ್ರಸಾದ್‌ ಅವರು ಪಾಲ್ಗೊಂಡು ಸಮ್ಮಿಟ್‌ ಉದ್ಘಾಟನೆ ಮಾಡಿದರು. ಅವರೊಂದಿಗೆ ಇದೇ ವರ್ಚುಯಲ್‌ ವೇದಿಕೆ ಮೂಲಕ ಆಸ್ಪ್ರೇಲಿಯಾ ಪ್ರಧಾನಮಂತ್ರಿ ಸ್ಕಾಟ್‌ ಮಾರಿಸನ್‌ ಅವರು ಸಿಡ್ನಿಯಿಂದ ಹಾಗೂ ಸ್ವಿಡ್ಜರ್‌ಲೆಂಡಿನ ಉಪಾಧ್ಯಕ್ಷ ಗೈ ಫಾರ್ಮೆಲಿನ್‌ ಅವರು ಬರ್ನ್‌ ನಗರದಿಂದ ವರ್ಚುಯಲ್‌ ವೇದಿಕೆಯನ್ನು ಹಂಚಿಕೊಂಡರು. ಹೀಗೆ ತಾಂತ್ರಿಕವಾಗಿ ಜಗತ್ತಿನ ಮುಂಚೂಣಿಯಲ್ಲಿರುವ ಭಾರತವೂ ಸೇರಿ ಮೂರು ದೇಶಗಳ ನಾಯಕರನ್ನು ವರ್ಚುಯಲ್‌ ವೇದಿಕೆಯಲ್ಲಿ ಒಗ್ಗೂಡಿಸಿದ್ದು ಟೆಕ್‌ ಸಮ್ಮಿಟ್‌ನ ಮುಖ್ಯ ಹೆಗ್ಗಳಿಕೆ.

ಬೆಂಗಳೂರಿನಿಂದ ಹೊರಗೂ ಐಟಿ ವಿಸ್ತರಣೆ: ಸಿಎಂ ಯಡಿಯೂರಪ್ಪ

ವರ್ಚುವಲ್‌ ವೇದಿಕೆಯಲ್ಲೇ ಚರ್ಚಾಗೋಷ್ಠಿಗಳು

ಟೆಕ್‌ ಸಮಿಟ್‌ನಲ್ಲಿ ಮೂರು ದಿನಗಳ ಕಾಲ ವಿವಿಧ ವರ್ಚುಯಲ್‌ ವೇದಿಕೆಗಳಲ್ಲಿ ನಡೆಯುತ್ತಿರುವ ಚರ್ಚಾಗೋಷ್ಠಿಗಳಲ್ಲಿ ದೇಶ-ವಿದೇಶಗಳ ಹೂಡಿಕೆದಾರರು, ತಾಂತ್ರಿಕ ನಿಪುಣರು, ವಿವಿಧ ಕಂಪನಿಗಳ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ. ಮೊದಲ ದಿನ ನವೆಂಬರ್‌ 19ರಂದು ಮಹೀಂದ್ರಾ ಮಹೀಂದ್ರಾ ಕಂಪನಿ ಅಧ್ಯಕ್ಷ ಆನಂದ್‌ ಮಹೀಂದ್ರ ಮುಖ್ಯ ಭಾಷಣ ಮಾಡಿದರಲ್ಲದೆ, ಕೋವಿಡ್‌ ನಂತರದ ಕಾಲದಲ್ಲಿ ಕರ್ನಾಟಕ ಮತ್ತು ಭಾರತದಲ್ಲಿರುವ ಹೂಡಿಕೆ ಅವಕಾಶಗಳ ಬಗ್ಗೆ, ಮುಖ್ಯವಾಗಿ ಆಟೋಮೊಬೈಲ್‌ ಕ್ಷೇತ್ರದ ಬೆಳವಣಿಗೆ ಮೇಲೆ ಬೆಳಕು ಚೆಲ್ಲಿದರು. ಇದಾದ ಮೇಲೆ 4 ಚರ್ಚಾಗೋಷ್ಠಿಗಳು ನಡೆದು, ಅನೇಕ ಹೊಸ ಸಾಧ್ಯತೆಗಳತ್ತ ಗಮನ ಸೆಳೆಯುವಂತೆ ಮಾಡಿದವು. ಬಳಿಕ ಸಮಾಜ ಮತ್ತು ಸ್ಯಾಟಲೈಟ್‌ಗಳು, ಹೊಸದಾಗಿ ಜಗತ್ತನ್ನು ಪೀಡಿಸುತ್ತಿರುವ ಮಾರಣಾಂತಕ ವೈರಸ್‌ಗಳ ವಿರುದ್ಧ ವ್ಯಾಕ್ಸಿನ್‌-ಔಷಧಗಳ ಆವಿಷ್ಕಾರ, ಡಿಜಿಟಲ್‌ ಹೆಲ್ತ್‌ಕೇರ್‌ ಮುಂತಾದ ಅಂಶಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

4 ಸಾವಿರ ಪ್ರತಿನಿಧಿಗಳು, 20 ಸಾವಿರ ಬಿಸಿನೆಸ್‌ ವಿಸಿಟರ್‌ಗಳ ದಾಖಲೆಯ ವೇದಿಕೆ:

ಅಂಕಿ- ಅಂಶಗಳಲ್ಲೇ ಬೆರಗು ಮೂಡಿಸುತ್ತಿರುವ ಈ ವರ್ಚುವಲ್‌ ಸಮಿಟ್‌ ಎಲ್ಲ ಅಂಕಿ- ಆಂಶಗಳನ್ನೂ ನೈಜವಾಗಿ ಸಾಕಾರಗೊಳಿಸುತ್ತಿದೆ. ಜಗತ್ತಿನ ಒಟ್ಟು 25 ಪಾಲುದಾರ ದೇಶಗಳು ಪಾಲ್ಗೊಂಡಿವೆ. ಒಟ್ಟು 75 ಅಧಿವೇಶನಗಳಲ್ಲಿ ಸುಮಾರು 270 ಮಂದಿ ತಮ್ಮ ವಾದಗಳನ್ನು ಮಂಡಿಸುತ್ತಿದ್ದಾರೆ. ಆವಿಷ್ಕಾರ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸುಮಾರು 100ಕ್ಕೂ ಹೆಚ್ಚು ನವೋದ್ಯಮಗಳು ಸೇರಿದಂತೆ 250 ಪ್ರದರ್ಶನಗಳನ್ನು ಕೂಡ ಏರ್ಪಡಿಸಲಾಗಿದೆ. ಮತ್ತೊಂದು ದೊಡ್ಡ ದಾಖಲೆ ಎನ್ನುವಂತೆ ವಿವಿಧ ದೇಶಗಳ 4000ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ 20 ಸಾವಿರಕ್ಕೂ ಹೆಚ್ಚು ಬಿಸಿನೆಸ್‌ ವಿಸಿಟರುಗಳು ವರ್ಚುವಲ್‌ ವೇದಿಕೆಯ ಮೂಲಕವೇ ಸಮಿಟ್‌ಗೆ ಭೇಟಿ ನೀಡುತ್ತಿದ್ದಾರೆ.