ಸಾಮಾನ್ಯ ಗ್ರಾಹಕರಿಗೆ ಅಮೆಜಾನ್‌ ಅಂದ್ರೆ ಒಂದು ಆನ್‌ಲೈನ್‌ ಶಾಪಿಂಗ್‌ ತಾಣ. www.amazon.in ತೆರೆದರೆ ಇಷ್ಟಬಂದಿದ್ದು ಖರೀದಿಸಬಹುದು. ಆದರೆ ವ್ಯಾಪಾರಸ್ಥರಿಗೆ ಇದೊಂದು ಮಾರಾಟ ತಾಣ. ಇಂಟರೆಸ್ಟಿಂಗ್‌ ಅಂದ್ರೆ ನಮ್ಮ ದೇಶದ, ನಮ್ಮ ಊರಿನ ವ್ಯಾಪಾರಸ್ಥರಿಗೆ ಅಮೆಜಾನ್‌ ಬೇರೆ ಲೆವೆಲ್ಲಿನ ಬಿಸಿನೆಸ್‌ ಪರಿಚಯ ಮಾಡಿದೆ. ವಿದೇಶದಲ್ಲಿ ನಮ್ಮ ಲೋಕಲ್‌ ಉತ್ಪನ್ನಗಳಿಗೆ ಅಮೆಜಾನ್‌ ಭಾರಿ ಡಿಮ್ಯಾಂಡ್‌ ಬರುವ ಹಾಗೆ ನೋಡಿಕೊಂಡಿದೆ. ಹಾಗಾಗಿ ನಮ್ಮ ದೇಶದಲ್ಲಿ ಸಣ್ಣ ಕೈಗಾರಿಕೆ ನಡೆಸುತ್ತಿರುವ ಮಂದಿ ಹ್ಯಾಪಿಯಾಗಿದ್ದಾರೆ.

ಬೇಕಿದ್ದರೆ ನೀವು ಒಂದ್ಸಲ www.amazon.co.uk ತೆರೆಯಿರಿ. ಆಯುರ್ವೇದಿಕ್‌ ಸೋಪ್‌ ಅಂತ ಕೊಡಿ. ಅದರಲ್ಲಿ ಮೊದಲನೇ ಸಾಲಿನಲ್ಲಿ ಕಾಣಿಸಿಕೊಳ್ಳುವುದು ನಮ್ಮ ಚಂದ್ರಿಕಾ ಸೋಪ್‌. ಜೊತೆಗೆ ಮೈಸೂರು ಸ್ಯಾಂಡಲ್‌ ಸೋಪ್‌. ಅದೇ ಥರ ಅಸ್ಸಾಂ ಟೀ, ವಾವ್‌ ಶ್ಯಾಂಪೂ, ಚೆನ್ನೈನಲ್ಲಿ ತಯಾರಾಗುವ ಕ್ಯಾಲಿಸ್ಟಾಬೆಡ್‌ಶೀಟ್‌ಗಳು ಇವೆಲ್ಲಕ್ಕೂ ಅಲ್ಲಿ ಭಾರಿ ಮರ್ಯಾದೆ. ಇಲ್ಲಿನ ಉತ್ಪನ್ನಗಳನ್ನು ಅಲ್ಲಿನ ಜನ ನಂಬುತ್ತಾರೆ ಅನ್ನುವುದಕ್ಕೆ ಇದು ಸಾಕ್ಷಿ.

ಇದನ್ನೂ ಓದಿ: ಮತ್ತೆ 100 ಆ್ಯಪ್‌ಗಳು ಪ್ಲೇಸ್ಟೋರ್‌ನಿಂದ ಬ್ಯಾನ್! ನಿಮ್ಮ ಫೋನಲ್ಲೂ ಇದೆಯಾ?

ಅಮೆಜಾನ್‌ನ ಸಾಧನೆ ಏನೆಂದರೆ ಸದ್ಯಕ್ಕೆ ಈಗ 50000 ಮಾರಾಟಗಾರರಿಗೆ ವಿದೇಶದಲ್ಲಿ ತನ್ನ ಉತ್ಪನ್ನ ಮಾರಾಟ ಮಾಡುವ ಅವಕಾಶ ಒದಗಿಸಿರುವುದು. ಸದ್ಯಕ್ಕೆ 140 ದಶ ಲಕ್ಷ ಉತ್ಪನ್ನಗಳು ವಿದೇಶಕ್ಕೆ ರಫ್ತಾಗುತ್ತವೆ. ಈಗಾಗಲೇ 1 ಬಿಲಿಯನ್‌ ಡಾಲರ್‌ ವಹಿವಾಟು ದಾಖಲಾಗಿದೆ. ಇನ್ನು 5 ವರ್ಷದಲ್ಲಿ ಲೋಕಲ್‌ ಉತ್ಪನ್ನ ರಫ್ತಿನಲ್ಲಿ 5 ಬಿಲಿಯನ್‌ ಡಾಲರ್‌ ವಹಿವಾಟು ದಾಖಲಿಸುವ ಗುರಿ ಅಮೆಜಾನ್‌ ಹೊಂದಿದೆ. ನಮ್ಮ ಊರಿನಲ್ಲಿ ಇರುವ ಸಣ್ಣ ಕೈಗಾರಿಕೆದಾರರು ಕೂಡ ತಮ್ಮ ಉತ್ಪನ್ನವನ್ನು ಅಮೆಜಾನ್‌ ಮೂಲಕ ವಿದೇಶದಲ್ಲಿ ಮಾರಾಟ ಮಾಡಬಹುದು ಅನ್ನುವುದು ಇಲ್ಲಿ ಗಮನಾರ್ಹ.

ಈ ಕುರಿತಂತೆ ಅಮೆಜಾನ್‌ ಸಂಸ್ಥೆ ಅಮೆಜಾನ್‌ ಎಕ್ಸ್‌ಪೋರ್ಟ್‌ ಡೈಜೆಸ್ಟ್‌ ಬಿಡುಗಡೆ ಮಾಡಿದೆ. ಅಮೆಜಾನ್‌ ಇಂಡಿಯಾದ ಸೀನಿಯರ್‌ ವೈಸ್‌ ಪ್ರೆಸಿಡೆಂಟ್‌ ಅಮಿತ್‌ ಅಗರ್‌ವಾಲ್‌ ಮತ್ತು ಅಮೆಜಾನ್‌ ಸೆಲ್ಲರ್‌ ಸವೀರ್‍ಸಸ್‌ನ ಉಪಾಧ್ಯಕ್ಷ ಗೋಪಾಲ್‌ ಪಿಳ್ಳೈ ಅಮೆಜಾನ್‌ ಎಕ್ಸ್‌ಪೋರ್ಟ್‌ ಡೈಜೆಸ್ಟ್‌ ಬಿಡುಗಡೆ ಮಾಡಿದರು.