ಹೌದು, ನೀವು ಸರಿಯಾಗಿಯೇ ಓದಿದ್ದೀರಿ. ನಾಳಿನ ದಿನ ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ, ನಿಮ್ಮ ಕುಟುಂಬಸ್ಥರು ಅಥವಾ ಆಪ್ತರ ಪೋರ್ನ್ ವಿಡಿಯೋ ಹರಿದಾಡಿದರೆ ಅಚ್ಚರಿಪಡುವ ವಿಷಯವಲ್ಲ. ಅಥವಾ ಪ್ರಧಾನ ಮಂತ್ರಿ ತಾನು ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವುದಾಗಿ ಹೇಳುವ ವಿಡಿಯೋ, ಅಥವಾ ಮುಖ್ಯಮಂತ್ರಿ ವಿಧಾನಸಭೆಯನ್ನು ವಿಸರ್ಜಿಸುವ ನಿರ್ಧಾರ ಪ್ರಕಟಿಸುವ ವಿಡಿಯೋ ಬಂದರೂ ಅಚ್ಚರಿಪಡಬೇಕಾಗಿಲ್ಲ.

ಡೀಪ್‌ಫೇಕ್ ವಿಡಿಯೋ ಎಡಿಟಿಂಗ್ ತಂತ್ರಜ್ಞಾನ ಈಗ ಮಹಿಳೆಯರಿಂದ ಹಿಡಿದು ದೊಡ್ಡ ದೊಡ್ಡ ಕಂಪನಿಗಳು, ಕಾನೂನು ಸಂಸ್ಥೆಗಳಿಂದ ಹಿಡಿದು ಪ್ರಭಾವಿ ರಾಜಕಾರಣಿಗಳಿಗೆ ತಲೆನೋವಿನ ವಿಷಯವಾಗಿದೆ.

ಒಂದು ಕಾಲದಲ್ಲಿ ‘ಫೋಟೋ ಶಾಪ್’ ಇಂತಹ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ಆದರೆ ಅದು ಫೋಟೋಗೆ ಮಾತ್ರ ಸೀಮಿತವಾಗಿತ್ತು ಅಲ್ಲದೇ, ಸೂಕ್ಷ್ಮವಾಗಿ ಗಮನಿಸಿದರೆ ‘ಕೈಚಳಕ’ ಕಂಡು ಹಿಡಿಯಬಹುದಿತ್ತು. ಆದರೆ ಡೀಪ್ ಫೇಕ್, ವಿಡಿಯೋ ಎಡಿಟಿಂಗ್‌ನ ಒಂದು ಅಡ್ವಾನ್ಸ್ಡ್ ತಂತ್ರಜ್ಞಾನವಾಗಿದ್ದು ವ್ಯಕ್ತಿಯ ಫೋಟೋ/ ವಿಡಿಯೋಗಳನ್ನು ಬಳಸಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ನೈಜ ವಿಡಿಯೋಗಳಂತೆಯೇ ಕಾಣುವ ವಿಡಿಯೋಗಳನ್ನು ಸೃಷ್ಟಿಸಬಹುದು. ಎಷ್ಟರ ಮಟ್ಟಿಗೆ ಅಂದ್ರೆ, ಖುದ್ದು ಆ ವಿಡಿಯೋದಲ್ಲಿರುವ ವ್ಯಕ್ತಿಯೇ ಒಮ್ಮೆ ಗೊಂದಲಕ್ಕೊಳಗಾಗುವಷ್ಟು!

ಇದನ್ನೂ ಓದಿ: WhatsApp ಆಗಲಿದೆ ಇನ್ನಷ್ಟು ಇಂಟರೆಸ್ಟಿಂಗ್: ಬರಲಿವೆ ಈ 5 ಫೀಚರ್ಸ್!

ಏನಿದು ಡೀಪ್ ಫೇಕ್?
ಮಶೀನ್ ಲರ್ನಿಂಗ್‌ನ ಒಂದು ಭಾಗವಾದ ನ್ಯೂರಲ್ ಲರ್ನಿಂಗ್ ಟೆಕ್ನಿಕ್ ಬಳಸಿ ಈ ವಿಡಿಯೋಗಳನ್ನು ತಯಾರಿಸಲಾಗುತ್ತದೆ. ಈ ಡೀಪ್ ಲರ್ನಿಂಗ್ ತಂತ್ರಜ್ಞಾನವು ಕೊಟ್ಟ ಮಾಹಿತಿಯನ್ನು ಬಹಳ ಆಳವಾಗಿ, ಸೂಕ್ಷ್ಮವಾಗಿ ಗ್ರಹಿಸುತ್ತದೆ. ಹೆಚ್ಚು ಮಾಹಿತಿಯನ್ನು ಕೊಟ್ಟಷ್ಟು ಹೆಚ್ಚು ಗುಣಮಟ್ಟದ ವಿಡಿಯೋ ತಯಾರಾಗುತ್ತದೆ. ಒಬ್ಬ ವ್ಯಕ್ತಿಯ ಹೆಚ್ಚು ಮಾಹಿತಿ/ಫೋಟೋ-ವಿಡಿಯೋಗಳನ್ನು ಕೊಟ್ಟಷ್ಟು ಹೆಚ್ಚು ನಿಖರವಾದ, ಪಕ್ಕಾ ವಿಡಿಯೋ ರೆಡಿಯಾಗುತ್ತದೆ! ಬರೀ ಒಂದು ಫೋಟೋ ಬಳಸಿಯೂ ಇಂತಹ ವಿಡಿಯೋಗಳನ್ನು ಸೃಷ್ಟಿಸಬಹುದು.

ಮಹಿಳೆಯರೇ ಮೊದಲ ಟಾರ್ಗೆಟ್!

ಡೀಪ್‌ಫೇಕ್ ವಿಡಿಯೋನ ಮೊದಲ ಟಾರ್ಗೆಟ್ ಮಹಿಳೆಯರು. ಸೋಶಿಯಲ್ ಮೀಡಿಯಾ, ಆನ್‌ಲೈನ್ ಅಥವಾ ಇತರ ಕಡೆಯಿಂದ ಮಹಿಳೆಯರ ಫೋಟೋ/ವಿವರಗಳನ್ನು ಕದ್ದು, ಪೋರ್ನ್ ವಿಡಿಯೋಗಳಲ್ಲಿ ಅವುಗಳನ್ನು ಅಳವಡಿಸಿ, ಆಕೆಯ ನಿಜ ಹೆಸರು-ವಿವರಗಳೊಂದಿಗೆ, ಆ ವಿಡಿಯೋಗಳನ್ನು ಹರಿಬಿಡಲಾಗುತ್ತದೆ.

ಸಿಲೆಬ್ರಿಟಿಗಳು ಇನ್ನೂ ಸುಲಭವಾದ ಟಾರ್ಗೆಟ್. ಏಕೆಂದರೆ ಅವರ ಬೇಕಾದಷ್ಟು ಫೋಟೋಗಳು ಆನ್‌ಲೈನ್‌ನಲ್ಲಿ ಸಿಗುತ್ತವೆ. ಕೆಲಸ ಮಾಡುವ ಕಚೇರಿಯಲ್ಲಿ, ವಾಸಿಸುವ ಕಾಲೋನಿಯಲ್ಲಿ ಆ ವಿಡಿಯೋಗಳು ಹರಿದಾಡಿದಾಗ ಏನ್ಮಾಡಕ್ಕಾಗುತ್ತೆ? ಎಷ್ಟು ಮಂದಿಗೆ ಸಮಜಾಯಿಷಿ ಕೊಡಕ್ಕಾಗುತ್ತೆ? ಕಾನೂನು ಸಮರ ಸುಲಭನಾ?  ಡೀಪ್‌ಫೇಕ್ ತಂತ್ರಜ್ಞಾನ ಮೂಲಕ ತಯಾರಾಗುವ ವಿಡಿಯೋಗಳಿಂದ ಅದೆಷ್ಟೋ ಮಹಿಳೆಯರು ಪ್ರತಿನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಹಫ್ ಪೋಸ್ಟ್ ವಿಸ್ತೃತವಾಗಿ ವರದಿ ಮಾಡಿದೆ.

ಡೀಪ್‌ಫೇಕ್ ವಿಡಿಯೋಗಳನ್ನು ರಾಜಕೀಯ ಉದ್ದೇಶಕ್ಕಾಗಿಯೂ ಬಳಸಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ವಿಡಿಯೋಗಳು ಹರಿಬಿಡಲಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಮತದಾನದ ಹಿಂದಿನ ದಿನ  ಖುದ್ದು ಪ್ರಧಾನಿಯೇ/ಮುಖ್ಯಮಂತ್ರಿಯೇ ನನಗೆ ಒಟು ಹಾಕಬೇಡಿ ಎಂಬ ವಿಡಿಯೋ ಬಂದರೂ ಅಚ್ಚರಿಪಡಬೇಕಾಗಿಲ್ಲ.

ಇದನ್ನೂ ಓದಿ | ಹೊಸ ಉದ್ಯಮಕ್ಕೆ ಕೈ ಹಾಕಿದ ಫೇಸ್ಬುಕ್! ನಿಮಗೇನು ಲಾಭ?

ಆತಂಕದ ವಿಷಯ:

ಇನ್ನೊಂದು ಆತಂಕದ ವಿಚಾರ ಏನಂದ್ರೆ, ಇಂತಹ ತಂತ್ರಜ್ಞಾನಗಳು ದಿನಗಳೆದಂತೆ ಸುಲಭವಾಗಿ ಕೈಗೆ ಸಿಗುತ್ತಿವೆ. ಗೂಗಲ್ ಮಾಡಿದ್ರೆ ಸಾಕು, ಬಹಳಷ್ಟು ಸಾಫ್ಟ್‌ವೇರ್‌ಗಳು, ಆ್ಯಪ್‌ಗಳು ಲಭ್ಯ ಇವೆ!

ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ಡೀಪ್ ಫೇಕ್ ವಿಡಿಯೋ ದೊಡ್ಡ ಸಮಸ್ಯೆಯನ್ನು ತಂದೊಡ್ಡಿದೆ. ರೆಡ್ಡಿಟ್ ಈಗಾಗಲೇ ಡೀಪ್‌ಫೇಕ್ ವಿಡಿಯೋಗಳಿಗೆ ನಿಷೇಧ ಹೇರಿದೆ. ಟ್ವಿಟರ್ ಈ ವಿಡಿಯೋಗಳ ನಿಯಂತ್ರಣಕ್ಕೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ಈ ಹಿಂದೆ ಬರಾಕ್ ಒಬಾಮಾ, ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್‌ರ ಡೀಪ್ ಫೇಕ್ ವಿಡಿಯೋಗಳನ್ನು ಮಾಡಿ ಬಿಡಲಾಗಿತ್ತು. ಇನ್ನು ಶ್ರೀಸಾಮಾನ್ಯನ ಕಥೆಯೇನು?