ಏರ್ ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್
ಏರ್ಟೆಲ್ ಗ್ರಾಹಕರಿಗೆ ಇಲ್ಲಿದೆ ಒಂದು ಭರ್ಜರಿ ಗುಡ್ ನ್ಯೂಸ್. ಕಂಪನಿ ತನ್ನ 4ಜಿ ಸೇವೆಯನ್ನು ಇದೀಗ ಇಲ್ಲಿಯೂ ವಿಸ್ತರಿಸಿದೆ.
ಬೆಂಗಳೂರು : ಟೆಲಿಫೋನ್ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಏರ್‌ಟೆಲ್ ಸಂಸ್ಥೆಯು ಇದೇ ಮೊದಲ ಬಾರಿಗೆ ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ 4ಜಿ ಸೇವೆಗೆ ಚಾಲನೆ ನೀಡಿದೆ. ಅಂಡಮಾನ್, ನಿಕೋಬಾರ್ ದ್ವೀಪಗಳಲ್ಲಿ ಹೈಸ್ಪೀಡ್ ಡೇಟಾ ಸೇವೆ ಕಲ್ಪಿಸುತ್ತಿರುವ ಮೊದಲ ಸಂಸ್ಥೆಯಾಗಿದೆ.
4ಜಿ ಸೇವೆಗೆ ಸಂಸದ ಬಿಷ್ಣು ಪಡ ರೇ ಮತ್ತು ಭಾರತೀಯ ಟೆಲಿಕಾಂ ಕಾರ್ಯದರ್ಶಿ ಅರುಣ ಸುಂದರರಾಜನ್ ಅವರು ಪರಸ್ಪರ ವಿಡಿಯೋ ಕರೆ ಮಾಡುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅರುಣಾ ಸುಂದರರಾಜನ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 4ಜಿ ಸೇವೆ ಆರಂಭಿಸುವ ಮೂಲಕ ಡಿಜಿಟಲ್ ಇಂಡಿಯಾಕ್ಕೆ ಸಂಪರ್ಕ ಕಲ್ಪಿಸಲಾಗುತ್ತಿದೆ. 4ಜಿ ಸೇವೆಯಿಂದ ಸ್ಥಳೀಯ ನಿವಾಸಿಗಳು ಎಚ್‌ಡಿ ವಿಡಿಯೋಗಳನ್ನು ನೋಡುವುದು, ಕ್ಷಣಾರ್ಧದಲ್ಲಿ ಡೌನ್‌ಲೋಡ್ ಮತ್ತು ಅಪ್‌ಲೋಡ್ ಮಾಡುವುದು, ಇಂಟರ್‌ನೆಟ್ ಬ್ರೌಸಿಂಗ್ ಮಾಡಲು ಸಹಕಾರಿಯಾಗಲಿದೆ. ಅಂಡಮಾನ್ ಮತ್ತು ನಿಕೋಬಾರ್ ದೇಶದ ಪ್ರಮುಖ ಪ್ರವಾಸಿತಾಣಗಳಲ್ಲಿ ಒಂದಾಗಿರುವುದರಿಂದ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸೇವೆ ಆರಂಭಿಸಿದ ಏರ್‌ಟೆಲ್ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.
ಏರ್‌ಟೆಲ್‌ನ ದಕ್ಷಿಣ ಭಾರತದ ವ್ಯವಸ್ಥಾಪಕ ನಿರ್ದೇಶಕ ಗೋಪಾಲ್ ವಿಠ್ಠಲ್ ಮಾತನಾಡಿ, 4ಜಿ ಸೇವೆಯು ಮೊದಲ ಹಂತದಲ್ಲಿ ಪೋರ್ಟ್‌ಬ್ಲೇರ್ ಪ್ರದೇಶದಲ್ಲಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿವಿಧ ದ್ವೀಪಗಳಿಗೆ ವಿಸ್ತರಿಸಲಾಗುವುದು. 2005ರಲ್ಲಿ ಮೊಬೈಲ್ ನೆಟ್‌ವರ್ಕ್ ಆರಂಭಿಸಲಾಗಿತ್ತು. ಇದೀಗ 4ಜಿ ಸೇವೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.