ನವದೆಹಲಿ(ಸೆ. 14): ದೈತ್ಯ ಟೆಲಿಕಾಂ ಆಪರೇಟರ್'ಗಳಾದ ರಿಲಾಯನ್ಸ್ ಕಮ್ಯೂನಿಕೇಶನ್ಸ್ ಮತ್ತು ಏರ್'ಸೆಲ್ ಸಂಸ್ಥೆಗಳು ವಿಲೀನಗೊಂಡಿವೆ. ಈ ಮೂಲಕ ಭಾರತದ ಮೂರನೇ ಬೃಹತ್ ಟೆಲಿಕಾಂ ಆಪರೇಟರ್ ಎನಿಸಿವೆ. ರಿಲಾಯನ್ಸ್ ಕಮ್ಯೂನಿಕೇಶನ್ಸ್'ನ ಒಡೆಯ ಅನಿಲ್ ಅಂಬಾನಿ ಇಂದು ಈ ಮಹತ್ವದ ಒಪ್ಪಂದವನ್ನು ಘೋಷಿಸಿದರು. ಈ ಒಪ್ಪಂದದ ಪ್ರಕಾರ ಹೊಸ ಸಂಸ್ಥೆಯಲ್ಲಿ ರಿಲಯನ್ಸ್ ಕಮ್ಯೂನಿಕೇಶನ್ಸ್ ಅರ್ಧಪಾಲು ಹೊಂದಿರುತ್ತದೆ. ಏರ್'ಸೆಲ್'ನ ಮಾತೃಸಂಸ್ಥೆಯಾದ ಮಲೇಷ್ಯಾದ ಮ್ಯಾಕ್ಸಿಸ್ ಕಮ್ಯೂನಿಕೇಶನ್ಸ್ ಉಳಿದರ್ಧ ಪಾಲನ್ನು ಹೊಂದಿರುತ್ತದೆ.
ಅನಿಲ್ ಅಂಬಾನಿ ಅವರ ಹಿರಿಯ ಸಹೋದರ ಮುಖೇಶ್ ಅಂಬಾನಿಯವರು ರಿಲಾಯನ್ಸ್ ಜಿಯೋ ಆರಂಭಿಸಿ ದೇಶದೆಲ್ಲೆಡೆ ಸಂಚಲನ ಸೃಷ್ಟಿಸುತ್ತಿರುವ ಬೆನ್ನಲ್ಲೇ ಆರ್'ಕಾಮ್ ಮತ್ತು ಏರ್'ಸೆಲ್ ವಿಲೀನಗೊಂಡು ದೊಡ್ಡ ಸಂಸ್ಥೆ ಸೃಷ್ಟಿಯಾಗಿರುವುದು ಕುತೂಹಲ ಮೂಡಿಸಿದೆ. ವಯರ್'ಲೆಸ್ ಟೆಲಿಕಾಂ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಅನಿಲ್ ಅಂಬಾನಿ ಬಹಳ ಅಗ್ರೆಸಿವ್ ಹೆಜ್ಜೆ ಇಟ್ಟಿದ್ದಾರಾ?
ಈ ಒಪ್ಪಂದಕ್ಕೆ ಮತ್ತೊಂದು ಲಾಜಿಕ್ ಇದೆ. ಈ ವಿಲೀನ ಪ್ರಕ್ರಿಯೆಯಿಂದ ರಿಲಯನ್ಸ್ ಕಮ್ಯೂನಿಕೇಶನ್ಸ್'ನ ಸಾಲವು 20 ಸಾವಿರ ಕೋಟಿ ರೂ.ನಷ್ಟು ಕಡಿಮೆಯಾಗಲಿದೆ. ಸಾಲದ ಬಾಧೆಯಿಂದ ತಪ್ಪಿಸಿಕೊಳ್ಳಲು ಅನಿಲ್ ಅಂಬಾನಿ ಈ ವಿಲೀನಕ್ಕೆ ಮುಂದಾದರೆಂಬ ಮಾತಿದೆ. ಹಲವು ದಿನಗಳ ಹಿಂದಿನಿಂದಲೇ ಈ ಒಪ್ಪಂದಕ್ಕೆ ಅನಿಲ್ ಅಂಬಾನಿ ಮುಂದಾಗಿದ್ದರೆಂಬುದು ಈ ಮಾತಿಗೆ ಪುಷ್ಟಿ ನೀಡುತ್ತದೆ.
ದೇಶದ ಟಾಪ್ ಟೆಲಿಕಾಂ ಆಪರೇಟರ್ಸ್:
1) ಏರ್'ಟೆಲ್
2) ವೊಡಾಫೋನ್
3) ರಿಲಾಯನ್ಸ್/ಏರ್'ಸೆಲ್
4) ಐಡಿಯಾ ಸೆಲೂಲಾರ್
