2020ರಲ್ಲಿ ಸೌರಯಾನಕ್ಕೆ ಇಸ್ರೋ ಸಿದ್ಧತೆ!
2020ರಲ್ಲಿ ಸೌರಯಾನಕ್ಕೆ ಇಸ್ರೋ ಸಿದ್ಧತೆ| ಸೂರ್ಯನ ಪ್ರಭಾವಲಯ ಅಧ್ಯಯನ ನಡೆಸಲಿರುವ ನೌಕೆ
ನವದೆಹಲಿ[ಜು.23]: ಚಂದ್ರಯಾನ-2 ನೌಕೆಯ ಯಶಸ್ಸಿನ ಬೆನ್ನಲ್ಲೇ, ಸೌರಯಾನ ನೌಕೆ ಉಡಾವಣೆಗೂ ಇಸ್ರೋ ಸಿದ್ಧತೆ ಆರಂಭಿಸಿದೆ. ಸೂರ್ಯನ ಕರೋನಾ (ಪ್ರಭಾವಲಯ) ಅಧ್ಯಯನಕ್ಕೆ 2020ರ ಮೊದಲಾರ್ಧದ ವೇಳೆ ಆದಿತ್ಯ- ಎಲ್1 ನೌಕೆಯನ್ನು ಇಸ್ರೋ ಉಡಾವಣೆ ಮಾಡಲಿದೆ.
ಸೂರ್ಯನಿಂದ ಸಾವಿರಾರು ಕಿ.ಮೀ.ವರೆಗೂ ವಿಸ್ತರಿಸಿರುವ ಸೂರ್ಯನ ಪ್ರಭಾವಲಯದಲ್ಲಿ ಏಕೆ ಅಷ್ಟೊಂದು ಪ್ರಮಾಣದ ಶಾಖ ಇದೆ ಎನ್ನುವುದು ಇದುವರೆಗೂ ಉತ್ತರ ದೊರೆಯದ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಯತ್ನವಾಗಿ ಆದಿತ್ಯ- ಎಲ್1 ನೌಕೆಯನ್ನು ಉಡಾವಣೆ ಮಾಡಲು ಉದ್ದೇಶಿಸಿರುವುದಾಗಿ ಇಸ್ರೋ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಸೂರ್ಯನ ದ್ಯುತಿಗೋಳ, ಸೂರ್ಯನ ಪ್ರಭಾಮಂಡಲದ ಹೊರಗಿನ ವಲಯ ಹಾಗೂ ಪ್ರಭಾವಲಯದ ಕುರಿತಾದ ಮಹತ್ವದ ಮಾಹಿತಿಗಳನ್ನು ಆದಿತ್ಯ- ಎಲ್1 ನೌಕೆ ಸಂಗ್ರಹಿಸಲಿದೆ.
ಕಳೆದ ತಿಂಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಇಸ್ರೋ ಮುಖ್ಯಸ್ಥ ಶಿವನ್, ಸೂರ್ಯನ ಅಧ್ಯಯನಕ್ಕೆ ಇಸ್ರೋ ಯಾವಾಗಲೂ ಬಯಸುತ್ತದೆ. ಹವಾಮಾನ ಬದಲಾವಣೆಯ ಮೇಲೆ ಸೂರ್ಯನ ಪ್ರಭಾವಲಯ ಪರಿಣಾಮ ಬೀರುವ ಕಾರಣ ಅದರ ವಿಶ್ಲೇಷಣೆಯ ಅಗತ್ಯವಿದೆ. 2020ರ ಮೊದಲಾರ್ಧದಲ್ಲಿ ಸೌರನೌಕೆ ಉಡಾವಣೆಗೆ ಉದ್ದೇಶಿಸಲಾಗಿದೆ. ಅಲ್ಲದೇ ಮುಂದಿನ 2-3 ವರ್ಷದಲ್ಲಿ ಶುಕ್ರಗ್ರಹ ತಲುಪುವ ಅಂತರ್‌ಗ್ರಹ ನೌಕೆಯನ್ನು ಉಡಾವಣೆ ಮಾಡುವ ಯೋಜನೆಯನ್ನೂ ಇಸ್ರೋ ಹಾಕಿಕೊಂಡಿದೆ ಎಂದು ಹೇಳಿದ್ದರು.