ಸುಮಾರು 1 ಲಕ್ಷದ 80 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದ ‘ಡೂಡಲ್ 4 ಗೂಗಲ್’ ಸ್ಪರ್ಧೆ 7 ವರ್ಷ ಪ್ರಾಯದ 1ನೇ ತರಗತಿ ವಿದ್ಯಾರ್ಥಿನಿ ಸಾರಾ ಬಿಡಿಸಿರುವ ಚಿತ್ರ ಡೂಡಲ್‌ಗಾಗಿ ಆಯ್ಕೆ

ಬೆಂಗಳೂರು: ಸಾಫ್ಟ್‌ವೇರ್ ದೈತ್ಯ ಗೂಗಲ್‌ನ 10ನೇ ವಾರ್ಷಿಕ ‘ಡೂಡಲ್ 4 ಗೂಗಲ್’ ಸ್ಪರ್ಧೆಯಲ್ಲಿ 7 ವರ್ಷ ಪ್ರಾಯದ ಸಾರಾ ಗೊಮೆಜ್ ಲೇನ್ ವಿಜೇತರಾಗಿದ್ದಾರೆಂದು ಗೂಗಲ್ ಪ್ರಕಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮೆರಿಕಾದ ವರ್ಜಿನಿಯಾದಲ್ಲಿ 1ನೇ ತರಗತಿ ವಿದ್ಯಾರ್ಥಿನಿಯಾಗಿರುವ ಸಾರಾ ಬಿಡಿಸಿರುವ ಡೂಡಲ್ ಚಿತ್ರವನ್ನು ತನ್ನ ಹೋಮ್ ಪೇಜ್‌ನಲ್ಲಿ ಪ್ರಕಟಿಸುವುದಾಗಿ ಗೂಗಲ್ ಹೇಳಿದೆ.

ಸುಮಾರು 1 ಲಕ್ಷದ 80 ಸಾವಿರ ಅಮೆರಿಕನ್ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಈವರೆಗೆ ವಿಜೇತರಾದವರ ಪೈಕಿ ಸಾರಾ ಅತೀ ಕಿರಿಯಳು ಎಂದು ಹೇಳಲಾಗಿದೆ.

ಗೂಗಲ್ ಕಂಪನಿಯು ಸಾರಾ ಕಾಲೇಜು ಶಿಕ್ಷಣಕ್ಕಾಗಿ $30000 ಹಾಗೂ ಶಾಲೆಗೆ $50000 ಬಹುಮಾನ ನೀಡಲಿದೆ. ಜೊತೆಗೆ, ಸಾರಾಗೆ ‘ಮೌಂಟನ್ ವೀವ್’ಗೆ ಪ್ರವಾಸದ ಬಹುಮಾನವನ್ನೂ ಗೂಗಲ್ ನೀಡಿದೆ. 2014ರಿಂದ ಪ್ರತಿವರ್ಷ ಸ್ಪರ್ಧಾ ವಿಜೇತರಿಗೆ ಗೂಗಲ್ $80000 ಬಹುಮಾನ ನೀಡುತ್ತಾ ಬಂದಿದೆ.

ನನ್ನಿಷ್ಟದ ಡೈನೋಸರ್‌ಗಳು ಡೂಡಲ್‌ನ ಭಾಗವಾಗಿವೆ. ನಾನು ಪಳಯುಳಿಕೆ ತಜ್ಞಳಾಗಬಯಸುತ್ತೇನೆ, ಅದಕ್ಕೆ ಹೆಚ್ಚೆಚ್ಚು ಓದಲು ಈ ಡೈನೋಸರ್‌ಗಳೇ ಸ್ಫೂರ್ತಿ, ಎಂದು ಸಾರಾ ಈ ಸಂದರ್ಭದಲ್ಲಿ ಹೇಳಿದ್ದಾರೆ.

ತಾನು ಬಿಡಿಸಿರುವ ಈ ಚಿತ್ರದಲ್ಲಿರುವ ಕಾಣುವ ಸಲಿಕೆಯು ತನ್ನ ಭವಿಷ್ಯದ ಉದ್ಯೋಗಕ್ಕಾಗಿ ಎಂದು ಸಾರಾ ಅಂಬೋಣ.

1998ರಲ್ಲಿ ಗೂಗಲ್ ತನ್ನ ಹೋಮ್ ಪೇಜಿನಲ್ಲಿ ಡೂಡಲ್‌ಗಳನ್ನು ಬಳಸಲು ಆರಂಭಿಸಿತ್ತು. ಮೊದಲ ಬಾರಿಗೆ ಲೋಗೋವನ್ನು ಬಳಸಲಾಗಿತ್ತು, ಬಳಿಕದ ವರ್ಷಗಳಲ್ಲಿ ಅದಕ್ಕೆ ಕಲಾ ಮೆರುಗನ್ನು ನೀಡಲಾಯಿತು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗಾಗಿ ಗೂಗಲ್ ಕಂಪನಿಯು, ಡೂಡಲ್ 4 ಗೂಗಲ್ ಸ್ಪರ್ಧೆಯನ್ನು ಆಯೋಜಿಸುತ್ತದೆ.