Asianet Suvarna News Asianet Suvarna News

ಇಂದಿನಿಂದ 3 ದಿನ ದೇಶದ ಬೃಹತ್‌ ಟೆಕ್‌ ಮೇಳ; ಅರಮನೆ ಮೈದಾನಕ್ಕೆ ಬನ್ನಿ!

ಇಂದಿನಿಂದ 3 ದಿನಗಳ ಕಾಲ ಬೃಹತ್ ಟೆಕ್ ಮೇಳ ಅರಮನೆ ಮೈದಾನದಲ್ಲಿ ಆರಂಭ | ಅರಮನೆ ಮೈದಾನದಲ್ಲಿ ಭಾರಿ ಸಿದ್ಧತೆ | ಎಲ್ಲ ಕ್ಷೇತ್ರಗಳಿಗೂ ತಂತ್ರಜ್ಞಾನ ವಿಸ್ತರಿಸುವ ಗುರಿ | ಸಿಎಂ ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ 

3 days bengaluru Tech summit 2019 begins from november 18
Author
Bengaluru, First Published Nov 18, 2019, 8:34 AM IST

ಬೆಂಗಳೂರು (ನ. 18):  ದೇಶದ ಅತಿದೊಡ್ಡ ತಂತ್ರಜ್ಞಾನ ಮೇಳ ‘ಬೆಂಗಳೂರು ಟೆಕ್‌ ಸಮಿಟ್‌’ಗೆ ನಗರದ ಅರಮನೆ ಮೈದಾನ ಸಜ್ಜಾಗಿದ್ದು, ನ.18ರಿಂದ 20 ರವರೆಗೆ ನಡೆಯುವ ಮೇಳಕ್ಕೆ ವಿವಿಧ ದೇಶಗಳ ಪ್ರತಿನಿಧಿಗಳು ಆಗಮಿಸಿದ್ದಾರೆ.

ಈ ಬಾರಿಯ ಮೇಳವನ್ನು ಹೆಚ್ಚು ಜನಸ್ನೇಹಿಯಾಗಿಸುವುದರ ಜೊತೆಗೆ ತಂತ್ರಜ್ಞಾನವನ್ನು ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸುವ ಉದ್ದೇಶದಿಂದ ಹತ್ತು ಹಲವು ವಿಷಯಗಳ ಕುರಿತು ವಿಚಾರಗೋಷ್ಠಿ, ತಂತ್ರಜ್ಞಾನ ಪ್ರದರ್ಶನ ನಡೆಯಲಿದ್ದು, ಮೇಳವನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೋಮವಾರ ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ.

ಮನೆ ಮನೆಗೆ ತಂತ್ರಜ್ಞಾನ: ಸರ್ಕಾರದ ಐಟಿ ಸಮ್ಮೇಳನ ಬದಲಿಸಲಿದೆ ಜೀವನ!

ಮೇಳದ ಅತಿಥಿಗಳಾಗಿ ಉಜ್ಬೇಕಿಸ್ತಾನ್‌ ಗಣರಾಜ್ಯದ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನಗಳ ಅಭಿವೃದ್ಧಿ ಉಪಸಚಿವ ಉಮರೊವ್‌ ಮುಷಮಾ ಜಾನೋವಿಚ್‌, ಡಿಆರ್‌ಡಿಒ ಅಧ್ಯಕ್ಷ ಡಾ.ಜಿ.ಸತೀಶ್‌ ರೆಡ್ಡಿ, ಬಿಬಿಎಂಪಿ ಮೇಯರ್‌ ಎಂ.ಗೌತಮ್‌ಕುಮಾರ್‌, ಭಾರತದ ಬ್ರಿಟಿಷ್‌ ಹೈಕಮಿಷನರ್‌ ಸರ್‌ ಡೊಮಿನಿಕ್‌ ಅಂಥೋನಿ ಜೆರಾರ್ಡ್‌ ಅಸ್ಕ್ವಿತ್‌ ಹಾಗೂ ಆಸ್ಪ್ರೇಲಿಯಾ, ನೆದರ್‌ಲ್ಯಾಂಡ್ಸ್‌, ಲಿಥುವೇನಿಯಾ ರಾಯಭಾರಿಗಳು, ಹೈಕಮಿಷನರ್‌ಗಳು ಭಾಗವಹಿಸಲಿದ್ದಾರೆ ಎಂದು ಐಟಿ ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಭಾನುವಾರ ಬೆಂಗಳೂರು ಅರಮನೆ ಆವರಣದಲ್ಲಿ ಮೇಳದ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಮೇಳದಲ್ಲಿ ಜಪಾನ್‌, ಕೆನಡಾ, ಇಸ್ರೇಲ್‌, ನೆದರ್‌ಲ್ಯಾಂಡ್‌, ಜರ್ಮನಿ, ಸ್ವಿಡ್ಜರ್‌ಲ್ಯಾಂಡ್‌ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ದೇಶ ವಿದೇಶಗಳಿಂದ 3500 ನಿಯೋಗಗಳು ಪಾಲ್ಗೊಳ್ಳಲಿವೆ.

ಸ್ಮಾರ್ಟ್‌ ಐಟಿ, ಸ್ಮಾರ್ಟ್‌ ಬಯೋ, ಜಾಗತಿಕ ಆವಿಷ್ಕಾರಗಳ ಸಮ್ಮಿಲನ ಮತ್ತು ಪರಿಣಾಮ ಎಂಬ ನಾಲ್ಕು ಪ್ರಕಾರಗಳ ಅಧಿವೇಶನಗಳು, 39ಕ್ಕೂ ಹೆಚ್ಚು ಗೋಷ್ಠಿಗಳು ನಡೆಯಲಿದ್ದು, ಇವುಗಳಲ್ಲಿ 200ಕ್ಕೂ ಹೆಚ್ಚು ತಜ್ಞರು, ಸ್ಪೀಕರ್‌ಗಳಿಂದ ವಿಚಾರ ಮಂಡನೆ, ತಂತ್ರಜ್ಞರೊಂದಿಗೆ ವಿಚಾರ ವಿನಿಮಯ, ಹೊಸ ತಂತ್ರಜ್ಞಾನಗಳ ಪ್ರದರ್ಶನ, ಒಪ್ಪಂದಗಳು, ಉತ್ಪನ್ನಗಳ ಬಿಡುಗಡೆ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಮೇಳದಲ್ಲಿ 200ಕ್ಕೂ ಹೆಚ್ಚು ಸ್ಟಾರ್ಟ್‌ ಅಪ್‌ಗಳು, 250 ಪ್ರದರ್ಶನ ಮಳಿಗೆಗಳು ಭಾಗವಹಿಸಲಿವೆ. 12 ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ವಿವರಿಸಿದರು.

ಹಲವು ಪ್ರಶಸ್ತಿ ಪ್ರದಾನ

ಮೇಳದಲ್ಲಿ ಐಟಿ-ಬಿಟಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಮತ್ತು ಬೆಳವಣಿಗೆಗೆ ಸಹಕಾರಿಯಾದವರಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಬೆಂಗಳೂರು ಇಂಪ್ಯಾಕ್ಟ್ ಪ್ರಶಸ್ತಿ, ಎಸ್‌ಟಿಪಿಐ ಐಟಿ ತಜ್ಞ ಪ್ರಶಸ್ತಿ, ಸ್ಮಾರ್ಟ್‌ ಬಯೋ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಜತೆಗೆ ರಾಜ್ಯದಲ್ಲಿನ ಒಂಬತ್ತು ಯುನಿಕಾರ್ನ್‌ ಸಂಸ್ಥೆಗಳನ್ನು ಗೌರವಿಸಲಾಗುತ್ತಿದೆ.

ಸೈಬರ್‌ ಭದ್ರತಾ ಪ್ರಾಧಿಕಾರ ಸ್ಥಾಪನೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್‌ ಅಪರಾಧ ತಡೆಗೆ ಸೈಬರ್‌ ಭದ್ರತಾ ಪ್ರಾಧಿಕಾರ ಸ್ಥಾಪನೆ ಮತ್ತು ಐಟಿ ಬಿಟಿ ಉದ್ಯಮಗಳಲ್ಲಿ ಹೊಸ ಆವಿಷ್ಕಾರಗಳ ಉತ್ತೇಜನಕ್ಕೆ ‘ಕರ್ನಾಟಕ ಇನ್ನೋವೇಷನ್‌ ಅಥಾರಿಟಿ’ ಸ್ಥಾಪನೆಗೆ ಸರ್ಕಾರ ಮುಂದಾಗಿದೆ ಎಂದು ಇದೇ ವೇಳೆ ಅಶ್ವತ್ಥನಾರಾಯಣ ತಿಳಿಸಿದರು. ಜತೆಗೆ, ತಂತ್ರಜ್ಞಾನದ ಗುಣಮಟ್ಟಹೆಚ್ಚಿಸಿ ಮಾನವ ಸಂಪನ್ಮೂಲದ ಕೌಶಲ್ಯಾಭಿವೃದ್ಧಿಗಾಗಿ ಸರ್ಕಾರ ಐಟಿ ಬಿಟಿ ಇನ್‌ಕ್ಯೂಬೇಷನ್‌ ಕೇಂದ್ರ ಆರಂಭಿಸಲು ತೀರ್ಮಾನಿಸಿದೆ. ಆ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗಿದೆ. ಶೀಘ್ರದಲ್ಲೇ ಪ್ರಾಧಿಕಾರಗಳನ್ನು ರಚಿಸಲಾಗುವುದು ಎಂದರು.

ತಂತ್ರಜ್ಞಾನ ಶೃಂಗದಲ್ಲಿ ಏನೇನಿದೆ?

ರೋಬೋಟಿಕ್‌ ಸ್ಟರ್ಧೆ - 200ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿ

20 ದೇಶಗಳ ಪ್ರತಿನಿಧಿಗಳು ಭಾಗಿ.

200ಕ್ಕೂ ಹೆಚ್ಚು ತಂತ್ರಜ್ಞರು, ತಜ್ಞರಿಂದ ವಿಚಾರ ಮಂಡನೆ

ದೇಶ ವಿದೇಶಗಳಿಂದ 3500 ನಿಯೋಗಗಳ ಭೇಟಿ

250 ಪ್ರದರ್ಶನ ಮಳಿಗೆಗಳು, 200 ಸ್ಟಾರ್ಟ್‌ ಅಪ್‌ಗಳಿಗೆ ಅವಕಾಶ

12 ಸಾವಿರ ಜನ ಭೇಟಿ ನೀಡುವ ನಿರೀಕ್ಷೆ

"

Follow Us:
Download App:
  • android
  • ios