ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಯಾವ ಮುಸ್ಲಿಮರೂ ಮತ ಹಾಕುವು ದಿಲ್ಲ. ಒಂದು ವೇಳೆ ಬಿಜೆಪಿಗೆ ಮತ ಹಾಕಿದರೆ ಅವರು ಮುಸ್ಲಿಮರೇ ಅಲ್ಲ ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಆಲ್ ಇಂಡಿಯಾ ಜಮಿಯತ್ ಉಲ್ ಮನ್ಸೂರ್ - ಕರ್ನಾಟಕ ಸಂಘಟನೆಯು ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ನದಾಫ್ -ಪಿಂಜಾರ-ಮನ್ಸೂರಿ ಸಮಾಜಗಳ ರಾಷ್ಟ್ರೀಯ ಜಾಗೃತಿ ಸಮಾವೇಶ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರೆಲ್ಲರೂ ಕಡ್ಡಾಯವಾಗಿ ಮತ ಹಾಕಿದರೆ ಕಾಂಗ್ರೆಸ್‌ಗೆ 20 ಕ್ಕೂ ಹೆಚ್ಚು ಸೀಟು ಬರುತ್ತದೆ. ಪ್ರತಿ ಕ್ಷೇತ್ರದಲ್ಲೂ 3 ರಿಂದ 5 ಲಕ್ಷದವರೆಗೆ ಮುಸ್ಲಿಂ ಸಮುದಾಯದ ಮತಗಳಿವೆ. 

ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾದರೆ ಜಾತ್ಯತೀತರು ಹಾಗೂ ಅಲ್ಪಸಂಖ್ಯಾತರು ಭಯದ ವಾತಾವರಣದಲ್ಲಿ ಬದುಕಬೇಕಾಗುತ್ತದೆ. ಅಂತಹ ಭಯಾನಕ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದಾದರೆ ಪ್ರತಿಯೊಬ್ಬರೂ ಜಾತ್ಯತೀತ ಸಿದ್ಧಾಂತಗಳುಳ್ಳ ಪಕ್ಷಗಳಿಗೆ ಮಾತ್ರ ಮತ ನೀಡಬೇಕು. 

ಒಂದು ವೇಳೆ ಮುಸ್ಲಿಮರು ಬಿಜೆಪಿಗೆ ಮತ ನೀಡಿದರೆ ಅವರು ಮುಸ್ಲಿಂ ಆಗಲು ಸಾಧ್ಯವಿಲ್ಲ ಎಂದು ಹೇಳಿದರು. 2014 ರಲ್ಲಿ ದೇಶದ ಬದಲಾವಣೆಗಾಗಿ ನಾವು ಮೋದಿ ಅವರನ್ನು ಆಯ್ಕೆ ಮಾಡಿದ್ದೇವೆ. ಆದರೆ, ಅವರು ನೀಡಿದ್ದ ಒಂದೂ ಭರವಸೆ ಈಡೇರಿಸಿಲ್ಲ. ಹೀಗಾಗಿ ಅವರನ್ನು ನಾವು ಮತ್ತೆ ಆಯ್ಕೆ ಮಾಡಬಾರದು ಎಂದು ಕರೆ ನೀಡಿದರು.