ಎಚ್‌.ಡಿ.ಕುಮಾರಸ್ವಾಮಿ ಬಗ್ಗೆ ಕೇಳಬೇಡಿ ಎಂದ ದತ್ತ ಜೆಡಿಎಸ್ ನಿಲುವಿನ ಬಗ್ಗೆ ಅಸಮಾಧಾನ ಹೊರಹಾಕಿದ ನಾಯಕ ಜಾತ್ಯತೀತ ವಿಚಾರದಲ್ಲಿ  ದೇವೇಗೌಡ  ಕ್ಲಿಯರ್‌ ಕಟ್‌  

ಬೆಂಗಳೂರು(ಫೆ.08): ಜೆಡಿಎಸ್‌(JDS) ಪಕ್ಷದ ನಿಲುವಿನ ಬಗ್ಗೆ ಸ್ವಪಕ್ಷದವರಿಂದಲೇ ಆಕ್ಷೇಪ ವ್ಯಕ್ತವಾಗಿದ್ದು, ಆಡಳಿತಾರೂಢ ಬಿಜೆಪಿ(BJP) ವಿರುದ್ಧ ಹೆಚ್ಚು ಹೋರಾಟ ಮಾಡುತ್ತಿಲ್ಲ ಮತ್ತು ಸ್ಪಷ್ಟವಾಗಿ ವಿರೋಧಿಸುತ್ತಿಲ್ಲ ಎಂಬ ಅಭಿಪ್ರಾಯ ಇದೆ ಎಂದು ಪಕ್ಷದ ಹಿರಿಯ ಮುಖಂಡ ವೈ.ಎಸ್‌.ವಿ.ದತ್ತ(YSV Datta) ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಜಾತ್ಯತೀತ(secular) ವಿಚಾರದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ(HD Devegowda) ಅವರು ಕ್ಲಿಯರ್‌ ಕಟ್‌ ಇದ್ದಾರೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಬಗ್ಗೆ ಕೇಳಬೇಡಿ ಎಂದು ದತ್ತ ಹೇಳಿದರು.

ಸೋಮವಾರ ವಿಧಾನಸೌಧದಲ್ಲಿನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ಯತೀತ ನಿಲುವು ಶಿಥಿಲವಾಗುತ್ತಿದೆ ಎಂಬ ಅಭಿಪ್ರಾಯವು ಅಲ್ಪಸಂಖ್ಯಾತ, ಹಿಂದುಳಿದವರಲ್ಲಿದೆ. ಬಿಜೆಪಿ ವಿರುದ್ಧ ಹೆಚ್ಚು ಹೋರಾಟ ಮಾಡುತ್ತಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸದೆ ಅವರ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Karnataka Politics: ದತ್ತಾ ಕಾಂಗ್ರೆಸ್ ಸೇರುವುದು ಅವರಿಗೆ ಬಿಟ್ಟಿದ್ದು: ಸಿದ್ದರಾಮಯ್ಯ

ಯಾವುದೇ ಕಾರಣಕ್ಕೂ ಸಿದ್ಧಾಂತದಲ್ಲಿ ಬದಲಾವಣೆಯಾಗಬಾರದು. ನನಗೆ ಈಗ 69 ವರ್ಷ ಆಗಿದೆ. ದೇವೇಗೌಡರ ಜತೆ ಹೆಚ್ಚು ಸಂಪರ್ಕದಲ್ಲಿದ್ದೇನೆ. ಅವರು ಏನು ಎಂಬುದು ಸ್ಪಷ್ಟವಾಗಿ ಗೊತ್ತಿದೆ. ಆದರೆ, ಸೈದ್ಧಾಂತಿಕ ನಿಲುವು ಬೇಕು. ಅದು ಕಾಲಕಾಲಕ್ಕೆ ಬದಲಾಗಬಾರದು. ಇದನ್ನು ಪಕ್ಷದ ಒಳಗೂ, ಹೊರಗೂ ಹೇಳಿದ್ದೇನೆ. ಪಕ್ಷದಲ್ಲಿ ನಿರಂತರತೆ, ಸ್ಪಷ್ಟವಾದ ನಿಲುವು ಇರಬೇಕು. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌(Congress), ಬಿಜೆಪಿ ಎರಡನ್ನೂ ಸಮಾನ ದೂರದಲ್ಲಿಟ್ಟು, ಅಂತರ ಕಾಯ್ದುಕೊಳ್ಳಬೇಕು. ಆ ಮೂಲಕ ಜಾತ್ಯತೀತ ನಿಲುವಿಗೆ ಬದ್ಧವಾಗಿರಬೇಕು. ಜಾತ್ಯತೀತ, ಸಾಮಾಜಿಕ ನ್ಯಾಯ ನಿಲುವು ಇರಬೇಕು ಎಂಬ ಕಾರಣಕ್ಕೆ ಪಕ್ಷದಲ್ಲಿ ಹಲವು ವರ್ಷಗಳಿಂದ ಇದ್ದೇನೆ. ಆದರೆ, ಈ ನಿಲುವು ಪಕ್ಷದಲ್ಲಿ ಶಿಥಿಲವಾಗುತ್ತಿದೆ ಎಂಬ ಗೊಂದಲ ಮತದಾರರಲ್ಲಿ ಉಂಟಾಗಿದೆ ಎಂದರು.

ಜಾತ್ಯತೀತ ವಿಚಾರದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಕ್ಲಿಯರ್‌ ಕಟ್‌ ಇದ್ದಾರೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಅವರು ಪಕ್ಕಾ ಜಾತ್ಯತೀತವಾಗಿ ತೀರ್ಮಾನ ಕೈಗೊಂಡಿದ್ದಾರೆ. ನಮಗೆ ಈಗಲೂ ದೇವೇಗೌಡರ ಮೇಲೆ ಆಶಾಭಾವನೆ ಇದೆ. ನಾನು 20 ವರ್ಷ ಹುಡುಗನಿದ್ದಾಗಲೇ ದೇವೇಗೌಡ ಜತೆ ಸೇರಿಕೊಂಡವನು ಎಂದಿದ್ದಾರೆ.

ಸಿದ್ದರಾಮಯ್ಯ ಭೇಟಿಯಾದ ದೇವೇಗೌಡ್ರ ಮಾನಸ ಪುತ್ರ, ಕುತೂಹಲ ಮೂಡಿಸಿದ ದತ್ತಾ ನಡೆ

ರಾಗಿ ಖರೀದಿ ಕಡಿತಕ್ಕೆ ವೈಎಸ್‌ವಿ ದತ್ತ ಆಕ್ರೋಶ
ರಾಗಿ ಬೆಳೆ ಖರೀದಿ ಕಡಿತಗೊಳಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್‌ ಮುಖಂಡ ವೈ.ಎಸ್‌.ವಿ.ದತ್ತ, ಪ್ರಸ್ತುತ ಇರುವ ಆದೇಶವನ್ನು ಹಿಂಪಡೆದು ರಾಗಿ ಬೆಳೆದ ಎಲ್ಲ ರೈತರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ಸರ್ಕಾರ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರ ಯಾವುದೇ ಮುನ್ಸೂಚನೆ ನೀಡದೆ ರಾಜ್ಯದ ಒಟ್ಟು ರಾಗಿ ಖರೀದಿ ಪ್ರಮಾಣದಲ್ಲಿ ಶೇ.30ರಷ್ಟುಖರೀದಿಸಲು ಆದೇಶ ನೀಡಿರುವುದು ಸರಿಯಲ್ಲ. ರಾಗಿ ಬೆಳೆದ ಎಲ್ಲ ರೈತರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುವ ಆದೇಶ ಹೊರಡಿಸಬೇಕು ಎಂದು ಸುದ್ದಿಗಾರರೆದುರು ಆಗ್ರಹಿಸಿದರು.

 ಸರ್ಕಾರದ ಆದೇಶದಿಂದ ರಾಜ್ಯದ ಬಯಲು ಸೀಮೆಯ ರಾಗಿ ಬೆಳೆಗಾರರಿಗೆ ಸಮಸ್ಯೆಯಾಗುತ್ತಿದೆ. ಪರಿಣಾಮ ರಾಗಿ ಬೆಳೆದ ರೈತರು ಕಷ್ಟದಲ್ಲಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಪ್ರತಿಭಟನೆ ಮಾಡಲಾಗಿದೆ. ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದರೆ ಸರ್ಕಾರ ಆದೇಶ, ಬೆಂಗಳೂರಲ್ಲಿ ಬದಲಾವಣೆ ಮಾಡಿ ಎನ್ನುತ್ತಾರೆ ಎಂದು ಕಿಡಿಕಾರಿದರು.

ಸಣ್ಣ ರೈತರಿಂದ 20 ಕ್ವಿಂಟಾಲ್‌ ಮಾತ್ರ ಖರೀದಿ ಮಾಡುತ್ತೇನೆ ಎಂದು ಸರ್ಕಾರ ಆದೇಶ ಮಾಡಿದೆ. ಇದರಿಂದ ರೈತರು ಸಂಕಷ್ಟದಲ್ಲಿ ಅನುಭವಿಸುವಂತಾಗಿದೆ. ಹೀಗಾದರೆ ರೈತರು ಬೆಳೆದ ಉಳಿದ ರಾಗಿಯನ್ನು ಏನು ಮಾಡಬೇಕು? ಸರ್ಕಾರವು ಆದೇಶವನ್ನು ಹಿಂಪಡೆದು ಎಲ್ಲಾ ರೈತರಿಂದ ಕಳೆದ ವರ್ಷದಂತೆ ಗರಿಷ್ಠ 50 ಕ್ವಿಂಟಾಲ್‌ ಖರೀದಿಸಲು ಅವಕಾಶ ನೀಡಬೇಕು ಮತ್ತು ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ಸರ್ಕಾರ ಆದೇಶ ಹೊರಡಿಸಬೇಕು ಎಂದು ಹೇಳಿದರು.