ಮಣ್ಣು ಉಳಿಸಿ: ಸದ್ಗುರು ಜತೆ ಯೋಗಿ ಸರ್ಕಾರ ಒಪ್ಪಂದ
* ನಾವು ಭೂಮಿಗೆ ಮಾತೆಯ ಸ್ಥಾನ ನೀಡಿದ್ದೇವೆ, ಮಣ್ಣು ಉಳಿಸಿ
* ಸದ್ಗುರು ಅಭಿಯಾನಕ್ಕೆ ರಾಜ್ಯದ 25 ಕೋಟಿ ಜನರ ಸಾಥ್: ಯೋಗಿ
* ಮಣ್ಣು ಉಳಿಸಿ ಮತ್ತು ನದಿಗಳನ್ನು ರಕ್ಷಿಸಿ ಅಭಿಯಾನ ಅತ್ಯಗತ್ಯ
ಬೆಂಗಳೂರು(ಜೂ.09): ಗುಜರಾತ್, ರಾಜಸ್ಥಾನದ ನಂತರ ಇದೀಗ ಉತ್ತರ ಪ್ರದೇಶ ಸರ್ಕಾರ ಈಶಾ ಫೌಂಡೇಶನ್ ಆರಂಭಿಸಿರುವ ಮಣ್ಣು ಉಳಿಸಿ ಅಭಿಯಾನಕ್ಕೆ ಕೈಜೋಡಿಸಿದ್ದು ಬುಧವಾರ ಒಡಂಬಡಿಕೆ ಪತ್ರಕ್ಕೆ(ಎಂಒಯು) ಸಹಿ ಹಾಕಿದೆ.
ಲಖನೌದಲ್ಲಿ ನಡೆದ ಮಣ್ಣು ಉಳಿಸಿ ಕಾರ್ಯಕ್ರಮದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಸದ್ಗುರುಗಳು ಪರಸ್ಪರ ಒಡಂಬಡಿಕೆ ಪತ್ರವನ್ನು ವಿನಿಮಯ ಮಾಡಿಕೊಂಡರು. ಆ ಸಂದರ್ಭದಲ್ಲಿ ಸದ್ಗುರುಗಳು ಈ ಅಭಿಯಾನದ ಮಣ್ಣು ಉಳಿಸಿ ಕಾರ್ಯನೀತಿಯ ಕೈಪಿಡಿಯನ್ನು ಮುಖ್ಯಮಂತ್ರಿಯವರಿಗೆ ನೀಡಿದರು.
ಮಣ್ಣಿನ ನಾಶ ಸಂಪೂರ್ಣ ನಿಲ್ಲುವವರೆಗೂ ಧ್ವನಿ ಎತ್ತಿ: ಸದ್ಗುರು
ನಂತರ ಮಾತನಾಡಿದ ಸದ್ಗುರುಗಳು, ಭೂಮಿಗೆ ಮಾತೆಯ ಸ್ಥಾನ ನೀಡಿರುವ ಭಾರತ ಮಣ್ಣಿನ ಜೀರ್ಣೋದ್ಧಾರದ ಕಾರ್ಯದಲ್ಲಿ ಪಾಲ್ಗೊಂಡು ಇಡೀ ವಿಶ್ವಕ್ಕೆ ಮುಂದಾಳಾಗಬೇಕು. ಉತ್ತರ ಪ್ರದೇಶ ದೇಶದಲ್ಲೇ ಅತಿದೊಡ್ಡ ರಾಜ್ಯವಾಗಿದ್ದು ಬಹಳಷ್ಟುಭೂಮಿ ಕೃಷಿ ನಿರತವಾಗಿದೆ. ಆದ್ದರಿಂದ ಅದು ಮುಂಚೂಣಿಯಲ್ಲಿರಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ, ನದಿಗಳನ್ನು ರಕ್ಷಿಸಿ ಅಭಿಯಾನದ ಅಂಗವಾಗಿ ಈಶಾ ಫೌಂಡೇಶನ್ ಉತ್ತರ ಪ್ರದೇಶದ ಏಳು ನದಿಗಳ ಪುನರುಜ್ಜೀವನ ಮಾಡಿರುವುದು ಶ್ಲಾಘನೀಯ ಕಾರ್ಯ. ಮಣ್ಣು ಉಳಿಸಿ ಮತ್ತು ನದಿಗಳನ್ನು ರಕ್ಷಿಸಿ ಅಭಿಯಾನವು ಅತ್ಯಗತ್ಯವಾಗಿದ್ದು ಈ ಅಭಿಯಾನದಲ್ಲಿ ಉತ್ತರ ಪ್ರದೇಶ ರಾಜ್ಯದ 25 ಕೋಟಿ ಜನರು ಬೆಂಬಲಿಸಲಿದ್ದಾರೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉತ್ತರಪ್ರದೇಶದ ಕೃಷಿ ಸಚಿವ ಸೂರ್ಯ ಪ್ರತಾಪ್ ಶಾಹಿ, ಅಲಹಾಬಾದ್ ಹೈಕೋರ್ಚ್ ಮುಖ್ಯ ನ್ಯಾಯಾಧೀಶ ರಾಜೇಶ್ ಬಿಂದಲ್, ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿ ದುರ್ಗಾಶಂಕರ್ ಮಿಶ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಎಥೆನಾಲ್ ಮಿಶ್ರಣ ಗುರಿ ಸಾಧಿಸಿದ ಭಾರತ: ಮೋದಿ ಹರ್ಷ
ಪ್ರಸ್ತುತ ಮಣ್ಣು ಉಳಿಸಿ ಅಭಿಯಾನದ ಸಲುವಾಗಿ ಯೂರೋಪ್, ಮಧ್ಯ ಏಷ್ಯಾ ಮತ್ತು ಮಧ್ಯ ಪ್ರಾಚ್ಯ ದೇಶಗಳಲ್ಲಿ ನೂರು ದಿನಗಳ ಕಾಲ ಒಟ್ಟು 30 ಸಾವಿರ ಕಿ.ಮೀ ಏಕಾಂಗಿಯಾಗಿ ಪ್ರಯಾಣಿಸಿ ಜಾಗೃತಿ ಮೂಡಿಸುವ ಕೆಲಸದಲ್ಲಿ ಸದ್ಗುರು ತೊಡಗಿಕೊಂಡಿದ್ದಾರೆ. ಈ ಅಭಿಯಾನದ ಅವಧಿಯಲ್ಲಿ ಜಾಗತಿಕ ಮುಖಂಡರು, ವಿಜ್ಞಾನಿಗಳು, ಮಣ್ಣಿನ ತಜ್ಞರು, ಮತ್ತು ಉಳಿದ ಮಧ್ಯಸ್ಥಗಾರರನ್ನು ಭೇಟಿಯಾಗಿ ಮಣ್ಣನ್ನು ಉಳಿಸಲು ತುರ್ತು ನೀತಿ ಚಾಲಿತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸದ್ಗುರು ಒತ್ತಾಯ ಮಾಡಲಿದ್ದಾರೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸದ್ಗುರುಗಳ ಮಣ್ಣು ಉಳಿಸಿ ಅಭಿಯಾನಕ್ಕೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಪ್ರೋತ್ಸಾಹ ವ್ಯಕ್ತಪಡಿಸಿದ್ದರು. ಸದ್ಗುರುಗಳು ಮಣ್ಣಿನ ಪುನರುಜ್ಜೀವನಕ್ಕಾಗಿ ಬೇಕಾದ ಪ್ರಾಯೋಗಿಕ ಮತ್ತು ವೈಜ್ಞಾನಿಕ ಪರಿಹಾರಗಳುಳ್ಳ ಮಣ್ಣು ಉಳಿಸಿ ಕಾರ್ಯನೀತಿ ಕೈಪಿಡಿಯನ್ನು ಸಹ ಪ್ರಧಾನಿಯವರಿಗೆ ನೀಡಿದರು.