ಯೋಗಾಭ್ಯಾಸ ನಮ್ಮನ್ನು ಅಹಿಂಸೆ, ಕರುಣೆ, ಶಾಂತಿ ಕಡೆಗೆ ಕೊಂಡೊಯ್ಯುತ್ತದೆ. ಪರಿಪೂರ್ಣ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.
ಬೆಂಗಳೂರು (ಜೂ.22): ಯೋಗಾಭ್ಯಾಸ ನಮ್ಮನ್ನು ಅಹಿಂಸೆ, ಕರುಣೆ, ಶಾಂತಿ ಕಡೆಗೆ ಕೊಂಡೊಯ್ಯುತ್ತದೆ. ಪರಿಪೂರ್ಣ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು. 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧ ಮುಂಭಾಗ ಆಯುಷ್ ಇಲಾಖೆ ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಧ್ಯೇಯ ವಾಕ್ಯದಡಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯೋಗ ಮಾಡುವುದರಿಂದ ನಿರೋಗಿಯಾಗಬಹುದು. ಯೋಗಾಭ್ಯಾಸವು ನಮ್ಮನ್ನು ಅಹಿಂಸೆ, ಕರುಣೆ, ಶಾಂತಿಯ ಕಡೆಗೆ ಕೊಂಡೊಯ್ಯುತ್ತದೆ. ಯೋಗ ನಮ್ಮ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನಗೊಳಿಸಿ ಪರಿಪೂರ್ಣ ಆರೋಗ್ಯ ನೀಡುತ್ತದೆ. ಯೋಗ ಅಳವಡಿಸಿಕೊಳ್ಳುವುದು ಇಂದಿನ ಅತಿ ದೊಡ್ಡ ಅಗತ್ಯ ಎಂದು ಪ್ರತಿಪಾದಿಸಿದರು.
ಮಾನವೀಯತೆಗೆ ಭರವಸೆಯ ಕಿರಣ: ಯೋಗವು ಎಲ್ಲರನ್ನೂ ಒಗ್ಗೂಡಿಸುವ, ಎಲ್ಲರಿಗೂ ಒಳ್ಳೆಯದನ್ನು ಮಾಡುವ ಮೂಲ ಮನೋಭಾವ ಹೊಂದಿದೆ. ಯೋಗವು ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನಗೊಳಿಸಲು ಒಂದು ಉತ್ತಮ ಮಾರ್ಗ. ಇದು ನಮ್ಮ ಋಷಿಮುನಿಗಳು ಮತ್ತು ಸಂತರು ನೀಡಿದ ವಿಶಿಷ್ಟ ಕೊಡುಗೆಯಾಗಿದ್ದು, ಇಂದು ಪ್ರಪಂಚದಾದ್ಯಂತ ಮಾನವೀಯತೆಗೆ ಭರವಸೆಯ ಕಿರಣ ಎಂದು ವಿವರಿಸಿದರು. ಹವಾಮಾನ ಬದಲಾವಣೆ, ಮಾನಸಿಕ ಒತ್ತಡ, ಜೀವನಶೈಲಿಯ ರೋಗಗಳು ಮತ್ತು ಪರಿಸರ ಅಸಮತೋಲನದಿಂದ ಜಗತ್ತು ಬಳಲುತ್ತಿದೆ.
ಯೋಗವು ಆರೋಗ್ಯ ಬಲಪಡಿಸುವುದಲ್ಲದೆ, ಭೂಮಿಯೊಂದಿಗಿನ ನಮ್ಮ ಸಂಪರ್ಕ ಗಾಢವಾಗಿಸುತ್ತದೆ. ನಾವೆಲ್ಲರೂ ಒಟ್ಟಾಗಿ ಯೋಗವನ್ನು ನಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳೋಣ . ಆರೋಗ್ಯಕರ, ಶಾಂತಿಯುತ ಮತ್ತು ಸಮತೋಲಿತ ಜಗತ್ತನ್ನು ಸೃಷ್ಟಿಸೋಣ ಎಂದು ಕರೆ ನೀಡಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸದಸ್ಯ ಟಿ.ಎ.ಶರವಣ, ನಟರಾದ ಅನಿರುದ್ಧ್, ಶೈನ್ ಶೆಟ್ಟಿ, ನಟಿ ಸಾನಿಯಾ ಅಯ್ಯರ್ ಮತ್ತಿತರರು ಉಪಸ್ಥಿತರಿದ್ದರು.
ಸಾವಿರಾರು ಆಸಕ್ತರು ಭಾಗಿ: ವಿಧಾನಸೌಧದ ಮೆಟ್ಟಿಲುಗಳ ಮುಂದೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು, ಸಾವಿರಾರು ಆಸಕ್ತರು ಯೋಗಾಸನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಚಿಕ್ಕ ಮಕ್ಕಳು, ಹಿರಿಯ ನಾಗರಿಕರು ಸೇರಿ ಯೋಗಾಸಕ್ತರು ವಿವಿಧ ಆಸನಗಳನ್ನು ಪ್ರದರ್ಶಿಸಿದರು.
ಅವಕಾಶವಂಚಿತ ನೂರಾರು ವಿದ್ಯಾರ್ಥಿಗಳು: ವಿಧಾನಸೌಧದ ಮುಂಭಾಗ ನಡೆಯುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು, ಯೋಗಾಸನಗಳನ್ನು ಪ್ರದರ್ಶಿಸಬೇಕು ಎಂದು ಆಸಕ್ತಿಯಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ಸ್ಥಳಾವಕಾಶದ ಕೊರತೆಯಿಂದಾಗಿ ಹಾಗೆಯೇ ಹಿಂದಿರುಗಬೇಕಾಯಿತು. ದಿ ಇನ್ಸ್‌ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ, ನಂದಿನಿ ಲೇಔಟ್‌ನ ಎಸ್.ಜಿ.ಇಂಟರ್‌ನ್ಯಾಷನಲ್ ಸ್ಕೂಲ್ ಸೇರಿ ಹಲವು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಹಿಂದಿರುಗಿದ್ದು ಕಂಡುಬಂತು.