ಬೆಂಗಳೂರು, (ನ.06): ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದೀಪಾವಳಿ ಹಬ್ಬದ ವೇಳೆ ಪಟಾಕಿ ನಿಷೇಧ ಮಾಡಿರುವುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.

ಗೃಹ ಕಚೇರಿ ಕೃಷ್ಣದಲ್ಲಿ  ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ದೀಪಾವಳಿ ಹಬ್ಬದ ವೇಳೆ ಪಟಾಕಿ ಮಾರುವಂತಿಲ್ಲ. ಹಾಗೂ ಪಟಾಕಿ ಹಚ್ಚುವಂತಿಲ್ಲ ಎಂದು ತೀರ್ಮಾನಿಸಲಾಗಿದ್ದು, ಈ ಸಂಬಂಧ ಶೀಘ್ರವೇ ಸರ್ಕಾರ ಸುತ್ತೋಲೆ ಹೊರಡಿಸಲಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ದೀಪಾವಳಿಗೆ ಪಟಾಕಿಗೆ ನಿಷೇಧ?

ಜಿಲ್ಲಾಡಳಿತದ ಮೂಲಕ ಸರ್ಕಾರಿ ಸುತ್ತೋಲೆಯನ್ನು ರವಾನೆ ಮಾಡಲಾಗುವುದು. ಯಾವುದೇ ರೀತಿಯ ಪಟಾಕಿಯನ್ನು ಮಾರಾಟ ಮಾಡುವುದಾಗಲಿ ಅಥವಾ ಕೊಳ್ಳುವುದಾಗಲಿ ಮಾಡುವಂತಿಲ್ಲ ಎಂದು ತಿಳಿಸಿದರು.

ಇನ್ನು ಬೈ ಎಲೆಕ್ಷನ್‌ ಬಗ್ಗೆ ಪ್ರತಿಕ್ರಿಯಿಸಿ,  ಶಿರಾ ಮತ್ತು ಆರ್‍ಆರ್‍ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಯಾರೂ ಏನೇ ಹೇಳಿದರೂ ಬಿಜೆಪಿ ಅಭ್ಯರ್ಥಿಗಳೇ 100ಕ್ಕೆ ನೂರರಷ್ಟು ಗೆಲ್ಲುವುದು ಖಚಿತ. ನಾನು ಏನೇ ಹೇಳಬೇಕಾದರೂ ನೂರಾರು ಬಾರಿ ಲೆಕ್ಕಾಚಾರ ಹಾಕಿಯೇ ಹೇಳುತ್ತೇನೆ. ಈವರೆಗೂ ನಾನು ಹೇಳಿರುವ ಯಾವ ಮಾತುಗಳು ಕೂಡ ಸುಳ್ಳಲಾಗಿಲ್ಲ ಎಂದರು.

ಉಪಚುನಾವಣೆ ನಡೆದಿರುವ ಆರ್‍ಆರ್‍ ನಗರ ಮತ್ತು ಶಿರಾದಲ್ಲಿ ಬಿಜೆಪಿ ಅಭ್ಯರ್ಥಿಗಳು ನಿರೀಕ್ಷೆಗೂ ಮೀರಿದ ಮತಗಳಿಂದ ಗೆಲ್ಲುತ್ತಾರೆ. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡ ಎಂದು ಅಚಲ ವಿಶ್ವಾಸ ವ್ಯಕ್ತಪಡಿಸಿದರು.