ಬೆಂಗಳೂರು (ನ. 05): ಪಟಾಕಿ ಸಿಡಿಸುವುದರಿಂದ ಕೊರೋನಾ ಸೋಂಕಿತರ ಶ್ವಾಸಕೋಶದ ಮೇಲೆ ಮಾರಕ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ವರ್ಷದ ದೀಪಾವಳಿ ಹಬ್ಬಕ್ಕೆ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ನಿಷೇಧಿಸುವ ಬಗ್ಗೆ ಕೋವಿಡ್‌ - 19 ತಾಂತ್ರಿಕ ಸಲಹಾ ಸಮಿತಿ ಒಲವು ತೋರಿದೆ.

ಈ ಸಮಿತಿಯ ಶಿಫಾರಸುಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸುವ ಹಿನ್ನೆಲೆಯಲ್ಲಿ ಈ ಬಾರಿ ಪಟಾಕಿ ಬಳಕೆ ನಿಷೇಧಗೊಳ್ಳುವ ಸಾಧ್ಯತೆಯೇ ಹೆಚ್ಚಿದೆ. ಗುರುವಾರ ಸಮಿತಿ ತನ್ನ ವರದಿಯನ್ನು ಆರೋಗ್ಯ ಇಲಾಖೆಗೆ ಸಲ್ಲಿಸಿದ ಬಳಿಕ ರಾಜ್ಯ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈಗಾಗಲೇ ರಾಜಸ್ಥಾನ, ಒಡಿಸ್ಸಾ ರಾಜ್ಯಗಳಲ್ಲಿ ದೀಪಾವಳಿಗೆ ಪಟಾಕಿ ಬಳಕೆ ನಿಷೇಧಿಸಲಾದೆ. ದೆಹಲಿಯಲ್ಲಿ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲೂ ಪಟಾಕಿ ನಿಷೇಧಿಸುವ ಬಗ್ಗೆ ಗಂಭೀರ ಚರ್ಚೆ ಆರಂಭವಾಗಿದೆ.

ದೀಪಾವಳಿಗೆ ಮತ್ತೊಂದು ಪ್ಯಾಕೇಜ್: ಆರ್ಥಿಕ ಚೇತರಿಕೆಗೆ ಕ್ರಮ!

ಪಟಾಕಿ ಬಳಕೆಯಿಂದ ವಾಯು ಮತ್ತು ಶಬ್ದ ಮಾಲಿನ್ಯಗಳು ಕೊರೋನಾ ಸೋಂಕಿನ ನೇರ ಪರಿಣಾಮಕ್ಕೆ ತುತ್ತಾಗುವ ಶ್ವಾಸಕೋಶ ಮತ್ತು ಹೃದಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಈಗಾಗಲೇ ಕೋವಿಡ್‌ನಿಂದ ಗುಣಮುಖರಾದವರು, ಸೋಂಕಿನ ಲಕ್ಷಣ ರಹಿತರಾಗಿದ್ದವರು, ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ಸ್ಥಿತಿಗತಿಯಲ್ಲಿ ಏರುಪೇರು ತರುವ ಸಾಧ್ಯತೆಯಿದೆ ಎಂದು ಡಾ.ಎಂ.ಕೆ. ಸುದರ್ಶನ್‌ ನೇತೃತ್ವದ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಚರ್ಚಿಸಿದೆ.

ದೀಪಾವಳಿಯನ್ನು ಯಾವ ರೀತಿ ಆಚರಿಸಬೇಕು ಎಂಬ ಬಗ್ಗೆ ತಾಂತ್ರಿಕ ಸಮಿತಿಯ ವರದಿ ಗುರುವಾರದೊಳಗೆ ತಮ್ಮ ಕೈಸೇರಲಿದ್ದು, ಆ ಬಳಿಕ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಪಟಾಕಿ ನಿಷೇಧದ ಬಗ್ಗೆ ತೀರ್ಮಾನಕ್ಕೆ ಬರಲಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ನಮಗೆ ಜನರ ಜೀವ ಮುಖ್ಯ. ಅದೇ ರೀತಿ ಹಬ್ಬದ ಆಚರಣೆ, ಸಂಪ್ರದಾಯಗಳಿಗೆ ಚ್ಯುತಿಯೂ ಆಗಬಾರದು. ಪಟಾಕಿಯ ಹೊಗೆಯಲ್ಲಿರುವ ರಾಸಾಯನಿಕಗಳಿಂದ ಆರೋಗ್ಯ ಸಮಸ್ಯೆಗಳಾಗುತ್ತದೆ ಎಂದು ಸುಧಾಕರ್‌ ಅಭಿಪ್ರಾಯಪಟ್ಟಿದ್ದಾರೆ.

ಈ ರಾಶಿಯವರಿಗೆ ಈ ದೀಪಾವಳಿಯಿಂದ ಅದೃಷ್ಟದ ಸುರಿಮಳೆ!

ರಾಜ್ಯದಲ್ಲಿ ಕೊರೋನಾ ಸೋಂಕಿತರಲ್ಲಿ ದೊಡ್ಡ ಪ್ರಮಾಣದಲ್ಲಿ ಹೋಮ್‌ ಐಸೊಲೇಷನ್‌ನಲ್ಲಿದ್ದಾರೆ. ಹೀಗಿರುವಾಗ ಪಟಾಕಿ ಸಿಡಿಸಲು ಅವಕಾಶ ನೀಡಿದರೆ ಮಾಲಿನ್ಯ ಇವರ ಮೇಲೆ ಕೆಟ್ಟಪರಿಣಾಮ ಬೀರಬಹುದು. ಹಾಗೆಯೇ ತೀವ್ರ ಉಸಿರಾಟದ ಸಮಸ್ಯೆ ಇರುವವರು, ನ್ಯುಮೋನಿಯಾ ರೋಗಿಗಳು, ಅಸ್ತಮಾ ರೋಗಿಗಳಿಗೆ ಪಟಾಕಿ ಮಾರಣಾಂತಿಕವಾಗಬಹುದು ಎಂದು ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಕೇರಳದಲ್ಲಿ ಓಣಂ ಬಳಿಕ ಕೋವಿಡ್‌ ತೀವ್ರ ಗತಿಯಲ್ಲಿ ಏರಿಕೆ ಕಂಡಿದೆ. ನವರಾತ್ರಿಯ ವಿಜೃಂಭಣೆಯ ಆಚರಣೆಯ ಬಳಿಕ ಪಶ್ಚಿಮ ಬಂಗಾಳದಲ್ಲಿ ಇದೀಗ ಸೋಂಕು ದಾಖಲೆಯ ಪ್ರಮಾಣದಲ್ಲಿ ವರದಿಯಾಗುತ್ತಿದೆ. ಆದ್ದರಿಂದ ಕರ್ನಾಟಕ ಕೂಡ ದೀಪಾವಳಿ ಆಚರಣೆಯ ಬಗ್ಗೆ ಜಾಗರೂಕ ಹೆಜ್ಜೆಗಳನ್ನು ಇಡಬೇಕು. ದೀಪಾವಳಿಯ ಸಂದರ್ಭದಲ್ಲಿ ತಂಪಾದ ಹವೆ ಇದ್ದು ಆ ಬಳಿಕ ಚಳಿಗಾಲ ಬರಲಿದೆ. ಈ ಸನ್ನಿವೇಶದಲ್ಲಿ ಕೊರೋನಾ ಸ್ಫೋಟವಾದರೆ ನಿಯಂತ್ರಿಸುವುದು ಕಠಿಣವಾಗಲಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.