ಹಳಿಯಾಳದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ಸರ್ಕಾರವು ಹೊರಗಿನವರಿಗೆ ವಸತಿ ಕಲ್ಪಿಸಿ ರಾಜ್ಯದ ಹಿತಾಸಕ್ತಿ ಬಲಿ ಕೊಡುತ್ತಿದೆ ಎಂದು ಆರೋಪಿಸಿದರು. ಕನ್ನಡಪರ ಸಂಘಟನೆಗಳನ್ನು 'ಪೇಯ್ಡ್ ಗಿರಾಕಿಗಳು' ಎಂದು ಕರೆದರು.

ಉತ್ತರಕನ್ನಡ (ಜ.18): ಹೊರ ರಾಜ್ಯ, ಹೊರ ದೇಶದವರಿಗೆ ವಸತಿ ಸೌಲಭ್ಯ ನೀಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ, ಹೈಕಮಾಂಡ್ ಒತ್ತಡಕ್ಕೆ ಮಣಿದು ರಾಜ್ಯದ ಹಿತಾಸಕ್ತಿಯನ್ನು ಬಲಿ ಕೊಡುತ್ತಿದೆ. ಉತ್ತರ ಕರ್ನಾಟಕದ ದುಡಿಯುವ ಕೈಗಳಿಗೆ ಪುನರ್ವಸತಿ ಕಲ್ಪಿಸುವುದನ್ನು ಬಿಟ್ಟು ನುಸುಳುಕೋರರಿಗೆ ಸೌಲಭ್ಯ ನೀಡುತ್ತಿರುವುದು ಸರ್ಕಾರದ ಹಿಬ್ಬಂದಿತನಕ್ಕೆ ಸಾಕ್ಷಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರ್ಕಾರದ ವಿರುದ್ಧ ಕೆಂಡಕಾರಿದರು.

ಇಂದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡ ಪರ ಸಂಘಟನೆಗಳು ‘ಪೇಯ್ಡ್ ಗಿರಾಕಿಗಳು’!

ಇದೇ ವೇಳೆ ಕನ್ನಡ ಪರ ಸಂಘಟನೆಗಳ ದ್ವಂದ್ವ ನೀತಿಯನ್ನು ಪ್ರಶ್ನಿಸಿದ ಯತ್ನಾಳ್, ಮರಾಠಿ ಬೋರ್ಡ್ ಕಂಡರೆ ಬೆಂಕಿ ಹಚ್ಚುತ್ತೇವೆ ಎನ್ನುವ ಹೋರಾಟಗಾರರು, ಬಾಂಗ್ಲಾದೇಶದ ರೋಹಿಂಗ್ಯಾಗಳು ರಾಜ್ಯದೊಳಗೆ ನುಸುಳಿದ್ದರೂ ಚಕಾರ ಎತ್ತುತ್ತಿಲ್ಲ ಯಾಕೆ? ಉರ್ದು ಬೋರ್ಡ್‌ಗಳ ಬಗ್ಗೆ ಮಾತನಾಡದ ಇವರು ಕೇವಲ ಹಿಂದಿ ಮತ್ತು ಮರಾಠಿ ವಿಚಾರ ಬಂದಾಗ ಮಾತ್ರ ಉಗ್ರ ಹೋರಾಟದ ನಾಟಕವಾಡುತ್ತಾರೆ. ಇವರೆಲ್ಲರೂ ಆಡಳಿತ ಪಕ್ಷದ ಕೈಗೊಂಬೆಗಳಾಗಿ ಅಶಾಂತಿ ಮೂಡಿಸುವ ‘ಪೇಯ್ಡ್ ಗಿರಾಕಿಗಳು’" ಎಂದು ಗಂಭೀರ ಆರೋಪ ಮಾಡಿದರು.

ಗಾಂಧಿ ಹೆಸರು ಕೇವಲ ನೆಪ; ಅಸಲಿ ಅಜೆಂಡಾವೇ ಬೇರೆ!

ಬರುವ 22ರಂದು ನಡೆಯಲಿರುವ ಅಧಿವೇಶನದ ಕುರಿತು ಮಾತನಾಡಿದ ಅವರು, 'ಗಾಂಧೀಜಿ ಹೆಸರು ತೆಗೆದಿದ್ದಾರೆ ಎನ್ನುವುದು ಒಂದು ನೆಪವಷ್ಟೇ. ಎಲ್ಲದಕ್ಕೂ ಗಾಂಧಿ ಹೆಸರೇ ಇರಬೇಕೆಂದಿಲ್ಲ; ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಪಟೇಲರ ಹೆಸರನ್ನೂ ಇಡಬಹುದು. ಎಲ್ಲದಕ್ಕೂ ಗಾಂಧಿ ಹೆಸರು ಇಡುವುದರಿಂದ ಈಗಿನ ‘ನಕಲಿ ಗಾಂಧಿ’ಗಳಿಗೆ ಅನುಕೂಲವಾಗುತ್ತದೆ. ‘ವಿಬಿ ಜಿ ರಾಮ್ ಜಿ’ ಸ್ಕೀಮ್ ಉತ್ತಮವಾಗಿದ್ದು, ಅದರ ಹೆಸರನ್ನು ಕೆಡಿಸುವುದು ಇವರ ಉದ್ದೇಶವಾಗಿದೆ. ಸರ್ಕಾರ ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ನಾವು ಸಿದ್ಧರಿದ್ದೇವೆ' ಎಂದು ಸವಾಲು ಹಾಕಿದರು.

ಕರ್ನಾಟಕಕ್ಕೂ ಕೇರಳದ ಸ್ಥಿತಿ ಬರಲಿದೆ: ಎಚ್ಚರಿಕೆ

ಬಾಂಗ್ಲಾ ನುಸುಳುಕೋರರ ಬಗ್ಗೆ ಆತಂಕ ವ್ಯಕ್ತಪಡಿಸಿದ ಯತ್ನಾಳ್, ಬಾಂಗ್ಲಾದೇಶ ಮತ್ತು ಕೇರಳದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಮುಂದಿನ 5-6 ವರ್ಷಗಳಲ್ಲಿ ಕರ್ನಾಟಕದಲ್ಲೂ ಇಂತಹ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಇಲ್ಲಿ ಸೈಕಲ್, ರಿಕ್ಷಾ ಓಡಿಸುವವರು ಕೂಡ ಪಾಕಿಸ್ತಾನದ ಪರ ಘೋಷಣೆ ಕೂಗುತ್ತಿದ್ದಾರೆ. ಇದು ಅತ್ಯಂತ ಚಿಂತಾಜನಕ ವಿಷಯ. ಅಧಿವೇಶನದಲ್ಲಿ ಬಾಂಗ್ಲಾ ನುಸುಳುಕೋರರ ಗುರುತು ಮತ್ತು ಹಿಂದೂ ಕಾರ್ಯಕರ್ತರ ಮೇಲಿನ ದಬ್ಬಾಳಿಕೆಯ ಬಗ್ಗೆ ನಾವು ಪ್ರಬಲವಾಗಿ ಚರ್ಚಿಸುತ್ತೇವೆ ಎಂದು ಗುಡುಗಿದ್ದಾರೆ.