ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರು ಬಿಜೆಪಿಗೆ ಮರಳುವ ಇಂಗಿತವನ್ನು ವ್ಯಕ್ತಪಡಿಸಿದ್ದು, ತಾವೂ ಹಾಗೂ ಬಸನಗೌಡ ಪಾಟೀಲ ಯತ್ನಾಳ್ ಅವರ ಮನಸ್ಸಲ್ಲೂ ಇದೇ ಇದೆ ಎಂದಿದ್ದಾರೆ. ಪಕ್ಷದಲ್ಲಿ ಬದಲಾವಣೆ ತರಲು ಹೊರಬಂದಿರುವುದಾಗಿ ಹೇಳಿದರು,

ದಾವಣಗೆರೆ: ಬಿಜೆಪಿಗೆ ಮರಳುವ ವಿಚಾರವಾಗಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರು ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮನಬಿಚ್ಚಿ ಮಾತನಾಡಿದ್ದು, ಅವರ ಹೇಳಿಕೆಗಳು ರಾಜ್ಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ. ಬಿಜೆಪಿ ಕಾರ್ಯಕರ್ತರು ಮತ್ತೆ ಪಕ್ಷಕ್ಕೆ ಬರಬೇಕು ಎಂದು ಒತ್ತಾಯಿಸುತ್ತಿದ್ದಾರೆ ಏನಂತೀರಿ? ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನನ್ನ ಮನಸ್ಸಲ್ಲೂ ಇದೆ, ಬಸನಗೌಡ ಪಾಟೀಲ ಯತ್ನಾಳ್ ಅವರ ಮನಸ್ಸಲ್ಲೂ ಇದೆ” ಎಂದು ಹೇಳಿಕೆ ನೀಡುವ ಮೂಲಕ ಹಳೆಯದನ್ನೆಲ್ಲ ಮರೆತು ಮತ್ತೆ ಬಿಜೆಪಿಗೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

“ನಮ್ಮ ಕುತ್ತಿಗೆ ಕೋಯ್ದರೂ ಹಿಂದುತ್ವ ಬಿಟ್ಟು ಬೇರೆ ಕಡೆಗೆ ಹೋಗಲ್ಲ” ಎಂದು ಹೇಳಿದ ಈಶ್ವರಪ್ಪ, ತಾವು ಪಕ್ಷದಿಂದ ಹೊರಬಂದಿರುವುದು ಬಿಜೆಪಿಯನ್ನು ತೊರೆಯುವ ಉದ್ದೇಶದಿಂದಲ್ಲ, ಪಕ್ಷದ ಒಳಗೆ ಅಗತ್ಯವಿರುವ ಪರಿವರ್ತನೆಗಾಗಿ ಎಂದು ಹೇಳಿದರು. “ಪಕ್ಷದಲ್ಲಿ ಬದಲಾವಣೆ ಆಗಬೇಕು ಎಂಬ ಕಾರಣಕ್ಕೆ ನಾನು ಹೊರಗೆ ಬಂದಿದ್ದೇನೆ. ಆ ಪರಿವರ್ತನೆ ಇವತ್ತಲ್ಲ ನಾಳೆ ಆಗುತ್ತದೆ. ಸಾಕಷ್ಟು ಬಿಜೆಪಿ ಕಾರ್ಯಕರ್ತರು ಇಂದು ಪಕ್ಷದೊಳಗೆ ನೋವು ಅನುಭವಿಸುತ್ತಿದ್ದಾರೆ. ಆದರೆ ಇವತ್ತಲ್ಲ ನಾಳೆ ಬಿಜೆಪಿ ಮತ್ತೆ ಒಳ್ಳೆಯ ಸ್ಥಿತಿಗೆ ಬರುತ್ತದೆ ಎಂಬ ವಿಶ್ವಾಸ ನನಗಿದೆ” ಎಂದು ಹೇಳಿದರು.

ಕಾಂಗ್ರೆಸ್ ನಾಯಕರಿಗೆ ಮೈ ಮೇಲೆ ಜ್ಞಾನವೇ ಇಲ್ಲ

ಶಿಡ್ಲಘಟ್ಟದಲ್ಲಿ ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಮುಖಂಡನಿಂದ ಅವಾಚ್ಯವಾಗಿ ಮಾತನಾಡಿದ ಪ್ರಕರಣದ ಕುರಿತು ಹರಿಹರದಲ್ಲಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಕಾಂಗ್ರೆಸ್ ನಾಯಕರಿಗೆ ಮೈ ಮೇಲೆ ಜ್ಞಾನವೇ ಇಲ್ಲ. ‘ನಮ್ಮ ಸರ್ಕಾರ ಇದೆ’ ಎಂಬ ಅಹಂಕಾರದಲ್ಲಿ ಬೇಕಾದಂತೆ ವರ್ತಿಸುತ್ತಿದ್ದಾರೆ. ಅಧಿಕಾರದ ಮದ ಏರಿದಾಗ ಈ ರೀತಿಯ ವರ್ತನೆ ಸಹಜವಾಗುತ್ತದೆ” ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಮಹಿಳೆಯರಿಗೆ ಯಾವುದೇ ಭದ್ರತೆ ಇಲ್ಲ ಎಂಬ ಗಂಭೀರ ಆರೋಪ ಮಾಡಿರುವ ಅವರು, ಗೃಹಮಂತ್ರಿಗಳಿಗೆ ಈ ವಿಚಾರ ಹೇಳಿದರೆ ‘ಸಣ್ಣ ವಿಷಯ ಬಿಡ್ರಿ’ ಎಂದು ಹಗುರವಾಗಿ ತೆಗೆದುಕೊಳ್ಳುತ್ತಾರೆ. ಇಷ್ಟು ನಿರ್ಲಕ್ಷ್ಯದಿಂದ ವಿಚಾರಗಳನ್ನು ನೋಡುತ್ತಿರುವುದು ಅತ್ಯಂತ ದುಃಖಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಪಾದಯಾತ್ರೆ ವಿಚಾರಕ್ಕೆ ಸ್ಪಷ್ಟನೆ

ಇತ್ತೀಚೆಗೆ ಚರ್ಚೆಯಲ್ಲಿರುವ ಬಿಜೆಪಿ ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಈಶ್ವರಪ್ಪ, “ಆ ಪಾದಯಾತ್ರೆಯೊಂದಿಗೆ ನನಗೆ ಯಾವುದೇ ಸಂಬಂಧ ಇಲ್ಲ” ಎಂದು ಸ್ಪಷ್ಟಪಡಿಸಿದರು. ಒಟ್ಟಾರೆ, ಬಿಜೆಪಿಗೆ ಮರಳುವ ಬಗ್ಗೆ ಮುಕ್ತವಾಗಿ ಮಾತನಾಡಿದ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಗಳು ಪಕ್ಷದ ಒಳಗಿನ ಅಸಮಾಧಾನ, ಕಾರ್ಯಕರ್ತರ ನೋವು ಹಾಗೂ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸ್ಪಷ್ಟ ಸಂಕೇತ ನೀಡಿವೆ.