ಸಚಿವ ಎಂಬಿ ಪಾಟೀಲ್ ಸಿಎಂ ಪುತ್ರ ಡಾ. ಯತೀಂದ್ರ ಅವರ 'ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ಗಿಂತ ಸಿದ್ದರಾಮಯ್ಯ ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ' ಎಂಬ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

ವಿಜಯಪುರ (ಜುಲೈ.26): 'ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರು ಹಳೆ ಮೈಸೂರು ಭಾಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಭಾಗ ಅಷ್ಟೇ ಅಲ್ಲ, ಇಡೀ ಕರ್ನಾಟಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ' ಎಂದು ಹೇಳುವ ಮೂಲಕ ಸಚಿವ ಎಂಬಿ ಪಾಟೀಲ್ ಸಿಎಂ ಪುತ್ರ ಡಾ ಯತೀಂದ್ರ ಹೇಳಿಕೆ ಬೆಂಬಲಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ 'ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ಗಿಂತ ಸಿದ್ದರಾಮಯ್ಯ ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ' ಎಂಬ ವಿವಾದಾತ್ಮಕ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ಸಚಿವ ಎಂಬಿ ಪಾಟೀಲ್ ಅವರು ಯತೀಂದ್ರ ಹೇಳಿಕೆಗೆ ಬೆಂಬಲ ಸೂಚಿಸಿ, ಬಿಜೆಪಿಯ ಟೀಕೆಗೆ ತಿರುಗೇಟು ನೀಡಿದ್ದಾರೆ.

ನಾಲ್ವಡಿ ಹಳೇ ಮೈಸೂರು ಭಾಗಕ್ಕೆ ಅಷ್ಟೇ ಕೊಡುಗೆ:

ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರು ಹಳೆ ಮೈಸೂರು ಭಾಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ. ತುಬಚಿ ಬಬಲೇಶ್ವರಕ್ಕೆ 3600 ಕೋಟಿ ರೂ. ಮೀಸಲಿಟ್ಟು, ಹಲವು ಗ್ಯಾರಂಟಿ ಯೋಜನೆಗಳ ಮೂಲಕ ದೊಡ್ಡ ಕೊಡುಗೆ ನೀಡಿದ್ದಾರೆ. 2013-18ರ ಅವಧಿಯಿಂದ ಹಿಡಿದು ಈಗಲೂ ಅವರು ಜನಸೇವೆ ಮಾಡುತ್ತಿದ್ದಾರೆ. ಇಬ್ಬರೂ ತಮ್ಮ ರೀತಿಯಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ, ಎಂದು ಪಾಟೀಲ್ ಹೇಳಿದರು.

ರಸಗೊಬ್ಬರ ಕೊರತೆ, ಕೇಂದ್ರದ ವೈಫಲ್ಯ:

ರಾಜ್ಯದಲ್ಲಿ ರಸಗೊಬ್ಬರ ಕೊರತೆ ವಿಚಾರಕ್ಕೆ ಸಂಬಂಧಿಸಿ, ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದ ಪಾಟೀಲ್, ಜಿಲ್ಲೆಯಲ್ಲಿ ಬೇಡಿಕೆಗಿಂತ ಪೂರೈಕೆ ಕಡಿಮೆ ಇದೆ. ಇದು ಯಾರ ವೈಫಲ್ಯ? ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಕೇಳಬೇಕು. ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಮತ್ತು ಹೆಚ್ಚಿನ ಬೆಲೆ ವಿಧಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಎಚ್ಚರಿಸಿದರು.

ಸುರ್ಜೇವಾಲಾ ಸಭೆ ವಿವಾದಕ್ಕೆ ಸ್ಪಷ್ಟನೆ:

ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಪಾಟೀಲ್, ಸುರ್ಜೇವಾಲಾ ಅಧಿಕಾರಿಗಳ ಜೊತೆ ಸಭೆ ಮಾಡಿಲ್ಲ. ಅವರು ಕಾಂಗ್ರೆಸ್ ಶಾಸಕರು ಮತ್ತು ಸಚಿವರೊಂದಿಗೆ ಮಾತ್ರ ಮಾತನಾಡಿದ್ದಾರೆ. ಇದರಲ್ಲಿ ತಪ್ಪೇನಿದೆ? ಬಿಜೆಪಿ ಮುಖಂಡರು ಬಂದಾಗ ಅವರೂ ಸಭೆಗಳನ್ನು ನಡೆಸುತ್ತಾರೆ, ಅದು ಸಾಮಾನ್ಯ, ಎಂದು ತಿರುಗೇಟು ನೀಡಿದರು.

ನಕಲಿ ಮತದಾನ ರಾಹುಲ್ ಗಾಂಧಿ ಆರೋಪಕ್ಕೆ ಬೆಂಬಲ:

ರಾಹುಲ್ ಗಾಂಧಿ ಅವರ ನಕಲಿ ಮತದಾನ ಆರೋಪದ ಕುರಿತು ಮಾತನಾಡಿದ ಪಾಟೀಲ್, ರಾಹುಲ್ ಗಾಂಧಿಯವರಿಗೆ ಈ ವಿಚಾರದಲ್ಲಿ ಸಂಪೂರ್ಣ ಮಾಹಿತಿ ಇದೆ. ಅದಕ್ಕೆ ಅವರು ಆರೋಪ ಮಾಡಿದ್ದಾರೆ. ಈ ಬಗ್ಗೆ ಬಹಿರಂಗಪಡಿಸುವುದಾಗಿ ಹೇಳಿದ್ದಾರೆ, ಕಾದು ನೋಡಿ ಎಂದರು. ಈ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಕದನ ತೀವ್ರಗೊಂಡಿದೆ.