ಮ್ಮು-ಕಾಶ್ಮೀರದ ವೈಷ್ಣೋದೇವಿ ನವರಾತ್ರಿ ಉತ್ಸವದ ವೇಳೆ ಇದೇ ಮೊದಲ ಬಾರಿಗೆ ತೆಂಕುತಿಟ್ಟಿನ ‘ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

 ಮಂಗಳೂರು (ಅ.12) :  ಜಮ್ಮು-ಕಾಶ್ಮೀರದ ವೈಷ್ಣೋದೇವಿ ನವರಾತ್ರಿ ಉತ್ಸವದ ವೇಳೆ ಇದೇ ಮೊದಲ ಬಾರಿಗೆ ತೆಂಕುತಿಟ್ಟಿನ ‘ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟ್‌ ಮುಖ್ಯಸ್ಥ, ಭಾಗವತ ಪಟ್ಲ ಸತೀಶ್‌ ಶೆಟ್ಟಿ ನೇತೃತ್ವದಲ್ಲಿ ಅವರದೇ ಮೇಲುಸ್ತುವಾರಿಯ ಪಾವಂಜೆ ಶ್ರೀಜ್ಞಾನಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದರು ಯಕ್ಷಗಾನ ಪ್ರದರ್ಶನ ನೀಡಲಿದ್ದಾರೆ. ವೈಷ್ಣೋದೇವಿ ಯಾತ್ರಾಸ್ಥಳದ ಬೇಸ್‌ ಕ್ಯಾಂಪ್‌ ಜಮ್ಮುವಿನ ಕಾಟ್ರಾದಲ್ಲಿ ಉತ್ಸವ ನಡೆಯಲಿದ್ದು, ಯಕ್ಷಗಾನ ಸಂಪೂರ್ಣ ಹಿಂದಿ ಭಾಷೆಯಲ್ಲಿ ಪ್ರದರ್ಶನಗೊಳ್ಳಲಿದೆ. ಜಮ್ಮು-ಕಾಶ್ಮೀರ ಸರ್ಕಾರವೇ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿರುವುದು ಗಮನಾರ್ಹ.

ಸಾಕ್ಷಾತ್ ಗೌರಿ ಗಣೇಶ ಕೈಲಾಸದಿಂದ ಧರೆಗಿಳಿದಂತೇ ಭಾಸವಾಗುತ್ತೆ ಸುಪ್ರಸಿದ್ಧ ಕಲಾವಿದ ಜಿ. ಡಿ. ಭಟ್ ಕೈಚಳಕ

ನವರಾತ್ರಿ ಆರಂಭದ ಉದ್ಘಾಟನೆಯ ದಿನವೇ, ಅ.15ರಂದು ಸಂಜೆ 7ರಿಂದ 2 ಗಂಟೆ ಕಾಲ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸರ್ಪಂಗಳ ಈಶ್ವರ ಭಟ್ ಹಿಂದಿಯಲ್ಲಿ ಪದ್ಯ ರಚಿಸಿದ್ದು, ಪ್ರೊ.ಪವನ್ ಕಿರಣ್‌ಕೆರೆ ಅರ್ಥವನ್ನು ಬರೆದಿದ್ದಾರೆ. ಪಟ್ಲ ಸತೀಶ್‌ ಶೆಟ್ಟಿ ನೇತೃತ್ವದ 15 ಮಂದಿಯ ತಂಡ ಅ.14ರಂದು ಮಂಗಳೂರಿನಿಂದ ಜಮ್ಮು ತಲುಪಲಿದೆ.

ಶ್ರೀನಗರದಲ್ಲಿನ ಪ್ರದರ್ಶನ ಫಿದಾ: ಅ.2ರಂದು ಗಾಂಧಿ ಜಯಂತಿ ಆಚರಣೆ ವೇಳೆ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಇದೇ ತಂಡದಿಂದ ಹಿಂದಿ ಭಾಷೆಯಲ್ಲಿ ‘ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆದಿತ್ತು. ಇದು ಮೆಚ್ಚುಗೆ ಗಳಿಸಿತ್ತು.

ಶ್ರೀನಗರದ ಶೇರ್‌-ಇ-ಕಾಶ್ಮೀರ್‌ ಇಂಟರ್‌ ನ್ಯಾಷನಲ್‌ ಕಾನ್ಫರೆನ್ಸ್‌ ಸೆಂಟರ್‌ನಲ್ಲಿ ನಡೆದಿದ್ದ ಪ್ರದರ್ಶನದ ವೇಳೆ ಅಲ್ಲಿನ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್ ಸಿನ್ಹಾ ಹಾಜರಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ, ವೈಷ್ಣೋದೇವಿಯಲ್ಲಿ ನವರಾತ್ರಿಗೆ ನಡೆಯುವ ಉತ್ಸವದಲ್ಲೂ ಇದೇ ಯಕ್ಷಗಾನವನ್ನು ಪ್ರದರ್ಶಿಸುವಂತೆ ಆಗಲೇ ಆಹ್ವಾನ ನೀಡಿದ್ದರು.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ತಂಡದ ಮುಖ್ಯಸ್ಥ ಪಟ್ಲ ಸತೀಶ್‌ ಶೆಟ್ಟಿ, ಭಾರತದ ಮುಕುಟಕ್ಕೆ ಯಕ್ಷಗಾನ ತಲುಪಿದೆ. ಅಲ್ಲಿಯೂ ಯಕ್ಷಗಾನ ಪ್ರೀತಿಸುವವರು ಇದ್ದಾರೆ ಎಂಬುದಕ್ಕೆ ಮತ್ತೊಮ್ಮೆ ಆಹ್ವಾನ ಬಂದಿರುವುದು ಸಾಕ್ಷಿ. ಒಂದೇ ವಾರದಲ್ಲಿ ಮತ್ತೊಮ್ಮೆ ನಮ್ಮ ಕಲಾವಿದರು ಜಮ್ಮುವಿಗೆ ತೆರಳುತ್ತಿದ್ದಾರೆ. ಅದು ಕೂಡ ಅಲ್ಲಿನ ಸರ್ಕಾರವೇ ಆಹ್ವಾನಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಮನಸ್ವಿ ಕುಲಾಲ್ ಜೀವನದ ಮೌಲ್ಯ ತಿಳಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ !

ಹಿಮ್ಮೇಳದಲ್ಲಿ ಪಟ್ಲ ಸತೀಶ್‌ ಶೆಟ್ಟಿ, ಗುರುಪ್ರಸಾದ್‌ ಬೊಳಿಂಜಡ್ಕ, ಪ್ರಶಾಂತ್‌, ಮುಮ್ಮೇಳದಲ್ಲಿ ರಾಧಾಕೃಷ್ಣ ನಾವಡ, ಅಕ್ಷಯ ಕುಮಾರ್‌ ಮಾರ್ನಾಡ್‌, ಮವ್ವಾರು ಬಾಲಕೃಷ್ಣ ಮಣಿಯಾಣಿ, ಮೋಹನ ಬೆಳ್ಳಿಪ್ಪಾಡಿ, ರಾಕೇಶ್‌ ರೈ ಅಡ್ಕ, ಲೋಕೇಶ್‌ ಮುಚ್ಚೂರು, ಮಾಧವ ಬಂಗೇರ, ಸಚಿನ್‌ ಉದ್ಯಾವರ, ರಾಜೇಶ್‌ ನಿಟ್ಟೆ, ದಿವಾಕರ ಕಾಣಿಯೂರು, ಭುವನ ಮೂಡುಜೆಪ್ಪು, ಮಧುರಾಜ್‌ ಪೆರ್ಮುದೆ ಮತ್ತಿತರರಿದ್ದಾರೆ.