ಯಕ್ಷಗಾನ ಕಲಾವಿದರ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ನೀಡಿದ್ದ ವಿವಾದಾತ್ಮಕ ಹೇಳಿಕೆ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಶಾಸಕ ಸುನೀಲ್ ಕುಮಾರ್ ಸರ್ಕಾರದ ಕ್ರಮ ಪ್ರಶ್ನಿಸಿದರೆ, ಸಚಿವ ತಂಗಡಗಿ ಆ ವಿಷಯ ದೊಡ್ಡದು ಮಾಡೋದು ಸರಿಯಲ್ಲ ಎಂದರು.ಕೊಂಡರು.
ಬೆಳಗಾವಿ (ಡಿ.10): ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಪುರುಷೋತ್ತಮ ಬಿಳಿಮಲೆ ಅವರು ಯಕ್ಷಗಾನ ಕಲಾವಿದರ ಕುರಿತು ನೀಡಿದ್ದ ವಿವಾದಾತ್ಮಕ ಹೇಳಿಕೆ ವಿಚಾರ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ಕ್ರಮದ ಬಗ್ಗೆ ಪ್ರಶ್ನಿಸಿದರು
ಒಂದು ನೋಟಿಸ್ ನೀಡೋಕೂ ನಿಮಗೆ ಕಷ್ಟವೇ?
ಶಾಸಕ ಸುನೀಲ್ ಕುಮಾರ್ ಅವರು ಈ ವಿಚಾರವನ್ನು ಪ್ರಸ್ತಾಪಿಸಿ, 'ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಕರಾವಳಿಯ ಜನಪದ ಕಲಾವಿದರಾದ ಯಕ್ಷಗಾನ ಕಲಾವಿದರ ಬಗ್ಗೆ ಅತ್ಯಂತ ಅಪಮಾನಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಅವರ ಮೇಲೆ ಸರ್ಕಾರ ಯಾವ ಕ್ರಮ ಜರುಗಿಸಿದೆ? ಎಂದು ಪ್ರಶ್ನಿಸಿದರು. ಅಲ್ಲದೆ, ಅಂತಹ ವ್ಯಕ್ತಿಯ ವಿರುದ್ಧ ಒಂದು ನೋಟೀಸ್ ನೀಡಲು ಕೂಡ ನಿಮಗೆ ಕಷ್ಟವೇ? ಎಂದು ಸರ್ಕಾರದ ನಿಲುವಿನ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಆ ವಿಷಯ ದೊಡ್ಡದು ಮಾಡೋದು ಸರಿಯಲ್ಲ:
ಬಿಜೆಪಿ ಶಾಸಕರ ಪ್ರಶ್ನೆಗೆ ಉತ್ತರ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಈಗಾಗಲೇ ಪುರುಷೋತ್ತಮ ಬಿಳಿಮಲೆ ಅವರು ತಮ್ಮ ಹೇಳಿಕೆ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ಈ ವಿಚಾರವನ್ನು ಮತ್ತೆ ದೊಡ್ಡದು ಮಾಡುವುದು ಸರಿಯಲ್ಲ ಎಂದು ಹೇಳಿದರು. ಬಿಳಿಮಲೆ ಅವರನ್ನು ಸಮರ್ಥಿಸಿಕೊಂಡ ಸಚಿವರು, 'ಬಿಳಿಮಲೆಯವರು ತುಂಬಾ ಅನುಭವ ಇರುವವರು. ಅವರನ್ನು ಕರೆದು ನಾನು ಮಾತನಾಡಿದ್ದೇನೆ' ಎಂದು ಸದನಕ್ಕೆ ಮಾಹಿತಿ ನೀಡಿದರು.
ಬಿಳಿಮಲೆ ಹೇಳಿಕೆ ವಿವಾದ:
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಯಕ್ಷಗಾನದ ಸ್ತ್ರೀ ವೇಷಧಾರಿ ಕಲಾವಿದರ ನಡುವಿನ ಸಲಿಂಗಕಾಮ ಸಂಬಂಧಗಳ ಕುರಿತು ನೇರವಾಗಿ ಮತ್ತು ಬಹಿರಂಗವಾಗಿ ಹೇಳಿಕೆ ನೀಡಿ ತೀವ್ರ ವಿವಾದಕ್ಕೆ ಕಾರಣರಾಗಿದ್ದರು. ಅವರ ಈ ಹೇಳಿಕೆಯು ಯಕ್ಷಗಾನ ಕಲಾವಿದರು ಮತ್ತು ಕಲಾರಸಿಕ ವಲಯದಲ್ಲಿ ದೊಡ್ಡ ಮಟ್ಟದ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿತ್ತು.


