Belagavi session: ವಿಧಾನಸಭೆಯಲ್ಲಿ ವಿಪಕ್ಷದ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ಸರ್ಕಾರದ ನಾಯಕತ್ವ ಬಿಕ್ಕಟ್ಟಿನ ಬಗ್ಗೆ ಪ್ರಸ್ತಾಪಿಸಿ, ಆಡಳಿತ ಯಂತ್ರ ಕುಸಿದಿದೆ ಎಂದು ಆರೋಪಿಸಿದರು. 'ಕಿಂಗ್ ಅಲೈವ್' ಹೇಳಿಕೆ ಉಲ್ಲೇಖಿಸಿದಾಗ, ಸಚಿವ ಬೈರತಿ ಸುರೇಶ್, ಪ್ರಿಯಾಂಕ್ ಖರ್ಗೆ ತೀವ್ರ ತಿರುಗೇಟು ನೀಡಿದರು,
ಬೆಂಗಳೂರು (ಡಿ.10): ಇಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ನೇರ ದಾಳಿ ನಡೆಸಿದ್ದು, ಆಡಳಿತ ಪಕ್ಷದಲ್ಲಿರುವ ನಾಯಕತ್ವದ ಬಿಕ್ಕಟ್ಟಿನ ಪ್ರಶ್ನೆಯನ್ನು ಪ್ರಸ್ತಾಪಿಸಿದರು. ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ, ಸಮರ್ಥ ನಾಯಕತ್ವ ಇಲ್ಲದಿದ್ದರೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು 'ಗೋವಿಂದ' ಎಂದು ಹರಿಹಾಯ್ದರು.
ಸಿಎಂ ಕುರ್ಚಿ ಬದಲಾವಣೆ ವಿಚಾರದ ಪ್ರಸ್ತಾಪ:
ಸದನದಲ್ಲಿ ಸಿಎಂ ಕುರ್ಚಿ ಬದಲಾವಣೆ ವಿಚಾರ ಪ್ರಸ್ತಾಪಿಸಿದ ಆರ್ ಅಶೋಕ್, 'ನನ್ನ ಕಣ್ಣೆದುರೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುಳಿತಿದ್ದಾರೆ. ಆದರೆ ಪದೇ ಪದೇ ಕಾಂಗ್ರೆಸ್‌ನಲ್ಲಿ ನಾಯಕತ್ವದ ಬಗ್ಗೆಯೇ ಗಲಾಟೆ ನಡೆಯುತ್ತಿದೆ' ಎಂದು ದೂರಿದರು.
ಅಶೋಕ್ ಅವರು ಇತ್ತೀಚೆಗೆ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿಯವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಉದ್ದೇಶಿಸಿ 'ಮುಖ್ಯಮಂತ್ರಿ' ಎಂದು ಸ್ವಾಗತಿಸಿ ಹಾಕಿದ್ದ ಮೆಸೇಜ್ ಅನ್ನು ಉಲ್ಲೇಖಿಸಿ ಕಾಲೆಳೆದರು. 'ಕಣ್ತಪ್ಪಿನಿಂದ ಆಗಿದೆ ಎಂದು ಸಮರ್ಥನೆ ಕೊಡಲಾಗುತ್ತಿದೆ. ಆದರೆ ಈ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ಕೊಡಬೇಕು' ಎಂದು ಆರ್ ಅಶೋಕ್ ಆಗ್ರಹಿಸಿದರು.
"ಕಿಂಗ್ ಅಲೈವ್" ಹೇಳಿಕೆ ಪ್ರಸ್ತಾಪಿಸಿ ಟೀಕೆ:
'ಪದೇ ಪದೇ ನಾಯಕತ್ವ ವಿಚಾರ ಮಾಡ್ತಾರೆ. ಬೈರತಿ ಸುರೇಶ್ ಕೂಡ 'ಕಿಂಗ್ ಅಲೈವ್' (King is Alive) ಅಂತಾರೆ. ರಾಜ್ಯದಲ್ಲಿ ಈ ವಿಚಾರದಲ್ಲಿ ಡೌಟ್ ಬಂದಿದೆ. ಇದರಿಂದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಆಡಳಿತ ಯಂತ್ರ ಕುಸಿದು ಹೋಗಿದೆ' ಎಂದು ಆರ್. ಅಶೋಕ್ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಕೆಣಕಿದರು.
ಬೈರತಿ ಸುರೇಶ್ ಗರಂ, ತಿರುಗೇಟು:
ತಮ್ಮ ಹೆಸರನ್ನು ಪ್ರಸ್ತಾಪಿಸುತ್ತಿದ್ದಂತೆ ಮಧ್ಯಪ್ರವೇಶಿಸಿದ ಸಚಿವ ಬೈರತಿ ಸುರೇಶ್ ಅವರು ಆರ್ ಅಶೋಕ್‌ಗೆ ತಿರುಗೇಟು ನೀಡಿದರು. 'ಹೌದು, ನಾನು ಕಿಂಗ್ ಈಸ್ ಅಲೈವ್ ಅಂತ ಹೇಳಿದ್ದೆ. ಮುಖ್ಯಮಂತ್ರಿ ಇದ್ದಾರೆ, ಹೈಕಮಾಂಡ್ ಇದೆ. ನಾನು ಕಾಂಗ್ರೆಸ್ ಪಕ್ಷಕ್ಕೆ ನಿಯತ್ತು. ನಾನು ಸಿದ್ದರಾಮಯ್ಯ ಸಾಹೇಬ್ರಿಗೆ ನಿಯತ್ತು. ಮೊದಲು ನಿಮ್ಮ ತಟ್ಟೆಯ ಹೆಗ್ಗಣ ನೋಡಿಕೊಳ್ಳಿ. ಸುಮ್ಮನೆ ಏನೇನೋ ಮಾತಾಡಬೇಡಿ. ನಿಮ್ಮ ಅಧ್ಯಕ್ಷರನ್ನೇ ಚೇಂಜ್ ಮಾಡ್ತೇವೆ ಅಂತಿದ್ದೀರಲ್ಲ, ಮೊದಲು ನಿಮ್ಮದನ್ನ ಸರಿಮಾಡಿ' ಎಂದು ಗುಡುಗಿದರು.
ಪ್ರಿಯಾಂಕ್ ಖರ್ಗೆಯಿಂದ ಟಾಂಗ್:
ಆರ್ ಅಶೋಕ್ ಮತ್ತೆ ವಿಷಯ ಪ್ರಸ್ತಾಪಿಸಿದಾಗ, ಸಚಿವ ಪ್ರಿಯಾಂಕ್ ಖರ್ಗೆ ಮಧ್ಯಪ್ರವೇಶಿಸಿ 'ನಿಮ್ಮ ಅವಧಿಯಲ್ಲಿ ಐವರನ್ನ ಚೇಂಜ್ ಮಾಡಿದ್ರಿ. ಯಡಿಯೂರಪ್ಪನವರನ್ನ ಕೆಳಗಿಳಿಸಿದ್ರಿ' ಎಂದು ನೆನಪಿಸಿ ಆರ್ ಅಶೋಕ್ ಮಾತಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.


