ಪ್ರಸಿದ್ಧ ಸ್ತ್ರೀವೇಷಧಾರಿ ಕೋಡಿ ಕೃಷ್ಣ ಗಾಣಿಗ (78) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಬಡಗು ಮತ್ತು ತೆಂಕುತಿಟ್ಟಿನಲ್ಲಿ ಮೂರುವರೆ ದಶಕಗಳ ಕಾಲ ಕಲಾಸೇವೆ ಸಲ್ಲಿಸಿದ್ದ ಕಲಾವಿದರಿಗೆ ಇತ್ತೀಚೆಗೆ ಸುವರ್ಣ ಪುರಸ್ಕಾರ ಲಭಿಸಿತ್ತು.

ಕುಂದಾಪುರ (ಜೂ.14): ತೆಂಕು, ಬಡಗು ಉಭಯತಿಟ್ಟುಗಳ ಹಿರಿಯ ಪ್ರಸಿದ್ಧ ಸ್ತ್ರೀವೇಷಧಾರಿ ಕೋಡಿ ಕೃಷ್ಣ (ಕುಷ್ಠ) ಗಾಣಿಗ (78) ಗುರುವಾರ ಇಲ್ಲಿನ ಕೋಡಿಯಲ್ಲಿರುವ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಅಭಿಮಾನಿ ವರ್ಗವನ್ನು ಅಗಲಿದ್ದಾರೆ.ಹೆರಂಜಾಲು ವೆಂಕಟರಮಣ ಗಾಣಿಗರಿಂದ ಬಡಗುತಿಟ್ಟಿನ ಹೆಜ್ಜೆಗಾರಿಕೆಯನ್ನು, ಪಡ್ರೆ ಚಂದು ಅವರಿಂದ ತೆಂಕುತಿಟ್ಟಿನ ನಾಟ್ಯಭ್ಯಾಸವನ್ನು ಕಲಿತು, ಓರ್ವ ಪ್ರಸಿದ್ಧ ಸ್ತ್ರೀ ವೇಷಧಾರಿಯಾಗಿ ಕಲಾಭಿಮಾನಿಗಳ ಅಭಿಮಾನಕ್ಕೆ ಪಾತ್ರರಾಗಿದ್ದರು.

ದೇವಿ, ನಂದಿನಿ, ಸುಭದ್ರೆ, ಮಂಡೋದರಿ, ದ್ರೌಪದಿ, ಕಯಾದು, ಸೀತೆ, ಅಂಬೆ, ದಮಯಂತಿ, ಮಾಯಾಪೂತನಿ, ಮಾಯಾಶೂರ್ಪನಖಿ, ಚಂದ್ರಮತಿ ಹೀಗೆ ಸ್ತ್ರೀಪಾತ್ರದ ನವರಸಗಳಲ್ಲಿಯೂ ನಿಸ್ಸೀಮರಾಗಿದ್ದರು. ಪುರುಷ ವೇಷಗಳಾದ ಪರಶುರಾಮ, ವಿಷ್ಣು, ಕೃಷ್ಣ ಪಾತ್ರಗಳನ್ನು ಮಾಡುತ್ತಿದ್ದರು. ಇವರು ಅಮೃತೇಶ್ವರಿ, ಮಾರಣಕಟ್ಟೆ, ಕಲಾವಿಹಾರ ಮೇಳ, ರಾಜರಾಜೇಶ್ವರಿ ಮೇಳ ಹಾಗೂ ಸುದೀರ್ಘವಾಗಿ ಕಟೀಲು ಮೇಳದಲ್ಲಿ ಒಟ್ಟು ಮೂರುವರೆ ದಶಕಗಳ ಕಾಲ ತಿರುಗಾಟವನ್ನು ಮಾಡಿದ್ದಾರೆ.

ಮೇ 31ರಂದು 50 ಹಿರಿಯ ಸಾಧಕ ಕಲಾವಿದರಿಗೆ ನೀಡಲ್ಪಟ್ಟ, ಐವತ್ತು ಸಾವಿರ ಮೊತ್ತವನ್ನೊಳಗೊಂಡ ಸುವರ್ಣ ಪುರಸ್ಕಾರಕ್ಕೆ ಭಾಜನರಾದ ಕೋಡಿ ಕುಷ್ಟ ಗಾಣಿಗರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.