Asianet Suvarna News Asianet Suvarna News

ಮೈಸೂರು ದಸರಾ: ಯದುವೀರ್‌ 7ನೇ ಖಾಸಗಿ ದರ್ಬಾರ್‌

*  ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಆರಂಭ
*  ಕಂಕಣ ಧರಿಸಿರುವ ಯದುವೀರರಿಂದ ನಿತ್ಯವೂ ಚಾಮುಂಡೇಶ್ವರಿ ಪಾರಾಯಣ 
*  ಖಾಸಗಿ ದರ್ಬಾರ್‌ನಲ್ಲಿ ಭಾಗವಹಿಸಿದ್ದ ಪಟ್ಟದ ಆನೆಗಳು, ಒಂಟೆಗಳ ಸಾಂಪ್ರದಾಯಿಕ ಮೆರವಣಿಗೆ
 

Yaduveer Krishnadatta Chamaraja Wadiyar Held 7th Private Darbar in Mysuru Palace grg
Author
Bengaluru, First Published Oct 8, 2021, 10:31 AM IST

ಬಿ. ಶೇಖರ್‌ಗೋಪಿನಾಥಂ

ಮೈಸೂರು(ಅ.08): ವಿಶ್ವವಿಖ್ಯಾತ ದಸರಾ ಮಹೋತ್ಸವ ಪ್ರಯುಕ್ತ ಮೈಸೂರು ಅರಮನೆಯಲ್ಲಿ(Mysuru Palace) ರಾಜವಂಶಸ್ಥರ ಖಾಸಗಿ ದರ್ಬಾರ್‌ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಗುರುವಾರ ಆರಂಭವಾಯಿತು. ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿ ಸಹ ಖಾಸಗಿ ದರ್ಬಾರ್‌ಗೆ ರಾಜವಂಶಸ್ಥರು, ಸಂಪ್ರದಾಯಂತೆ ನಡೆಯುವ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗವಹಿಸುವ ಪುರೋಹಿತರು, ಅರಮನೆ ಸಿಬ್ಬಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ.

ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌(Yaduveer Krishnadatta Chamaraja Wadiyar) ಅವರು ಸಂಪ್ರದಾಯದಂತೆ 7ನೇ ಬಾರಿಗೆ ಸಿಂಹಾಸನಾರೋಹಣ ಮಾಡುವ ಮೂಲಕ ಖಾಸಗಿ ದರ್ಬಾರ್‌ನಡೆಸಿದರು. ಯದುವೀರ ಅವರಿಗೆ ಪತ್ನಿ ತ್ರಿಷಿಕಾ ಕುಮಾರಿ, ಪುತ್ರ ಆದ್ಯವೀರ್‌, ತಾಯಿ ಪ್ರಮೋದಾದೇವಿ ಒಡೆಯರ್‌, ಕುಟುಂಬ ವರ್ಗದವರು, ಅರಮನೆಯ ಸಿಬ್ಬಂದಿ ಸಾಥ್‌ ನೀಡಿದರು. 

ದಸರಾ(Dasara) ಮೊದಲ ದಿನ ಎಣ್ಣೆ ಮಜ್ಜನ ಮುಗಿಸಿ ಬಂದ ಯದುವೀರ ಅವರಿಗೆ ಪತ್ನಿ ತ್ರಿಷಿಕಾ ಕುಮಾರಿ ಪಾದಪೂಜೆ ನೆರವೇರಿಸುವರು. ನಂತರ ರಾಜವಂಶಸ್ಥರ ಸಂಪ್ರದಾಯದಂತೆ ದರ್ಬಾರ್‌ಹಾಲ್‌ಗೆ ಯದುವೀರ ಆಗಮಿಸಿ, ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಸಿಂಹಾಸನ ಅಲಂಕರಿಸುತ್ತಿದ್ದಂತೆಯೇ ಬಹುಪರಾಕ್‌ ಮೊಳಗಿತು.

ನಾಡಹಬ್ಬ ಮೈಸೂರು ದಸರಾ ಆರಂಭ : ಉದ್ಘಾಟಿಸಿದ ಎಸ್‌.ಎಂ.ಕೃಷ್ಣ

ವಿವಿಧ ಧಾರ್ಮಿಕ ಆಚರಣೆ

ಚಾಮುಂಡಿ ಬೆಟ್ಟದಲ್ಲಿ ರಾಜ್ಯ ಸರ್ಕಾರ ಆಯೋಜಿಸಿರುವ ದಸರಾ ಮಹೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ಮೈಸೂರು(Mysuru) ಅರಮನೆಯಲ್ಲಿ ರಾಜಮನೆತನದ ಖಾಸಗಿ ದರ್ಬಾರ್‌ ಸಹ ಆರಂಭವಾಯಿತು. ಗುರುವಾರ ಬೆಳಗ್ಗೆ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಯಿತು. ನಂತರ ಶುಭ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಗೆ ಕಂಕಣಧಾರಣೆ, ಕಳಸ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆ ನೆರವೇರಿತು. ನಂತರ ರಾಜ ಪೋಷಾಕಿನಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಖಾಸಗಿ ದರ್ಬಾರ್‌ ಆರಂಭಿಸುತ್ತಿದ್ದಂತೆ ಗತ ಕಾಲದ ರಾಜರ ವೈಭವವು ಅರಮನೆಯಲ್ಲಿ ಮರುಕಳಿಸಿತು.

ಖಾಸಗಿ ದರ್ಬಾರ್‌ ಅಂಗವಾಗಿ ಕಾಡಿನಿಂದ ನಾಡಿಗೆ ಆಗಮಿಸಿರುವ ಧನಂಜಯ ಮತ್ತು ಗೋಪಾಲಸ್ವಾಮಿ ಆನೆಗಳು ಅರಮನೆ ಖಾಸಗಿ ದರ್ಬಾರ್‌ನಲ್ಲಿ ಪಟ್ಟಣದ ಆನೆಗಳಾಗಿ ಪಾಲ್ಗೊಂಡಿದ್ದವು. ವಿಕ್ರಮ ಆನೆ ಮಸ್ತಿಗೆ ಬಂದಿರವ ಹಿನ್ನೆಲೆಯಲ್ಲಿ ವಿಕ್ರಮ ಆನೆ ಬದಲು ಈ ಬಾರಿ ಗೋಪಾಲಸ್ವಾಮಿ ಆನೆಯು ಪಟ್ಟದ ಆನೆಯಾಗಿ ಜವಾಬ್ದಾರಿ ನಿರ್ವಹಿಸಿತು.

ಅರಮನೆಯಲ್ಲಿ ಪಟ್ಟದ ಆನೆಗಳಿಗೆ ಸೊಂಡಲು, ಕಿವಿ, ಕಾಲುಗಳು, ದೇಹಕ್ಕೆ ವಿವಿಧ ಬಣ್ಣಗಳಿಂದ ಅಲಂಕಾರ ಮಾಡಲಾಗಿತ್ತು. ಸೊಂಡಿಲಿನ ಭಾಗಕ್ಕೆ ಗಂಡಭೇರುಂಡ ಚಿಹ್ನೆ ಬರೆಯಲಾಗಿತ್ತು. ಅಲಂಕಾರದ ನಂತರ ಕೋಡಿ ಸೋಮೇಶ್ವರ ದೇವಾಲಯದಿಂದ ಪಟ್ಟದ ಆನೆ, ಪಟ್ಟದ ಕುದುರೆ, ಒಂಟೆ, ಪಟ್ಟದ ಹಸುವನ್ನು ಸವಾರಿ ತೊಟ್ಟಿಗೆ ಕರೆ ಕಂದು ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ಕಳೆದ ಬಾರಿ 15 ನಿಮಿಷಕ್ಕೆ ಮುಗಿದಿತ್ತು!

ಕಳೆದ ಬಾರಿ ಕೋವಿಡ್‌(Covid19) ಹಿನ್ನೆಲೆಯಲ್ಲಿ ರಾಜವಂಶಸ್ಥರ ಖಾಸಗಿ ದರ್ಬಾರ್‌ 15 ನಿಮಿಷಗಳಲ್ಲೇ ಮುಗಿದಿತ್ತು. ಖಾಸಗಿ ದರ್ಬಾರ್‌ ಕೇವಲ ದರ್ಬಾರ್‌ ಹಾಲ್‌ಗೆ ಸೀಮಿತವಾಗಿತ್ತು. ಬೆರಳಣಿಕೆಯಷ್ಟೇ ಪುರೋಹಿತರ ಸಮ್ಮುಖದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ಅವರು ಖಾಸಗಿ ದರ್ಬಾರ್‌ವಿಧಿ ವಿಧಾನಗಳನ್ನು ಪೂರೈಸಿದ್ದರು. ಆದರೆ, ಈ ಬಾರಿ ಕೋವಿಡ್‌ಆತಂಕ ಸ್ವಲ್ಪ ಮಟ್ಟಿಗೆ ದೂರವಾಗಿರುವ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಖಾಸಗಿ ದರ್ಬಾರ್‌ಜರುಗಿತು.

ದಸರಾ ಗೊಂಬೆ ಪ್ರದರ್ಶನ: ಜನಮನ ಸೆಳೆಯುತ್ತಿದೆ ಬೊಂಬೆ ಮನೆ

ಖಾಸಗಿ ದರ್ಬಾರ್‌ನಲ್ಲಿ ಏನೇನಿರುತ್ತದೆ?

ದಸರಾ ಅಂಗವಾಗಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಪ್ರತಿದಿನ ಸಂಜೆ ರಾಜ ಪೋಷಾಕಿನಲ್ಲಿ ಸಿಂಹಾಸನರೂಢರಾಗಿ ಖಾಸಗಿ ದರ್ಬಾರ್‌(Private Darbar) ನಡೆಸಲಿದ್ದು, ಇದೇ ವೇಳೆ ವಿವಿಧ ಸಾಂಪ್ರದಾಯಿಕ ಸರಸ್ವತಿ ಪೂಜೆ ಸೇರಿದಂತೆ ವಿವಿಧ ಪೂಜೆ ಪುನಸ್ಕಾರಗಳು ನಡೆಯಲಿದೆ.

ಆಯುಧ ಪೂಜೆಯಂದು ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ, ಆಯುಧಪೂಜೆ ನಡೆಸುವ ಯದುವೀರ ಅವರು ವಿಜಯದಶಮಿಯಂದು ಬೆಳ್ಳಿ ರಥದಲ್ಲಿ ಅರಮನೆ ಆವರಣದಲ್ಲಿ ಮೆರವಣಿಗೆ ನಡೆಸುವರು. ಜೊತೆಗೆ ಅರಮನೆ ಕೋಟೆ ಆವರಣದಲ್ಲಿರುವ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವರು.

ಕಂಕಣ ಧರಿಸಿರುವ ಯದುವೀರ ಅವರು ನಿತ್ಯವೂ ಚಾಮುಂಡೇಶ್ವರಿ ಪಾರಾಯಣ ಮಾಡುತ್ತಾರೆ. ನವರಾತ್ರಿ ಕೊನೆ ದಿನ ಅಂತಿಮ ಪೂಜೆ ಇರುತ್ತದೆ. ವಿಜಯದಶಮಿಯಂದು ವಿಜಯದ ಸಂಕೇತವಾಗಿ ಮರದ ಮಹಿಷನನ್ನು ಸಿದ್ಧಪಡಿಸಿ, ಕುಂಕುಮ ನೀರು ಬೆರೆಸಿದ ದ್ರವ ಬಳಿದು ದುರ್ಗಾ ಪೂಜೆ ಬಳಿಕ ಬಲಿ ಕೊಡಲಾಗುತ್ತದೆ. ಇದನ್ನು ಮಹಿಷಾಸುರನ ಸಂಹಾರ ಎಂದು ನಂಬಲಾಗುತ್ತದೆ. ನಂತರವಷ್ಟೇ ಅರಮನೆ ಆವರಣದಲ್ಲಿ ಸರ್ಕಾರಿ ದಸರಾ ಮಹೋತ್ಸವದ ಜಂಬೂಸವಾರಿಗೆ ಚಾಲನೆ ಸಿಗುತ್ತದೆ.
 

Follow Us:
Download App:
  • android
  • ios