ರಸಗೊಬ್ಬರಕ್ಕಾಗಿ ರೈತರ ಪರದಾಟ ಮುಂದುವರೆದಿದ್ದು, ಯಾದಗಿರಿ ಜಿಲ್ಲೆ ಶಹಾಪುರದ ಅಂಗಡಿಗಳೆದುರು ರೈತರು ಕುಟುಂಬ ಸಮೇತ ರಾತ್ರಿಯಿಂದ ಬೆಳಗಿನವರೆಗೂ ಜಾಗರಣೆ ನಡೆಸುವ ದುಸ್ಥಿತಿ ನಿರ್ಮಾಣವಾಗಿದೆ.

ಶಹಾಪುರ / ಗುಂಡ್ಲುಪೇಟೆ (ಆ.06): ರಸಗೊಬ್ಬರಕ್ಕಾಗಿ ರೈತರ ಪರದಾಟ ಮುಂದುವರೆದಿದ್ದು, ಯಾದಗಿರಿ ಜಿಲ್ಲೆ ಶಹಾಪುರದ ಅಂಗಡಿಗಳೆದುರು ರೈತರು ಕುಟುಂಬ ಸಮೇತ ರಾತ್ರಿಯಿಂದ ಬೆಳಗಿನವರೆಗೂ ಜಾಗರಣೆ ನಡೆಸುವ ದುಸ್ಥಿತಿ ನಿರ್ಮಾಣವಾಗಿದೆ. ಇತ್ತ ಚಾಮರಾಜನಗರ ಜಿಲ್ಲೆ ಮೂಲೆಹೊಳೆ ಚೆಕ್‌ಪೋಸ್ಟ್ ಬಳಿ ಲಾರಿ ಮೂಲಕ ಕೇಳರಕ್ಕೆ ಸಾಗಿಸುತ್ತಿದ್ದ 15 ಟನ್‌ ಯೂರಿಯಾವನ್ನು ಜಪ್ತಿ ಮಾಡಲಾಗಿದೆ.

ಶಹಾಪುರ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದಲ್ಲಿ ಪೊಲೀಸ್ ಭದ್ರತೆಯಲ್ಲಿ ರಸಗೊಬ್ಬರ ವಿತರಿಸಲಾಗಿದೆ. ಪಟ್ಟಣದ ಅಂಗಡಿಗಳ ಮುಂದೆ ರೈತರು ಕಿಲೋ ಮೀಟರ್‌ಗಟ್ಟಲೇ ಸಾಲುಗಟ್ಟಿ ನಿಂತ ದೃಶ್ಯಗಳು ಕಂಡುಬಂತು. ಒಬ್ಬರಿಗೆ ಕೇವಲ 50 ಕೆ.ಜಿ.ಯ ಒಂದು ಬ್ಯಾಗ್‌ ಅಷ್ಟೇ ವಿತರಿಸಲಾಯಿತು. ಅನೇಕರಿಗೆ ಒಂದು ಚೀಲವೂ ಸಿಗಲಿಲ್ಲ. ಹೀಗಾಗಿ, ಅಂಗಡಿ ಮಾಲೀಕರು ಕಾಳಸಂತೆಯಲ್ಲಿ ಯೂರಿಯಾ ಮಾರುತ್ತಿದ್ದಾರೆ, ನಿಗದಿತ ದರಕ್ಕಿಂತ 2 ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆಕ್ರೋಶದ ಮಾತುಗಳು ರೈತರಿಂದ ಕೇಳಿಬಂತು.

ಕೇರಳಕ್ಕೆ ಅಕ್ರಮ ಸಾಗಾಟ: ನಂಜನಗೂಡಲ್ಲಿ ರಸಗೊಬ್ಬರ ತುಂಬಿಕೊಂಡು ನೆರೆಯ ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಕೇರಳ ನೋಂದಣಿಯ ಕೆಎಲ್ 71ಡಿ 1699 ನಂಬರಿನ ಲಾರಿಯನ್ನು ಮೂಲೆಹೊಳೆ ಚೆಕ್ ಪೋಸ್ಟ್ ಬಳಿ ಕೃಷಿ ಸಹಾಯಕ ನಿರ್ದೇಶಕ ಶಶಿಧರ್ ವಶಕ್ಕೆ ಪಡೆದಿದ್ದಾರೆ. ಲಾರಿಯಲ್ಲಿ ಸುಮಾರು 15 ಟನ್‌ನಷ್ಟು 350 ಚೀಲ ಯೂರಿಯಾ ಪತ್ತೆಯಾಗಿದ್ದು, ಸಾಗಾಣಕೆದಾರರ ವಿರುದ್ಧ ಪ್ರಕರಣ ದಾಖಲಿಸಿ ಲಾರಿಯನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ವಶಪಡಿಸಿಕೊಂಡ ಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಗೊಬ್ಬರವನ್ನು ರೈತರಿಗೆ ಹಂಚಲು ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ‌.

ಕಡಿವಾಣ ಹಾಕಲು ಒತ್ತಾಯ: ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಗೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಿ.ವಿ. ಗೌಡ ಆಗ್ರಹಿಸಿದರು. ಈ ಕುರಿತು ತಹಸೀಲ್ದಾರ್ ಜೂಗಲ ಮಂಜುನಾಥಗೆ ಸೋಮವಾರ ಮನವಿ ಸಲ್ಲಿಸಿ ಮಾತನಾಡಿದರು. ಈ ಹಿಂದೆ ತಾವುಗಳು ಕೃಷಿ ಪರಿಕರಗಳ ಮಾರಾಟಗಾರರ ಸಭೆ ನಡೆಸಿ ರಸ ಗೊಬ್ಬರದ ಅಭಾವ ಸೃಷ್ಟಿಸದೇ, ನಿಗದಿತ ದರದಲ್ಲಿ ಮಾರಾಟ ಮಾಡುವಂತೆ ಸೂಚನೆ ನೀಡಿದ್ದಿರಿ. ಅಲ್ಲದೇ ನಿಯಮ ಉಲ್ಲಂಘಿಸಿದಲ್ಲಿ ಅಂತಹ ಮಾರಾಟಗಾರರ ಪರವಾನಿಗೆ ರದ್ದುಪಡಿಸುವ ಎಚ್ಚರಿಕೆ ನೀಡಿದ್ದಿರಿ. ಆದರೆ ತಮ್ಮ ಮಾತಿಗೆ ಯಾವುದೇ ಕವಡೆ ಕಾಸಿನ ಕಿಮ್ಮತ್ತು ನೀಡದೇ ಕೆಲ ರಸಗೊಬ್ಬರ ಮಾರಾಟಗಾರರು ಎಂ.ಆರ್.ಪಿ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರುತ್ತಿದ್ದು, ರೈತರಿಗೆ ರಸಗೊಬ್ಬರ ಬೇಕಾದಲ್ಲಿ ಪಹಣಿ, ಅಧಾರ್‌ಕಾರ್ಡ್ ಮತ್ತು ಸಹಿ ಮಾಡಿದ ಇ-ಸ್ಟ್ಯಾಂಪ್ ಖಾಲಿ ಬಾಂಡ್ ಪೇಪರ್ ನೀಡಬೇಕು.

ಹಾಗಿದ್ದಲ್ಲಿ ರಸಗೊಬ್ಬರ ನೀಡಲಾಗುತ್ತದೆ ಎಂದು ಒತ್ತಡ ಹಾಕುತ್ತಿದ್ದಾರೆ. ಕಳೆದ ಒಂದು ವಾರದಿಂದ ಎಮ್ಮಿಗನೂರು ಗ್ರಾಮದಲ್ಲಿ ರಸಗೊಬ್ಬರ ಎಂ.ಆರ್.ಪಿ ಬೆಲೆಗಿಂತ ಹೆಚ್ಚಿನ ದರಕ್ಕೆ ಬಿಲ್ ಸಮೇತ ಮಾರಾಟ ಮಾಡಿರುತ್ತಾರೆ. ಈ ವಿಷಯವಾಗಿ ತಾಲೂಕಿನ ಸಹಾಯಕ ಕೃಷಿ ಅಧಿಕಾರಿಗಳಿಗೆ ಆಧಾರ ಸಮೇತ ನೀಡಿದರೂ ನಮ್ಮನ್ನು ವಿತರಕರ ಅಂಗಡಿಗೆ ಬನ್ನಿ ಎಂದು ತಿಳಿಸಿರುತ್ತಾರೆ. ಎಲ್ಲಾ ಸರಿಯಾಗಿದೆ ಎಂದು ಹೇಳಿದ್ದು, ತದನಂತರದಲ್ಲಿ ನಮ್ಮ ಹತ್ತಿರ ಬಂದು ವಿತರಕರ ತಪ್ಪು ಏನು ಇಲ್ಲ ಎಂದು ನಮ್ಮ ಮನವೊಲಿಸಲು ಪ್ರಯತ್ನಿಸಿರುತ್ತಾರೆ. ಕಣ್ಣೆದುರಿಗೆ ಬಿಲ್ ಮತ್ತು ಚೀಲದ ಮೇಲೆನ ಎಂ.ಆರ್.ಪಿ ಬೆಲೆ ಇದ್ದರೂ ಸಹ ಅವರು ವಿತರಕರ ಪರವಾಗಿ ಮಾತನಾಡುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.