Asianet Suvarna News Asianet Suvarna News

ಸಾಹಿತಿಗಳು ಹಾಗೂ ಬರಹಗಾರರು ಚಿತ್ರರಂಗದೊಂದಿಗೆ ಕೈಜೋಡಿಸಿ: ನಟ ರಾಜ್‌ ಬಿ ಶೆಟ್ಟಿ ಮನವಿ

ಸಿನಿಮಾ ಕ್ಷೇತ್ರವನ್ನು ಮೈಲಿಗೆಯೆಂದು ಭಾವಿಸದೆ ಸುಂದರವಾದ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಸಿನಿಮಾ ಮೂಲಕ ಜನರಿಗೆ ತಲುಪಿಸಲು ಸಾಹಿತಿಗಳು ಹಾಗೂ ಬರಹಗಾರರು ಚಿತ್ರರಂಗದೊಂದಿಗೆ ಕೈಜೋಡಿಸಬೇಕು ಎಂದು ನಟ ರಾಜ್‌ ಬಿ. ಶೆಟ್ಟಿ ಮನವಿ ಮಾಡಿದ್ದಾರೆ.

Writers join hands with cinema Actor Raj B Shetty appeals gvd
Author
First Published Jul 10, 2023, 6:23 AM IST

ಬೆಂಗಳೂರು (ಜು.10): ಸಿನಿಮಾ ಕ್ಷೇತ್ರವನ್ನು ಮೈಲಿಗೆಯೆಂದು ಭಾವಿಸದೆ ಸುಂದರವಾದ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಸಿನಿಮಾ ಮೂಲಕ ಜನರಿಗೆ ತಲುಪಿಸಲು ಸಾಹಿತಿಗಳು ಹಾಗೂ ಬರಹಗಾರರು ಚಿತ್ರರಂಗದೊಂದಿಗೆ ಕೈಜೋಡಿಸಬೇಕು ಎಂದು ನಟ ರಾಜ್‌ ಬಿ. ಶೆಟ್ಟಿ ಮನವಿ ಮಾಡಿದ್ದಾರೆ. ಸಾವಣ್ಣ ಪ್ರಕಾಶನ ಭಾನುವಾರ ನಗರದ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾದಂಬರಿಕಾರ ಜಗದೀಶ ಶರ್ಮಾ ಸಂಪ ಅವರ ‘ದಶಕಂಠ ರಾವಣ’, ಕನ್ನಡಪ್ರಭ ಪುರವಣಿ ಸಂಪಾದಕ ಗಿರೀಶ್‌ ರಾವ್‌ ಹತ್ವಾರ್‌ ರಚಿಸಿರುವ ‘ಅಶ್ವತ್ಥಾಮನ್‌’ ಮತ್ತು ‘ಚಿಯರ್ಸ್‌’, ಕಥೆಕೂಟದ ಮೂವತ್ತು ಕತೆಗಾರರ ‘ಒಲವು ತುಂಬುವುದಿಲ್ಲ’ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡದ ಸಾಹಿತ್ಯ ಮತ್ತು ಚಿತ್ರರಂಗಕ್ಕೆ ಒಂದೇ ರೀತಿಯ ಸಮಸ್ಯೆ ಕಾಡುತ್ತಿದೆ. ಪುಸ್ತಕಗಳಿಗೆ ಓದುಗಾರರಿಲ್ಲ. ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ. ಮತ್ತೊಂದೆಡೆ ಸಿನಿಮಾ ಕ್ಷೇತ್ರದಲ್ಲಿ ಸೃಜನಶೀಲ ಬರಹಗಾರರ ಕೊರತೆಯಿದೆ. ಸಿನಿಮಾ ಮತ್ತು ಸಾಹಿತ್ಯ ರಂಗದ ನಡುವೆ ಒಂದು ಅಂತರವಿದ್ದು, ಅದನ್ನು ತುಂಬಬೇಕಿದೆ ಎಂದರು. ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರ ಪತಿ-ಪತ್ನಿ ಇದ್ದಂತೆ. ಆದರೆ, ಯಾರೂ ಪತಿ, ಯಾರೂ ಪತ್ನಿ ಎಂಬ ಒಳ ಜಗಳದಲ್ಲೇ ಕಾಲ ಕಳೆದು ಹೋಗಿದೆ. ಭಾರತದಲ್ಲಿ ಚಿತ್ರರಂಗ ದೊಡ್ಡದಾಗಿ ಬೆಳೆಯುತ್ತಿದ್ದು, ಅದಕ್ಕೆ ಉತ್ತಮ ಬರಹಗಾರರ ಮತ್ತು ಸಾಹಿತಿಗಳ ಅಗತ್ಯವಿದೆ. 

ಸುದೀಪ್ - MN ಕುಮಾರ್​ ವಿವಾದ: ಕುಮಾರ್ ಭುಜದ ಮೇಲೆ ಗನ್ ಇಟ್ಟು ಹೊಡಿತ್ತಿದ್ದಾರೆ- ಜಾಕ್ ಮಂಜು ಕಿಡಿ

ಸಿನಿಮಾದಲ್ಲಿ ಮನರಂಜನೆ ಜತೆ ಕಲೆ, ವಿಜ್ಞಾನ, ವಾಣಿಜ್ಯ ಮತ್ತು ತಂತ್ರಜ್ಞಾನವಿದೆ. ಹೀಗಾಗಿ ಕನ್ನಡ ಸಾಹಿತ್ಯ ಮತ್ತು ಸಿನಿಮಾ ಲೋಕದ ನಡುವೆ ಸೇತುವೆ ನಿರ್ಮಾಣವಾಗಬೇಕಿದೆ ಎಂದು ತಿಳಿಸಿದರು. ಕೇರಳದಲ್ಲಿನ ಸಾಹಿತಿಗಳು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಉತ್ತಮ ಚಿತ್ರಗಳು ಮೂಡಿಬರುತ್ತಿವೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯೂ ಸುಂದರವಾಗಿದ್ದು, ಅದನ್ನು ಜನರಿಗೆ ಸಿನಿಮಾ ಮೂಲಕ ತಲುಪಿಸೋಣ. ಸಾಹಿತಿಗಳು-ಬರಹಗಾರರು ಮೈಲಿಗೆ ಎಂಬ ಕಲ್ಪನೆ ಬಿಟ್ಟು ಕನ್ನಡ ಚಿತ್ರರಂಗದೊಂದಿಗೆ ತೊಡಗಿಕೊಂಡರೆ, ಅವರಿಗೆ ಕನ್ನಡದ ಚಿತ್ರ ನಿರ್ಮಾಣ ಸಂಸ್ಥೆಗಳು ಹಾಗೂ ನಟರು ಬೆಂಬಲಿಸುತ್ತಾರೆ ಎಂದರು.

ಕೃತಿಕಾರ ಗಿರೀಶ್‌ ರಾವ್‌ ಹತ್ವಾರ್‌, ಓದುಗರು ಇಲ್ಲ ಅಥವಾ ಪುಸ್ತಕಗಳ ಮಾರಾಟವಾಗುತ್ತಿಲ್ಲ ಎಂದು ಬರಹಗಾರರು ಬೇಸರಗೊಳ್ಳುವ ಅಗತ್ಯವೇ ಇಲ್ಲ. ವ್ಯಾಸ ಹಾಗೂ ಕುಮಾರವ್ಯಾಸ ಅವರ ಕಾಲದಲ್ಲಿ ಓದಲು ಬರೆಯುವರರ ಸಂಖ್ಯೆಯೇ ಕಡಿಮೆಯಿತ್ತು. ಯಾವುದೇ ಟಿವಿ-ರೇಡಿಯೋ ಇರಲಿಲ್ಲ. ಆದರೆ, ಅವರು ತಮಗಾಗಿ ಬರೆಯುತ್ತಿದ್ದರು ಎಂದು ಹೇಳಿದರು.

‘ದಶಕಂಠದಲ್ಲಿ ರಾವಣನ 7 ಜನ್ಮ ಕತೆ ಅನಾವರಣ’: ಜಗದೀಶ ಶರ್ಮಾ ಸಂಪ ಮಾತನಾಡಿ, ಸೀತಾಪಹರಣ ಘಟನೆಗೂ ಸ್ವಲ್ಪ ಕಾಲದ ಮುನ್ನವೇ ರಾಮಾಯಣದಲ್ಲಿ ರಾವಣ ಕಾಣಿಸಿಕೊಳ್ಳುತ್ತಾನೆ. ರಾವಣನಿಗೆ ಒಟ್ಟು ಏಳು ಜನ್ಮಗಳಿವೆ. ರಾವಣ ಅವತಾರ ಆರನೇ ಜನ್ಮ. ಉತ್ತರ ಖಂಡದಲ್ಲಿ ರಾವಣ ಹಳೆಯ ಕಥೆಗಳು ಬರುತ್ತವೆ. ರಾವಣನ ಸಾವಿನ ನಂತರ ಆತನ ಇತಿಹಾಸದ ಬಗ್ಗೆ ಋುಷಿ ಬಳಿ ರಾಮನೇ ಕೇಳುತ್ತಾನೆ. ಆಗ ರಾವಣಾಯಣ ಆರಂಭವಾಗುತ್ತದೆ. ರಾವಣನ ಅನುಭವ, ಆಕಾಂಕ್ಷೆ, ಕ್ರಿಯೆ ಮತ್ತು ಆತನ ಜನುಮಗಳ ಅನೇಕ ಅಂಶಗಳನ್ನು ದಶಕಂಠ ರಾವಣ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿ ಗೋಪಾಲ ಕೃಷ್ಣ ಕುಂಟಿನಿ ಮತ್ತು ಸಾವಣ್ಣ ಪ್ರಕಾಶನದ ಜಮೀಲ್‌ ಸಾವಣ್ಣ ಉಪಸ್ಥಿತರಿದ್ದರು.

‘ನನ್ನ ಬರವಣಿಗೆಯನ್ನು ಸಾಹಿತಿಗಳು ಗುರುತಿಸಿಲ್ಲ’: ನಟ ಡಾಲಿ ಧನಂಜಯ್‌ ಮಾತನಾಡಿ, ನಾನು ಚಿತ್ರಗಳಿಗೆ ಕತೆ ಬರೆದಿದ್ದೇನೆ. ಆದರೆ, ಇತ್ತೀಚೆಗೆ ಬರವಣಿಗೆಯಿಂದ ದೂರ ಉಳಿದಿದ್ದೇನೆ. ನಮ್ಮ ಬರಹದ ಕೆಲವೊಂದು ಸಾಲುಗಳು ಚೆನ್ನಾಗಿದೆಯೆಂದು ಜನರು ತಿಳಿಸಿದಾಗ ಖುಷಿಯಾದರೂ ಅದನ್ನು ಸಾಹಿತಿಗಳು ಗುರುತಿಸದಿದ್ದಾಗ ಬೇಸರವಾಗುತ್ತದೆ. ಸಾಹಿತ್ಯವಾಗಿ ಮುಂದುವರಿಯೋಕೆ ಪ್ರಯತ್ನ ಮಾಡಿದರೂ ಸಾಮಾನ್ಯ ಜನರಿಗೆ ಅರ್ಥವಾಗುವಂತೆ ನಾವು ಬರೆಯಬೇಕಾಗುತ್ತದೆ ಎಂದು ಹೇಳಿದರು.

'ಆಡೇ ನಮ್ಮ God'ಟೀಸರ್ ರಿಲೀಸ್: ಚಿತ್ರದಲ್ಲಿದೆ ಆಡು ಸ್ವಾಮಿಯ ಮಹಿಮೆ

ಪುಸ್ತಕಗಳನ್ನು ಹೆಚ್ಚು ಓದಬೇಕು. ಬರೆಯಲು, ಓದಲು ಸಮಯ ನೀಡಬೇಕು. ಯಾಕೊ ಒಬ್ಬನೇ ಆಗಿಬಿಟ್ಟಿದ್ದೇನೆ; ಪ್ರೇಮಾಂಕುರವಾಗಿಲ್ಲ. ಹೆಣ್ಣು ಮಕ್ಕಳಿಗೂ ಚೂರು ಸಮಯ ಕೊಡಬೇಕೆಂದೆನಿಸಿತು. ನನ್ನಲ್ಲೂ ಒಂದಷ್ಟುತಲ್ಲಣಗಳಿದ್ದು, ಪುಸ್ತಕಗಳನ್ನು ಓದಿದಾಗ ಅದು ನನ್ನಿಂದ ದೂರವಾಗುತ್ತವೆ ಎಂದು ಹೇಳಿದರು.

Follow Us:
Download App:
  • android
  • ios