ನಗರದ ‘ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ದ ಟರ್ಮಿನಲ್‌-2, ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣಗಳಲ್ಲಿ ಒಂದೆಂಬ ಹಿರಿಮೆಗೆ ಪಾತ್ರವಾಗಿದೆ. 

ಬೆಂಗಳೂರು (ಡಿ.22): ನಗರದ ‘ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ದ ಟರ್ಮಿನಲ್‌-2, ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣಗಳಲ್ಲಿ ಒಂದೆಂಬ ಹಿರಿಮೆಗೆ ಪಾತ್ರವಾಗಿದೆ. ಈ ಮೂಲಕ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋ ನೀಡುವ ಪ್ರಿಕ್ಸ್‌ ವರ್ಸೈಲ್ಸ್‌ ಗೌರವಕ್ಕೆ ಪಾತ್ರವಾಗಿದೆ. ವಿಶೇಷವೆಂದರೆ ಈ ಗೌರವಕ್ಕೆ ಪಾತ್ರವಾದ ಮೊದಲ ನಿಲ್ದಾಣ ಎಂಬ ಹಿರಿಮೆಗೆ ಬೆಂಗಳೂರು ವಿಮಾನ ನಿಲ್ದಾಣ ಪಾತ್ರವಾಗಿದೆ. ಒಳಾಂಗಣ ವಿನ್ಯಾಸಕ್ಕಾಗಿ ಬೆಂಗಳೂರು ಏರ್‌ಪೋರ್ಟ್‌ನ ಟರ್ಮಿನಲ್‌- 2ಕ್ಕೆ ಈ ಗೌರವ ಸಂದಿದೆ.

ಟರ್ಮಿನಲ್‌-2 ವಿಶೇಷತೆ ಏನು?: 2,55,661 ಚದರ ಮೀಟರ್‌ ವಿಸ್ತೀರ್ಣದಲ್ಲಿರುವ ಟರ್ಮಿನಲ್‌-2 ಅನ್ನು 4 ಬೃಹತ್‌ ಅಡಿಪಾಯದ ಕಂಬಗಳ ಮೇಲೆ ನಿರ್ಮಾಣವಾಗಿದೆ. ಇಲ್ಲಿನ ಉದ್ಯಾನ ಬಹು ಆಕರ್ಷಣೀಯವಾಗಿದ್ದು, ಇಲ್ಲಿ ಪರಿಸರ ಮತ್ತು ಕರ್ನಾಟಕದ ಶ್ರೀಮಂತ ಪರಂಪರೆ, ಸಂಸ್ಕೃತಿ, ಆಚರಣೆಗಳನ್ನು ಕಾಣಬಹುದಾಗಿದೆ. ಈ ಟರ್ಮಿನಲ್‌-2ನ ಮೊದಲ ಹಂತವು ನ.11, 2022ರಂದು ಉದ್ಘಾಟನೆಯಾಗಿದೆ. ಇದು ವರ್ಷಕ್ಕೆ 2.5 ಕೋಟಿ ಪ್ರಯಾಣಿಕರನ್ನು ನಿರ್ವಹಿಸುತ್ತದೆ.

ಕೆಎಂಎಫ್​ ರಾಯಭಾರಿ ಶಿವರಾಜ್​ಕುಮಾರ್​ಗೆ ಸಿಎಂ ಸಿದ್ದರಾಮಯ್ಯ ಸನ್ಮಾನ!

ಮುಂದಿನ 2 ವರ್ಷಗಳಲ್ಲಿ 12 ಸಾವಿರ ಉದ್ಯೋಗ ಸೃಷ್ಟಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮುಂದಿನ ಎರಡು ವರ್ಷಗಳಲ್ಲಿ 12 ಸಾವಿರ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಹರಿ ಮರಾರ್ ತಿಳಿಸಿದರು. ನಗರದಲ್ಲಿ ನಡೆದ ಸೋಲ್ (SOUL) ಬೆಂಗಳೂರು ಬಿಸಿನೆಸ್‌ ಕಾನ್‌ಕ್ಲೇವ್‌ನಲ್ಲಿ ‘ಬೆಂಗಳೂರು ರೂಪಾಂತರ’ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಎಲ್ಲ ಲೆಕ್ಕಾಚಾರಗಳನ್ನು ಮೀರಿ ಬೆಂಗಳೂರು ನಗರದ ಉದ್ಯಮ, ಕೈಗಾರಿಕೆ ಮತ್ತು ಸಾರಿಗೆ ಕ್ಷೇತ್ರ ಬೆಳೆಯುತ್ತಿದೆ. ವಿಮಾನ ನಿಲ್ದಾಣ ಪ್ರಗತಿಯು ಇಡೀ ದೇಶಕ್ಕೆ ಮಾದರಿಯಾಗಿದೆ. 

ಎರಡನೇ ಟರ್ಮಿನಲ್ ಆರಂಭಕ್ಕೆ ಮುನ್ನ 25 ಸಾವಿರ ಉದ್ಯೋಗಿಗಳಿದ್ದರು. ಈಗ 38 ಸಾವಿರ ಉದ್ಯೋಗಿಗಳಿದ್ದಾರೆ. ಮುಂದಿನ 2 ವರ್ಷಗಳಲ್ಲಿ ಈ ಸಂಖ್ಯೆ 50 ಸಾವಿರಕ್ಕೆ ತಲುಪಲಿದೆ. ವಿಮಾನ ನಿಲ್ದಾಣ ಆವರಣದಲ್ಲಿ ಇಂಡಿಗೋ, ಏರ್ ಇಂಡಿಯಾ ಹಬ್‌ ನಿರ್ಮಾಣ, ₹500 ಕೋಟಿ ವೆಚ್ಚದ ಏರ್‌ಪೋರ್ಟ್‌ ಸಿಟಿ, ಡಿಜಿಟಲ್ ಪ್ಲಾನ್, 2ನೇ ಟರ್ಮಿನಲ್‌ನ ಉಳಿದ ಭಾಗದ ಅಭಿವೃದ್ಧಿ ಸೇರಿದಂತೆ ಹಲವು ಕೆಲಸಗಳು ನಡೆಯುತ್ತಿವೆ’ ಎಂದು ತಿಳಿಸಿದರು.

‘2024ರ ಅಂತ್ಯದ ವೇಳೆಗೆ ನಿಲ್ದಾಣದ ಪ್ರಯಾಣಿಕರ ಸಂಖ್ಯೆ 4 ಕೋಟಿ ತಲುಪುವ ನಿರೀಕ್ಷೆ ಇದೆ. ಸದ್ಯದ ಬೆಳವಣಿಗೆ ಗಮನಿಸಿದರೆ 2032ರ ವೇಳೆಗೆ ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಅಗತ್ಯವಿದೆ. ಅದಕ್ಕಾಗಿ ಎರಡು ವರ್ಷಗಳ ಹಿಂದೆಯೇ ಸರ್ಕಾರ ಸ್ಥಳ ಗುರುತಿಸಿ ಯೋಜನೆ ರೂಪಿಸಬೇಕಿತ್ತು. ಬೆಂಗಳೂರು ವಿಮಾನ ನಿಲ್ದಾಣದ ಅಭಿವೃದ್ಧಿಗೆ 2030ರ ವೇಳೆಗೆ ಸುಮಾರು ₹15 ಸಾವಿರ ಕೋಟಿ ಹೂಡಿಕೆಯಾಗಲಿದೆ’ ಎಂದು ಹರಿ ಮರಾರ್ ತಿಳಿಸಿದರು.

ಸದನದಿಂದ ಸಂಸದರು ಹೊರಕ್ಕೆ, ಪ್ರಜಾಪ್ರಭುತ್ವದ ಕಗ್ಗೊಲೆ: ಸಚಿವ ಎಂ.ಬಿ.ಪಾಟೀಲ್‌

ಐಟಿ ಮತ್ತು ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ‘ಕೈಗಾರಿಕೆ ಹಾಗೂ ಉದ್ಯಮಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಉದ್ಯಮಗಳ ಸ್ಥಾಪನೆಗೆ ಇರುವ ತೊಡಕುಗಳನ್ನು ನಿವಾರಿಸಿ ಮತ್ತಷ್ಟು ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಲಾಗುತ್ತದೆ. ಆಟೋಮೊಬೈಲ್, ಬಯೋಟೆಕ್ನಾಲಜಿ ಸೇರಿದಂತೆ ಎಲ್ಲ ವಲಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕವಾಗಿ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಕೌಶಲ್ಯ ಅಭಿವೃದ್ಧಿ ಮೂಲಕ ಭವಿಷ್ಯದ ಸವಾಲುಗಳಿಗೆ ಕರ್ನಾಟಕ ಸಿದ್ಧವಾಗಲಿದೆ. ಅದಕ್ಕೆ ಪೂರಕವಾದ ಎಲ್ಲ ರೀತಿಯ ವಾತಾವರಣವನ್ನು ನಿರ್ಮಿಸಲಾಗುತ್ತಿದೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.