ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಎಂಎಫ್‌ ನಂದಿನಿ ಬ್ರ್ಯಾಂಡ್‌ನ ‘ನಂದಿನಿ ಎಮ್ಮೆ ಹಾಲು’ ಮತ್ತು ‘ನಂದಿನಿ ಮೊಸರು ಲೈಟ್‌’ ಉತ್ಪನ್ನಗಳನ್ನು ಗುರುವಾರ ಬಿಡುಗಡೆ ಮಾಡಿದರು.  

ಬೆಂಗಳೂರು (ಡಿ.22): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಎಂಎಫ್‌ ನಂದಿನಿ ಬ್ರ್ಯಾಂಡ್‌ನ ‘ನಂದಿನಿ ಎಮ್ಮೆ ಹಾಲು’ ಮತ್ತು ‘ನಂದಿನಿ ಮೊಸರು ಲೈಟ್‌’ ಉತ್ಪನ್ನಗಳನ್ನು ಗುರುವಾರ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ನಂದಿನಿ ಉತ್ಪನ್ನಗಳ ನೂತನ ಬ್ರ್ಯಾಂಡ್‌ ರಾಯಭಾರಿ ಶಿವರಾಜ್‌ ಕುಮಾರ್‌ ಅವರ ಜಾಹೀರಾತನ್ನು ಬಿಡುಗಡೆ ಮಾಡಿ, ಶಿವರಾಜ್‌ ಕುಮಾರ್‌ ಅವರನ್ನು ಸನ್ಮಾನಿಸಿದರು. 

ಈ ವೇಳೆ ಗೀತಾ ಶಿವರಾಜ್‌ ಕುಮಾರ್‌, ಸಚಿವ ಮಧು ಬಂಗಾರಪ್ಪ, ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್‌ ಸೇರಿದಂತೆ ಮತ್ತಿತರರು ಇದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭೀಮಾ ನಾಯ್ಕ್‌, ಈ ಹಿಂದಿನಿಂದಲೂ ಡಾ.ರಾಜ್‌ಕುಮಾರ್‌ ಅವರ ಕುಟುಂಬದವರನ್ನೇ ನಂದಿನಿ ರಾಯಭಾರಿಯನ್ನಾಗಿ ಮಾಡಲಾಗಿತ್ತು. ದಿವಂಗತ ಪುನೀತ್‌ ರಾಜ್‌ಕುಮಾರ್‌ ಕೂಡ ನಂದಿನಿ ರಾಯಭಾರಿ ಆಗಿದ್ದರು. 

ಹಿಂದಿನ ಕೋವಿಡ್‌ ತಪ್ಪು ಮತ್ತೆ ಆಗಕೂಡದು: ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಈಗ ಡಾ.ಶಿವರಾಜ್‌ಕುಮಾರ್‌ ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿದ್ದೇವೆ ಎಂದರು. ಕೆಎಂಎಫ್‌ನಿಂದ ಎಮ್ಮೆಯ ಹಾಲು, ನಂದಿನಿ ಮೊಸರು ಲೈಟ್‌ ಹಾಗೂ ವಿವಿಧ ಉತ್ಪನ್ನಗಳ ನೂತನ ಪ್ಯಾಕಿಂಗ್‌ ವಿನ್ಯಾಸವನ್ನು ಮುಖ್ಯಮಂತ್ರಿ ಲೋಕಾರ್ಪಣೆ ಮಾಡಿದ್ದಾರೆ ಎಂದ ಅವರು, ಈ ಹಿಂದೆ ಹಾಲಿನ ದರವನ್ನು 3 ರು. ಹೆಚ್ಚಳ ಮಾಡಿದ್ದು, ಅದನ್ನು ನೇರವಾಗಿ ರೈತರಿಗೆ ಕೊಟ್ಟಿದ್ದೇವೆ. ಈಗ ಸದ್ಯ ದರ ಹೆಚ್ಚಳ ಮಾಡುವ ಪ್ರಸ್ತಾವನೆ ಇಲ್ಲ ಎಂದು ಹೇಳಿದರು.

ನಂದಿನಿ ಎಮ್ಮೆ ಹಾಲು: ಎಮ್ಮೆಯ ಹಾಲಿನ ಶೇಖರಣೆ ಹೆಚ್ಚಿರುವ ಬೆಳಗಾವಿ ಮತ್ತು ವಿಜಯಪುರ ಹಾಲು ಒಕ್ಕೂಟಗಳಿಂದ ಹಾಲನ್ನು ಪಡೆದು ಬೆಂಗಳೂರಿನಲ್ಲಿ ಸಂಸ್ಕರಿಸಿ ಮೊದಲ ಹಂತದಲ್ಲಿ ವಿನೂತನ ಪ್ಯಾಕ್‌ನೊಂದಿಗೆ 500 ಮಿ.ಲೀ (ಅರ್ಧ ಲೀಟರ್‌) ಪೊಟ್ಟಣದಲ್ಲಿ ‘ನಂದಿನಿ ಎಮ್ಮೆ ಹಾಲು’ ಪ್ಯಾಕಿಂಗ್‌ ಮಾಡಿ ಮಾರಾಟ ಮಾಡಲಾಗುತ್ತಿದೆ. ಪ್ರತೀ ಅರ್ಧ ಲೀಟರ್‌ ಎಮ್ಮೆ ಹಾಲಿನ ದರ 35 ರು. ನಿಗದಿಪಡಿಸಲಾಗಿದೆ.

ನಂದಿನಿ ಮೊಸರು ಲೈಟ್‌: ಕಡಿಮೆ ಕೊಬ್ಬಿನಂಶ ಇರುವ ಮೊಸರು ನಂದಿನಿ ಮೊಸರು ಲೈಟ್‌. 180 ಗ್ರಾಂ 10 ರು.ಗಳಲ್ಲಿ ಮತ್ತು 500 ಗ್ರಾಂ 25 ರು.ನಂತೆ ದರ ನಿಗದಿ ಮಾಡಲಾಗಿದೆ. ಈ ಉತ್ಪನ್ನಗಳನ್ನು ಬೆಂಗಳೂರು ಮತ್ತು ಮೈಸೂರು ಜಿಲ್ಲಾ ಮಾರುಕಟ್ಟೆ ವ್ಯಾಪ್ತಿಯಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗೆ ವಿಸ್ತರಿಸುವ ಗುರಿಯನ್ನು ಕೆಎಂಎಫ್‌ ಹೊಂದಿದೆ.

ಸಿದ್ದು ಸರ್ಕಾರದ ಯೋಜನೆಯಿಂದ ಈ ವರ್ಷ 50 ಲಕ್ಷ ಮಂದಿ ಭಕ್ತರಿಂದ ಮಹದೇಶ್ವರನ ದರ್ಶನ!

ನೂನತ ಪ್ಯಾಕಿಂಗ್‌ ವಿನ್ಯಾಸ: ನಂದಿನಿ ಮೈಸೂರ್‌ ಪಾಕ್‌, ಹಾಲಿನ ಪೇಡ, ಧಾರವಾಡ ಪೇಡ, ಕೇಸರಿ ಪೇಡ, ಏಲಕ್ಕಿ ಪೇಡ, ಕಾಜು ಕಟ್ಲಿ, ಸಿರಿಧಾನ್ಯ ಲಡ್ಡು, ಬೇಸನ್‌ ಲಡ್ಡುಗಳಿಗೆ ಹೊಸ ಪ್ಯಾಕಿಂಗ್‌ ವಿನ್ಯಾಸವನ್ನು ಅಳವಡಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.