Asianet Suvarna News Asianet Suvarna News

ವಿಶ್ವದ ಅತಿದೊಡ್ಡ ಆರೈಕೆ ಕೇಂದ್ರ ವಾರದಲ್ಲಿ ಶುರು: ಬೆಂಗಳೂರಲ್ಲಿ ಸಜ್ಜಾಗಿದೆ 10100 ಹಾಸಿಗೆಗಳ ಘಟಕ!

ವಿಶ್ವದ ಅತಿದೊಡ್ಡ ಆರೈಕೆ ಕೇಂದ್ರ ವಾರದಲ್ಲಿ ಶುರು| ಬೆಂಗಳೂರಲ್ಲಿ ಸಜ್ಜಾಗಿದೆ 10100 ಹಾಸಿಗೆಗಳ ಘಟಕ| 2200 ವೈದ್ಯ ಸಿಬ್ಬಂದಿ ನಿಯೋಜನೆ| ರೊಬೋಟ್‌ ಮೂಲಕ ವೈದ್ಯರ ಜತೆ ಸಮಾಲೋಚನೆ| ರೋಗ ಲಕ್ಷಣ ಇಲ್ಲದವರಿಗೆ ಇಲ್ಲಿ ಶುಶ್ರೂಷೆ

World Biggest Covid 19 Care Centre To Start In A Week In Bengaluru
Author
Bangalore, First Published Jul 10, 2020, 7:18 AM IST

ಬೆಂಗಳೂರು(ಜು.10): ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ತಲೆ ಎತ್ತಿರುವ 10,100 ಹಾಸಿಗೆ ಸಾಮರ್ಥ್ಯದ ದೇಶದ ಅತಿ ‘ದೊಡ್ಡ ಕೋವಿಡ್‌ ಆರೈಕೆ ಕೇಂದ್ರ’ವನ್ನು ಇನ್ನೊಂದು ವಾರದಲ್ಲಿ ಉದ್ಘಾಟಿಸಲಾಗುವುದು. ಈ ಕೇಂದ್ರದಲ್ಲಿ ಸೋಂಕಿತರ ನಿರ್ವಹಣೆಗೆ ವೈದ್ಯರು, ನರ್ಸ್‌ಗಳು ಸೇರಿದಂತೆ 2200 ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಮಾಸ್ಕ್‌, ಸ್ಯಾನಿಟೈಸರ್‌ ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಕ್ಕೆ!

ಗುರುವಾರ ಬಿಐಇಸಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ತೀವ್ರ ಗತಿಯಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ಬಿಐಇಸಿಯಲ್ಲಿ 10,100 ಹಾಸಿಗೆ ಸೌಲಭ್ಯದ ಕೋವಿಡ್‌ ನಿಗಾ ಕೇಂದ್ರ ಸ್ಥಾಪಿಸಲಾಗುತ್ತಿದೆ. ಇನ್ನು ಒಂದು ವಾರದಲ್ಲಿ ಕೇಂದ್ರ ಸಂಪೂರ್ಣ ಸಿದ್ಧವಾಗಲಿದೆ. ಇಲ್ಲಿ ಪ್ರತಿ 100 ರೋಗಿಗೆ ಒಬ್ಬ ವೈದ್ಯ, ಇಬ್ಬರು ನರ್ಸ್‌, ಒಬ್ಬ ಸಹಾಯಕ, ಒಬ್ಬ ಸ್ವಚ್ಛತಾ ಸಿಬ್ಬಂದಿ ಮತ್ತು ಇಬ್ಬರು ಮಾರ್ಷಲ್‌ಗಳು ಸೇರಿದಂತೆ ಒಟ್ಟು 2200 ಸಿಬ್ಬಂದಿ ನಿಯೋಜಿಸಲಾಗುವುದು ಎಂದು ತಿಳಿಸಿದರು.

‘ಯಾವುದೇ ಸೋಂಕು ಲಕ್ಷಣಗಳಿಲ್ಲದ ಹಾಗೂ ಅತೀ ಕಡಿಮೆ ಲಕ್ಷಣಗಳಿರುವ ಸೋಂಕಿತರನ್ನು ಮಾತ್ರ ಈ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುವುದು. ಇಲ್ಲಿ ಸೋಂಕಿತರ ಚಿಕಿತ್ಸೆಗೆ ಅಗತ್ಯ ವೈದ್ಯಕೀಯ ಸೌಲಭ್ಯ, ಐಸಿಯು ಚಿಕಿತ್ಸಾ ಘಟಕ, ಇಸಿಜಿ, ಆಕ್ಸಿಜನ್‌ ಸೌಲಭ್ಯವಿರಲಿದೆ. ಜತೆಗೆ ಸಮೀಪದ ಆಸ್ಪತ್ರೆಯೊಂದಿಗೆ ಸಂಯೋಜನೆ ಮಾಡಿಕೊಂಡು ದಿನದ 24 ಗಂಟೆಯೂ ಸೋಂಕಿತರ ಮೇಲ್ವಿಚಾರಣೆ ನಡೆಸುವ ಕೊಠಡಿ ಸ್ಥಾಪಿಸಲಾಗಿದೆ. ಇಲ್ಲಿನ ವೈದ್ಯಕೀಯ ಮತ್ತು ಇತರೆ ತ್ಯಾಜ್ಯ ವಿಂಗಡಣೆ ಮತ್ತು ವಿಲೇವಾರಿ, ಸೋಂಕಿತರ ಬೆಡ್‌ಶೀಟ್‌, ಬ್ಲಾಂಕೆಟ್‌ ತೊಳೆಯಲು ಲಾಂಡ್ರಿ ವ್ಯವಸ್ಥೆ ಮಾಡಲಾಗಿದೆ. ಜತೆಗೆ, ಮನೋರಂಜನೆಗಾಗಿ ಟೀವಿ, ಇಂಟರ್‌ನೆಟ್‌, ಕೇರಂಬೋರ್ಡ್‌, ಚೆಸ್‌ ಮತ್ತಿತರ ಒಳಾಂಗಣ ಕ್ರೀಡೆಗಳಿಗೆ ವ್ಯವಸ್ಥೆ ಮಾಡಲಾಗಿದೆ. ಗ್ರಂಥಾಲಯ, ಪತ್ರಿಕೆಗಳನ್ನು ಓದಲು ಸೌಲಭ್ಯ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ ಮುಂದಿನ 5 ದಿನದಲ್ಲಿ ಭಾರೀ ಸಾವಿನ ಅಪಾಯ: 2977 ಹೈರಿಸ್ಕ್‌ ಪ್ರಕರಣ!

ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ:

ಇದೇ ವೇಳೆ, ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅವರು, ‘ಖಾಸಗಿ ಆಸ್ಪತ್ರೆಗಳು ಇಂದಿನ ಕೊರೋನಾ ಸಂದರ್ಭ ನಿಭಾಯಿಸಲು ಸರ್ಕಾರದ ಜೊತೆ ಕೈಜೋಡಿಸಬೇಕು. ನೇರ ತಮ್ಮ ಆಸ್ಪತ್ರೆಗೆ ಬರುವ ಸೋಂಕಿತರ ಸುಲಿಗೆ ನಡೆಸದೆ ಮಾನವೀಯತೆ ತೋರಬೇಕು. ಈ ಬಗ್ಗೆ ಈಗಾಗಲೇ ಸ್ಪಷ್ಟಸೂಚನೆ ನೀಡಲಾಗಿದೆ. ಇದನ್ನು ಮೀರಿ ಸುಲಿಗೆಗಿಳಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ಕಂದಾಯ ಸಚಿವ ಆರ್‌.ಅಶೋಕ್‌ ಮತ್ತಿತರರು ಉಪಸ್ಥಿತರಿದ್ದರು.

ಬೆಂಗಳೂರಿಗೆ ಅಷ್ಟದಿಕ್ಪಾಲಕರು: 8 ಸಚಿವರು, 8 ಐಎಎಸ್‌ಗಳಿಗೆ ಸೋಂಕು ನಿಯಂತ್ರಣ ಹೊಣೆ!

ಕೋವಿಡ್‌ ಕೇಂದ್ರದಲ್ಲಿ ರೋಬೋಟ್‌ ತಂತ್ರಜ್ಞಾನ

ಲಕ್ಷಣಗಳಿಲ್ಲದ ಹಾಗೂ ಕಡಿಮೆ ಲಕ್ಷಣ ಇರುವ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಬಿಐಇಸಿ ವ್ಯಾಪ್ತಿಯ ಐದು ಬೃಹತ್‌ ಹಾಲ್‌ಗಳಲ್ಲಿ 10,100 ಹಾಸಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಪೈಕಿ ಈಗಾಗಲೇ 8000 ಹಾಸಿಗೆ ಅಳವಡಿಕೆ ಪೂರ್ಣಗೊಂಡಿದ್ದು, ಇನ್ನು 2000 ಹಾಸಿಗೆ ಅಳವಡಿಕೆ ಬಾಕಿ ಇದೆ.

ಈ ಕೇಂದ್ರದಲ್ಲಿ ಅತ್ಯಾಧುನಿಕ ರೋಬೋಟ್‌ ತಂತ್ರಜ್ಞಾನದ ಮೂಲಕ ತಜ್ಞ ವೈದ್ಯರೊಂದಿಗೆ ವಿಡಿಯೋ ಸಂವಹನದ ಮೂಲಕ ತಮ್ಮ ಸಮಸ್ಯೆ ಹೇಳಿಕೊಂಡು ಸಿಬ್ಬಂದಿಗಳ ಮೂಲಕ ಅಗತ್ಯ ಔಷಧ ಪಡೆದುಕೊಳ್ಳಬಹುದಾದ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿ ಅವರಿಗೆ ಅಧಿಕಾರಿಗಳು ಈ ಬಗ್ಗೆ ಡೆಮೋ ತೋರಿಸುವ ಮೂಲಕ ಮಾಹಿತಿ ನೀಡಿದರು. ಜೊತೆಗೆ ಪ್ರತಿ ಎರಡು ಹಾಸಿಗೆಗೆ ಒಂದೊಂದು ಫ್ಯಾನ್‌, ರೋಗಿಗಳ ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳಲು ಪ್ರತ್ಯೇಕ ಟೇಬಲ್‌, ಕುಡಿಯುವ ನೀರು, ಪ್ರತ್ಯೇಕ ಶೌಚಾಲಯ, ಬೃಹತ್‌ ಊಟದ ಹಾಲ್‌ ವ್ಯವಸ್ಥೆ ಮಾಡಲಾಗಿದೆ.

ರಾಜ್ಯದಲ್ಲಿ ಗುಣಮುಖ ಆದವರಿಗೆ ಮತ್ತೆ ಕೊರೋನಾ: ಆತಂಕ!

ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಕೆಲ ಜಿಲ್ಲೆಗಳಲ್ಲಿ ನಮ್ಮ ಕೈಮೀರಿದೆ ಸೋಂಕು

ಕೊರೋನಾ ಕೆಲವು ಜಿಲ್ಲೆಗಳಲ್ಲಿ ನಮ್ಮ ಕೈಮೀರಿ ಹೋಗುತ್ತಿದೆ. ಹಾಗಂತ ಜನ ಆತಂಕಪಡುವ ಅಗತ್ಯ ಇಲ್ಲ. ಜಿಲ್ಲಾಡಳಿತವು ಸೋಂಕು ನಿಯಂತ್ರಣ ಸಂಬಂಧ ಸರ್ವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ. ಈ ಮೂಲಕ ಸೋಂಕು ತಡೆಗೆ ಶಕ್ತಿ ಮೀರಿ ಶ್ರಮಿಸುತ್ತಿದೆ. ಅಂಬ್ಯುಲೆನ್ಸ್‌, ಚಿಕಿತ್ಸೆ ಸೇರಿದಂತೆ ಎಲ್ಲಾ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

Follow Us:
Download App:
  • android
  • ios