ಬೆಂಗಳೂರು(ಜು.10): ರಾಜ್ಯ ರಾಜಧಾನಿಯಲ್ಲಿ ಕೊರೋನಾ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಡಿವಾಣ ಹಾಕಲು ನಗರದ ಹಿರಿಯ ಸಚಿವರು ಮತ್ತು ಐಎಎಸ್‌ ಅಧಿಕಾರಿಗಳ ತಂಡವನ್ನು ನಿಯೋಜನೆ ಮಾಡಿ ಸರ್ಕಾರವು ಮಹತ್ವದ ತೀರ್ಮಾನ ಕೈಗೊಂಡಿದೆ.

"

ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರೋನಾ ಕುರಿತು ಗಂಭೀರವಾಗಿ ಚರ್ಚೆ ನಡೆಯಿತು.

ಪ್ರಮುಖವಾಗಿ ಬೆಂಗಳೂರಲ್ಲಿ ದಿನೇ ದಿನೆ ಕೊರೋನಾ ಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ದಿಟ್ಟಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಿ ಎಂಟು ವಲಯಕ್ಕೂ ಒಬ್ಬೊಬ್ಬ ಸಚಿವರು, ಐಎಎಸ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌ ಅವರಿಗೂ ಜವಾಬ್ದಾರಿ ನೀಡಲಾಗಿದೆ.

ರಾಜ್ಯದಲ್ಲಿ ಮುಂದಿನ 5 ದಿನದಲ್ಲಿ ಭಾರೀ ಸಾವಿನ ಅಪಾಯ: 2977 ಹೈರಿಸ್ಕ್‌ ಪ್ರಕರಣ!

ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಸಚಿವರಾದ ವಿ.ಸೋಮಣ್ಣ, ಆರ್‌.ಅಶೋಕ್‌, ಬೈರತಿ ಬಸವರಾಜು, ಎಸ್‌.ಟಿ.ಸೋಮಶೇಖರ್‌, ಗೋಪಾಲಯ್ಯ, ಸುರೇಶ್‌ ಕುಮಾರ್‌ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌ಗೆ ಒಂದೊಂದು ವಲಯಗಳ ಜವಾಬ್ದಾರಿಯನ್ನು ವಹಿಸಲಾಗಿದೆ.

ಕೋವಿಡ್‌ 19 ನಿರ್ವಹಣಾ ಕ್ರಮಗಳ ಪುನರ್‌ ಪರಿಶೀಲನೆ ಮತ್ತು ಮೇಲ್ವಿಚಾರಣೆಯನ್ನು ಸಚಿವರು, ಅಧಿಕಾರಿಗಳು ನಿರ್ವಹಿಸಲಿದ್ದಾರೆ. ಬಿಬಿಎಂಪಿ ಜಂಟಿ ಆಯುಕ್ತರು, ಅಧಿಕಾರಿಗಳು, ನಿಗಮ/ಮಂಡಳಿಯ ಅಧಿಕಾರಿಗಳು ಎಲ್ಲರೂ ಅವರಿಗೆ ಅಗತ್ಯ ನೆರವು ನೀಡಬೇಕು ಎಂದು ಸರ್ಕಾರ ನಿರ್ದೇಶನ ನೀಡಿದೆ.

ಸೋಮಣ್ಣಗೆ ಪೂರ್ವ ವಲಯ:

ಸಚಿವ ಸೋಮಣ್ಣ ಅವರಿಗೆ ಪೂರ್ವ ವಲಯ ಹಾಗೂ ಆರ್‌.ಆರ್‌.ನಗರ ವಲಯ ಎಸ್‌.ಟಿ.ಸೋಮಶೇಖರ್‌ಗೆ ಹೊಣೆಗಾರಿಕೆ ವಹಿಸಿರುವುದು ಖಚಿತವಾಗಿದೆ. ಇನ್ನುಳಿದ ಸಚಿವರಿಗೆ ಯಾವ ವಲಯಗಳ ಜವಾಬ್ದಾರಿ ನೀಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಮೂಲಗಳ ಪ್ರಕಾರ ಪಶ್ಚಿಮ ವಲಯ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ದಕ್ಷಿಣ ವಲಯ ಆರ್‌.ಅಶೋಕ್‌, ಮಹದೇವಪುರ ವಲಯ ಬೈರತಿ ಬಸವರಾಜ್‌, ದಾಸರಹಳ್ಳಿ ವಲಯ ಗೋಪಾಲಯ್ಯ, ಬೊಮ್ಮನಹಳ್ಳಿ ವಲಯ ಸುರೇಶ್‌ ಕುಮಾರ್‌ಗೆ ವಹಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ವಿಶ್ವದ ಅತಿದೊಡ್ಡ ಆರೈಕೆ ಕೇಂದ್ರ ವಾರದಲ್ಲಿ ಶುರು: ಬೆಂಗಳೂರಲ್ಲಿ ಸಜ್ಜಾಗಿದೆ 10100 ಹಾಸಿಗೆಗಳ ಘಟಕ!

8 ಸಚಿವರು

1. ಡಾ| ಅಶ್ವತ್ಥನಾರಾಯಣ

2. ವಿ.ಸೋಮಣ್ಣ

3. ಆರ್‌.ಅಶೋಕ್‌

4. ಬೈರತಿ ಬಸವರಾಜು

5. ಎಸ್‌.ಟಿ.ಸೋಮಶೇಖರ್‌

6. ಕೆ.ಗೋಪಾಲಯ್ಯ

7. ಸುರೇಶ್‌ ಕುಮಾರ್‌

8. ಎಸ್‌.ಆರ್‌.ವಿಶ್ವನಾಥ್‌

ರಾಜ್ಯದಲ್ಲಿ ಗುಣಮುಖ ಆದವರಿಗೆ ಮತ್ತೆ ಕೊರೋನಾ: ಆತಂಕ!

ಅಧಿಕಾರಿಗಳು ಯಾರು?

ತುಷಾರ್‌ ಗಿರಿನಾಥ್‌ಗೆ ಬೆಂಗಳೂರು ಪೂರ್ವ, ರಾಜೇಂದ್ರ ಕುಮಾರ್‌ ಕಠಾರಿಯಾಗೆ ಬೆಂಗಳೂರು ಪಶ್ಚಿಮ, ಪಿ.ಮಣಿವಣ್ಣನ್‌ಗೆ ಬೊಮ್ಮನಹಳ್ಳಿ, ನವೀನ್‌ ರಾಜ್‌ ಸಿಂಗ್‌ಗೆ ಯಲಹಂಕ, ಮುನಿಷ್‌ ಮೌದ್ಗಿಲ್‌ಗೆ ಬೆಂಗಳೂರು ದಕ್ಷಿಣ, ಡಾ.ಎನ್‌.ಮಂಜುಳಾಗೆ ಮಹಾದೇವಪುರ, ಡಾ.ಪಿ.ಸಿ.ಜಾಫರ್‌ಗೆ ದಾಸರಹಳ್ಳಿ, ಡಾ.ಆರ್‌.ವಿಶಾಲ್‌ಗೆ ರಾಜರಾಜೇಶ್ವರಿನಗರ ವಲಯದ ಹೊಣೆಗಾರಿಕೆ ವಹಿಸಲಾಗಿದೆ.