ಬೆಂಗಳೂರು(ಜು.10): ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖವಾಗಿ ಬಿಡುಗಡೆಯಾಗುತ್ತಿರುವ ಹಲವರಿಗೆ ಮತ್ತೆ ಸೋಂಕು ದೃಢಪಟ್ಟಿದೆ ಎಂಬ ಆತಂಕಕಾರಿ ವಿಷಯವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ರಾಜ್ಯದಲ್ಲಿ ಗುಣಮುಖರಾದ ಸೋಂಕಿತರ ಬಿಡುಗಡೆಗೆ ಈ ಮೊದಲು ಇದ್ದ ಮಾರ್ಗಸೂಚಿ ಪ್ರಕಾರ 14 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಸತತ ಎರಡು ಬಾರಿ ನೆಗೆಟಿವ್‌ ವರದಿ ಬಂದ ಬಳಿಕ ಬಿಡುಗಡೆ ಮಾಡಲಾಗಿದ್ದವರಿಗೂ ಮತ್ತೆ ಸೋಂಕು ದೃಢಪಟ್ಟಿದೆ. ಇಂತಹ ಹತ್ತಾರು ಸೋಂಕು ಮರುಕಳಿಸಿರುವ ಪ್ರಕರಣಗಳು ವರದಿಯಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಪಟ್ಟಿಮಾತ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡುತ್ತಿಲ್ಲ.

ಕನ್ನಡಪ್ರಭಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಉದಾಹರಣೆಗೆ ಬೆಳಗಾವಿಯ ಕುಡಚಿಯಲ್ಲಿ ಏಪ್ರಿಲ್‌ 15 ರಂದು ಆಸ್ಪತ್ರೆಗೆ ದಾಖಲಾಗಿದ್ದ 50 ವರ್ಷದ ತಬ್ಲೀಘಿ ಹಿನ್ನೆಲೆಯ ವ್ಯಕ್ತಿಗೆ (298ನೇ ಸೋಂಕಿತ) ಏಪ್ರಿಲ್‌ 28 ಹಾಗೂ ಮೇ 1 ರಂದು ಪರೀಕ್ಷೆ ನಡೆಸಿ ಎರಡೂ ನೆಗೆಟಿವ್‌ ಬಂದ ಬಳಿಕ ಬಿಡುಗಡೆ ಮಾಡಲಾಗಿತ್ತು. ಬಳಿಕ ಹೃದಯ ಸಮಸ್ಯೆ ಕಾಣಿಸಿಕೊಂಡು ಮೇ 9 ರಂದು ಆಸ್ಪತ್ರೆಗೆ ದಾಖಲಾದಾಗ ಪರೀಕ್ಷೆ ನಡೆಸಿದರೆ ಮತ್ತೆ ಸೋಂಕು ದೃಢಪಟ್ಟಿತ್ತು. ಎರಡನೇ ಪರೀಕ್ಷೆ ನಡೆಸಿದಾಗಲೂ ಸೋಂಕು ದೃಢವಾಗಿದ್ದರಿಂದ ಮತ್ತೆ ಕೊರೋನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂತಹ ಪ್ರಕರಣಗಳು ಹಲವು ರಾಜ್ಯದಲ್ಲಿ ನಡೆದಿವೆ. ಆದರೆ ಇವರಿಗೆ ಹೆಚ್ಚು ಸಮಸ್ಯೆಯಾಗಲ್ಲ ಎಂದು ಮಾಹಿತಿ ನೀಡಿದರು.

ನೆಗೆಟಿವ್‌ ಬರುವ ಮೊದಲೇ ಬಿಡುಗಡೆ!

ಇದಲ್ಲದೆ, ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಜತೆಗೆ ಸೋಂಕು ಗುಣವಾಗುವ ಮೊದಲೇ ಬಿಡುಗಡೆಯಾಗುತ್ತಿರುವ ಸರ್ಕಾರದ ನಿಯಮದಿಂದಾಗಿ ಹೊಸ ಆತಂಕ ಸೃಷ್ಟಿಯಾಗಿದೆ. ಈ ನಿಯಮದ ಲಾಭ ಪಡೆದು ಬಿಡುಗಡೆಯಾಗುವ ವ್ಯಕ್ತಿಗಳು ಕೆಲ ದಿನಗಳ ನಂತರ ಮತ್ತೆ ಪರೀಕ್ಷೆ ಮಾಡಿದಾಗ ಪಾಸಿಟಿವ್‌ ಬರುತ್ತಿದ್ದಾರೆ.

ತಾಜ್‌ವೆಸ್ಟೆಂಡ್‌ ಹೋಟೆಲ್‌ನ ಸಿಬ್ಬಂದಿಯೊಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು 10 ದಿನ ಕಳೆದ ಬಳಿಕ ಸೋಂಕು ಪರೀಕ್ಷೆ ನಡೆಸದೇ ಮನೆಗೆ ಕಳುಹಿಸಿದ್ದರು. ಆಸ್ಪತ್ರೆಯಿಂದ ಬಿಡುಗಡೆಯಾದ ವ್ಯಕ್ತಿ ಕೆಲಸಕ್ಕೆ ಹಾಜರಾಗಲು ಹೋಟೆಲ್‌ ವ್ಯವಸ್ಥಾಪಕರನ್ನು ಕೋರಿದಾಗ ಅವರು, ಕೊರೋನಾ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಸೂಚಿಸಿದ್ದರು. ಇದರಿಂದ ಮಲ್ಲಿಗೆ ಆಸ್ಪತ್ರೆಯಲ್ಲಿ ಸ್ವಾಬ್‌ ಪರೀಕ್ಷೆ ನಡೆಸಿದರೆ ಕೊರೋನಾ ಸೋಂಕು ದೃಢಪಟ್ಟಿದೆ.

ಈ ಬಗ್ಗೆ ಪ್ರಶ್ನಿಸಿದರೆ, ರಾಜ್ಯ ಸರ್ಕಾರವು ಜೂ.26ರಂದು ಕೊರೋನಾ ಸೋಂಕು ದೃಢಪಟ್ಟ10 ದಿನಗಳ ಬಳಿಕ ವ್ಯಕ್ತಿಗೆ ಸೋಂಕು ಲಕ್ಷಣಗಳು, ಜ್ವರ ಇಲ್ಲದಿದ್ದರೆ ಪರೀಕ್ಷೆ ನಡೆಸದೆಯೇ ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು ಎಂದು ಹೇಳಲಾಗಿದೆ. ಹೀಗಾಗಿ ಬಿಡುಗಡೆ ಮಾಡಿದ್ದೇವೆ ಎಂದು ಬಿಎಂಆರ್‌ಸಿಐ ನಿರ್ದೇಶಕಿ ಡಾ.ಸಿ.ಎನ್‌. ಜಯಂತಿ ಹೇಳುತ್ತಾರೆ.

ರಾಜ್ಯ ಸರ್ಕಾರವು ಸೋಂಕಿತರನ್ನು ಸಂಪೂರ್ಣ ಗುಣಮುಖವಾಗುವ ಮೊದಲೇ ಬಿಡುಗಡೆ ಮಾಡುತ್ತಿರುವುದರಿಂದ ಕುಟುಂಬ ಸದಸ್ಯರೂ ಕೊರೋನಾ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದ ಸಂಬಂಧ ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌, ಕೊರೋನಾ ವೈರಸ್‌ ವ್ಯಕ್ತಿಯ ದೇಹದಲ್ಲಿ 10 ದಿನ ಮಾತ್ರ ಬದುಕಿರುತ್ತದೆ. ಏಮ್ಸ್‌ ಆಸ್ಪತ್ರೆ ನಿರ್ದೇಶಕ ಡಾ.ರಣದೀಪ್‌ ಬುಲೇರಿಯಾ ಪ್ರಕಾರ ಸೋಂಕು ಲಕ್ಷಣಗಳಿಲ್ಲದ ವ್ಯಕ್ತಿಯು 10 ದಿನದ ಬಳಿಕ ಬಿಡುಗಡೆಯಾಗಬಹುದು. 10 ದಿನದ ಬಳಿಕ ಪರೀಕ್ಷೆ ನಡೆಸಿದರೂ ಆತನಲ್ಲಿ ವೈರಸ್‌ ಪಾಸಿಟಿವ್‌ ಬರುತ್ತದೆ. ಸತ್ತಿರುವ ವೈರಸ್‌ ಇನ್ನೂ ದೇಹದಲ್ಲಿರುವುದರಿಂದ ಪಾಸಿಟಿವ್‌ ಬರಬಹುದು. ಆದರೆ ಅವರಿಂದ ಯಾರಿಗೂ ಸೋಂಕು ಹರಡಲ್ಲ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಹೀಗಾಗಿ ರಾಜ್ಯದಲ್ಲೂ 10 ದಿನಗಳಿಗೆ ಬಿಡುಗಡೆ ಮಾಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು.