ಬೆಂಗಳೂರು (ಡಿ.19): ಇಂದಿರಾ ಕ್ಯಾಂಟೀನ್‌ ಯೋಜನೆಯ ಬಗ್ಗೆ ಸಾಕಷ್ಟುದೂರು, ಅವ್ಯವಹಾರದ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ಯೋಜನೆ ಮುಂದುವರೆಸುವ ಬಗ್ಗೆ ಶಾಸಕರು, ಸಚಿವರು ಹಾಗೂ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯೋಜನೆಗೆ ಪ್ರತಿವರ್ಷ ವೆಚ್ಚ ಮಾಡುವ 300 ಕೋಟಿ ರು.ಗಿಂತ ಹೆಚ್ಚು ಹಣದಿಂದ ಬಡವರಿಗೆ ಅನುಕೂಲ ಆಗಬೇಕು. ಬಡವರಿಗೆ ಅನುಕೂಲ ಆಗದಿದ್ದರೆ ಅಂತಹ ಯೋಜನೆ ಬೇಕೇ, ಬೇಡವೇ ಎಂಬ ಬಗ್ಗೆ ಚಿಂತನೆ ಮಾಡಬೇಕಾಗುತ್ತದೆ. ಬಡವರಿಗೆ ಬಿಸಿ ಆಹಾರ ಪದಾರ್ಥ ನೀಡದೇ ಎಲ್ಲೋ ತಯಾರಿಸಿದ್ದನ್ನು ನೀಡುವಷ್ಟರಲ್ಲಿ ತಣ್ಣಗಾಗಿರುತ್ತದೆ. ಕ್ಯಾಂಟೀನ್‌ನಲ್ಲಿ ಮೂರ್ನಾಲ್ಕು ಜನರು ಇರುತ್ತಾರೆ, ಆದರೆ ಸುಳ್ಳು ಅಂಕಿ-ಅಂಶ ನೀಡಿ ಹಣ ಲಪಟಾಯಿಸುತ್ತಿರುವ ದೂರುಗಳಿವೆ. ಈ ಯೋಜನೆ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟುಚರ್ಚೆಯಾಗಿದೆ. ಬೇರೆ ಬೇರೆ ರೀತಿಯ ತನಿಖೆಗಳು ನಡೆದಿವೆ. ಈ ಎಲ್ಲ ತನಿಖಾ ವರದಿ ತರಿಸಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಅನೇಕ ಹೆಸರು ಪ್ರಸ್ತಾವನೆ:

ಇಂದಿರಾ ಕ್ಯಾಂಟೀನ್‌ ಬದಲಾಗಿ ಬೇರೆ ಹೆಸರಿಡಬೇಕೆಂದು ಅನೇಕ ಶಾಸಕರು ಸಲಹೆ ನೀಡಿದ್ದಾರೆ. ಶಾಸಕ ರಾಜುಗೌಡ ಅವರು ಮಹರ್ಷಿ ವಾಲ್ಮೀಕಿ ಹೆಸರನ್ನು, ಸಚಿವ ಸಿ.ಟಿ.ರವಿ ಅವರು ‘ಅನ್ನಪೂರ್ಣ’ ಎಂದು, ಎಸ್‌.ಸುರೇಶ ಕುಮಾರ್‌ ‘ಅನ್ನ ಕುಟೀರ’ ಎಂದು ಹೆಸರಿಡುವಂತೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಎಲ್ಲರ ಅಭಿಪ್ರಾಯ ಪಡೆದು, ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕ್ಯಾಂಟೀನ್ ಮುಚ್ಚಲ್ಲ

ರಾಜ್ಯದಲ್ಲಿ ಯಾವ ಜನರೂ ಊಟಕ್ಕಿಲ್ಲದ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಇಂದಿರಾ ಕ್ಯಾಂಟೀನ್‌ ಮುಚ್ಚುವಂತೆ ನಾನೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತೇನೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಅಲ್ಲದೆ, ಒಂದು ವೇಳೆ ಮುಖ್ಯಮಂತ್ರಿಗಳು ಇಂದಿರಾ ಕ್ಯಾಂಟೀನ್‌ ಯೋಜನೆ ಮುಂದುವರಿಸಲೇಬೇಕು ಎಂದು ಎಂದು ಉದ್ದೇಶಿಸಿದರೆ ‘ಅನ್ನಪೂರ್ಣೇಶ್ವರಿ ಕ್ಯಾಂಟೀನ್‌’ ಎಂದು ಹೆಸರಿಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾವಿನ್ನೂ ಸತ್ತಿಲ್ಲ : ಡಿ.ಕೆ.ಶಿವಕುಮಾರ್ ಎಚ್ಚರಿಕೆ ...

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಊಟಕ್ಕೂ ಇಲ್ಲದ ಸ್ಥಿತಿಯಲ್ಲಿ ಜನರು ಇಲ್ಲ. ಜನರಿಗೆ ಊಟ ಹಾಕುವ ಹೆಸರಿನಲ್ಲಿ ಹಣ ಮಾಡಲು ಹಿಂದಿನ ಕಾಂಗ್ರೆಸ್‌ ಸರ್ಕಾರ ಈ ಕಾರ್ಯಕ್ರಮ ಮಾಡಿದೆ. ಹೀಗಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಇಂದಿರಾ ಕ್ಯಾಂಟೀನ್‌ ಮುಚ್ಚುವಂತೆ ಮನವಿ ಮಾಡುತ್ತೇನೆ ಎಂದರು.

ಒಂದು ವೇಳೆ ಇಂದಿರಾ ಕ್ಯಾಂಟೀನ್‌ ಯೋಜನೆ ಮುಂದುವರೆಸಬೇಕಾದರೆ ‘ಅನ್ನಪೂರ್ಣೇಶ್ವರಿ’ ಕ್ಯಾಂಟೀನ್‌ ಎಂಬ ಹೆಸರು ಇಡಬೇಕು. ಇದು ದೇಶದ ಸಂಸ್ಕೃತಿಯ ಪ್ರತೀಕವಾಗುತ್ತದೆ. ಇಂದಿರಾ ಕ್ಯಾಂಟೀನ್‌ ಹೆಸರೇ ಬೇಕೆಂದರೆ ಕಾಂಗ್ರೆಸ್ಸಿನವರು ಈವರೆಗೂ ಲೂಟಿ ಹೊಡೆದಿರುವ ಹಣದಲ್ಲಿ ಕ್ಯಾಂಟೀನ್‌ ಮಾಡಲಿ. ಲೂಟಿ ಹೊಡೆದ ಹಣದಲ್ಲಿ ಅನ್ನ ಹಾಕಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದಾದರೆ ಇಂದಿರಾ ಗಾಂಧಿ ಕುಟುಂಬದ ಸದಸ್ಯರೆಲ್ಲರ ಹೆಸರಲ್ಲೂ ಕ್ಯಾಂಟೀನ್‌ ಮಾಡಲಿ. ಸೋನಿಯಾ ಗಾಂಧಿ ಹೆಸರಿನಲ್ಲಿ ಮಾಂಸಾಹಾರಿ ಕ್ಯಾಂಟೀನ್‌ ಕೂಡ ತೆರೆಯಲಿ ಎಂದು ಸಚಿವರು ವ್ಯಂಗ್ಯವಾಗಿ ಹೇಳಿದರು