ಬೆಂಗಳೂರು [ಮಾ.09]:  ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ಕೆಎಸ್‌ಟಿಡಿಸಿ) ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪೌರಕಾರ್ಮಿಕರು, ಅಂಗನವಾಡಿ ಕಾರ್ಯರ್ತೆಯರು ಸೇರಿದಂತೆ ಇತರೆ 50 ಜನ ಶ್ರಮಿಕ ಮಹಿಳೆಯರ ಎರಡು ದಿನಗಳ ಉಚಿತ ಪ್ರವಾಸಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಯಶವಂತಪುರ ಬಸ್‌ ನಿಲ್ದಾಣದ ಕೆಎಸ್‌ಟಿಡಿಸಿ ಕಚೇರಿ ಮುಂಭಾಗ ಪ್ರವಾಸಿಗರನ್ನು ಹೊತ್ತು ಸಾಗಿದ ನಿಗಮದ ಎರಡು ಬಸ್ಸುಗಳಿಗೆ ಸಂಸದೆ ಶೋಭಾ ಕರಂದ್ಲಾಜೆ ಮತ್ತು ನಿಗಮದ ಅಧ್ಯಕ್ಷೆ ನಟಿ ಶೃತಿ ಕೃಷ್ಣ ಹಸಿರು ನಿಶಾನೆ ತೋರಿದರು.

ಬಳಿಕ ಮಾತನಾಡಿದ ಶೋಭಾ ಕರಂದ್ಲಾಜೆ, ಮಹಿಳಾ ಪ್ರವಾಸಿಗರನ್ನು ಪ್ರೋತ್ಸಾಹಿಸುವ ಸಲುವಾಗಿ ಕೆಎಸ್‌ಟಿಡಿಸಿಯಿಂದ ಪೌರಕಾರ್ಮಿಕರು, ಅಂಗನವಾಡಿ ಕಾರ್ಯರ್ತೆಯರು, ಕೊಳಗೇರಿ ನಿವಾಸಿಗಳು ಸೇರಿ ಶ್ರಮಿಕ ವರ್ಗದ ಮಹಿಳೆಯನ್ನು ಉಚಿತ ಪ್ರವಾಸಕ್ಕೆ ಆಯ್ಕೆ ಮಾಡಿರುವುದು ಶ್ಲಾಘನೀಯ. ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ದೇಶದ ಸಂಸತ್ತು, ಎಲ್ಲ ರಾಜ್ಯಗಳ ವಿಧಾನಸಭೆ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಹಕ್ಕು, ರಕ್ಷಣೆ, ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕು. ಆಡಳಿತ ನಡೆಸುವ ಎಲ್ಲ ಸರ್ಕಾರಗಳು ಮಹಿಳಾ ರಕ್ಷಣೆಗೆ ವಿಶೇಷ ಗಮನ ಕೊಡಬೇಕು ಎಂದರು.

ಮಹಿಳಾ ದಿನಾಚರಣೆ: ಬೆಂಗಳೂರು ವಿದ್ಯಾರ್ಥಿನಿಗೆ ಒಂದು ದಿನದ ಇನ್ಸ್‌ಸ್ಪೆಕ್ಟರ್ ಗೌರವ!...

ಶೃತಿ ಮಾತನಾಡಿ, ಪ್ರವಾಸ ಮಾಡುವ ಶಕ್ತಿ ಇಲ್ಲದ ಮಹಿಳೆಯರನ್ನು ಉಚಿತ ಪ್ರವಾಸಕ್ಕೆ ಆಯ್ಕೆ ಮಾಡಿದ್ದೇವೆ. ಅನಾಥ ಮಹಿಳೆಯರು ಕೂಡ ಇದರಲ್ಲಿದ್ದಾರೆ. ಇವರಿಗೆ ಮೈಸೂರು, ಚಾಮುಂಡಿಬೆಟ್ಟ, ಶ್ರೀರಂಗಪಟ್ಟಣ ಮತ್ತಿತರ ಪ್ರದೇಶಗಳನ್ನು ಸುತ್ತಿಬರಲಿದ್ದಾರೆ. ಮಹಿಳೆಯರನ್ನು ಪ್ರವಾಸಕ್ಕೆ ಉತ್ತೇಜಿಸಬೇಕಾಗಿದೆ. ಪ್ರವಾಸದ ವೇಳೆ ನಿಗಮದ ಮಯೂರ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡುವ ಮಹಿಳೆಯರಿಗೆ ಕೊಠಡಿ ದರದಲ್ಲಿ ವರ್ಷಪೂರ್ತಿ ಶೇ.25ರಷ್ಟುರಿಯಾಯಿತಿ ಕೊಡುಗೆ ನೀಡಲಾಗುವುದು ಎಂದರು. ಈ ವೇಳೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ಪುಷ್ಕರ್‌ ಮತ್ತಿತರರು ಉಪಸ್ಥಿತರಿದ್ದರು.

ನಿರ್ಭಯ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಮಾ.20ರಂದು ಗಲ್ಲುಶಿಕ್ಷೆಯಾಗುವ ವಿಶ್ವಾಸವಿದೆ. ಆ ಮೂಲಕ ಅತ್ಯಾಚಾರಿಗಳು ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶ ದೇಶಕ್ಕೆ ಹೋಗಬೇಕು. ಅಪರಾಧಿಗಳ ಪರ ವಕೀಲರು, ಮತ್ತಿತರರು ಮಾತನಾಡುವುದನ್ನು ನೋಡಿದರೆ ಭಯವಾಗುತ್ತದೆ. ಅವರ ಮನೆಯ ಹೆಣ್ಣು ಮಕ್ಕಳಿಗೆ ಈ ರೀತಿ ಆಗಿದ್ದರೆ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಬೇಕಾಗಿದೆ.

-ಶೋಭಾ ಕರಂದ್ಲಾಜೆ, ಸಂಸದೆ ಹೇಳಿದರು.