ಬಿಬಿಎಂಟಿಸಿ ಬಸ್‌ಗಳಲ್ಲಿ ಸಂಚಾರ ಕೈಗೊಂಡು ಮಹಿಳಾ ಸುರಕ್ಷತಾ ಕಾರ್ಯಕ್ರಮಗಳ ಕುರಿತು ಮಹಿಳಾ ಪ್ರಯಾಣಿಕರ ಜತೆ ಸಂವಾದ ನಡೆಸಿ ಆಯುಕ್ತ ಬಿ.ದಯಾನಂದ್‌ ಸೇರಿದಂತೆ ನಗರದ ಪೊಲೀಸರು ಸೋಮವಾರ ಅರಿವು ಮೂಡಿಸಿದರು.

ಬೆಂಗಳೂರು (ಜೂ.20) ಬಿಬಿಎಂಟಿಸಿ ಬಸ್‌ಗಳಲ್ಲಿ ಸಂಚಾರ ಕೈಗೊಂಡು ಮಹಿಳಾ ಸುರಕ್ಷತಾ ಕಾರ್ಯಕ್ರಮಗಳ ಕುರಿತು ಮಹಿಳಾ ಪ್ರಯಾಣಿಕರ ಜತೆ ಸಂವಾದ ನಡೆಸಿ ಆಯುಕ್ತ ಬಿ.ದಯಾನಂದ್‌ ಸೇರಿದಂತೆ ನಗರದ ಪೊಲೀಸರು ಸೋಮವಾರ ಅರಿವು ಮೂಡಿಸಿದರು.

ನಗರ ವ್ಯಾಪ್ತಿ ಬಿಎಂಟಿಸಿ ಬಸ್‌ನಲ್ಲಿ ಸಂಜೆ 4.30 ರಿಂದ 6.30ರವರೆಗೆ ಏಕಕಾಲಕ್ಕೆ ಆಯುಕ್ತ ದಯಾನಂದ್‌ ಒಳಗೊಂಡಂತೆ ಎಲ್ಲ ಪೊಲೀಸರು ಪ್ರತ್ಯೇಕವಾಗಿ ಪ್ರಯಾಣಿಸಿ ಜಾಗೃತಿ ಅಭಿಯಾನ ನಡೆಸಿದರು. ಈ ವೇಳೆ ಸುರಕ್ಷತೆ ವ್ಯವಸ್ಥೆ ಬಗ್ಗೆ ಮಹಿಳಾ ಪ್ರಯಾಣಿಕರಿಂದ ಆಹವಾಲು ಆಲಿಸಿದ ಪೊಲೀಸರು, ಮಹಿಳೆಯರಿಂದ ಸಲಹೆಗಳನ್ನು ಕೂಡ ಪಡೆದರು. ತುರ್ತು ಸಂದರ್ಭದಲ್ಲಿ ಸ್ಪಂದನೆಗೆ ನಮ್ಮ-112, ಸುರಕ್ಷತಾ ದ್ವೀಪಗಳ ಸ್ಥಾಪನೆ ಹಾಗೂ ಮಹಿಳಾ ಠಾಣೆಗಳ ಕಾರ್ಯನಿರ್ವಹಣೆ ಬಗ್ಗೆ ಪೊಲೀಸರು ಕರಪತ್ರ ವಿತರಿಸಿ ವಿವರಿಸಿದ್ದಾರೆ.

‘ಸುಳ್ಳು ಕೇಸ್‌ ಹಾಕಿದರೆ ಎಸಿಪಿಗಳೂ ಹೊಣೆ: ನಗರ ಪೊಲೀಸ್ ಆಯುಕ್ತ ದಯಾನಂದ್ ಖಡಕ್ ಎಚ್ಚರಿಕೆ!

ಶಿವಾಜಿನಗರದಿಂದ ದೇವನಹಳ್ಳಿ ಮಾರ್ಗದ ಬಸ್‌ನಲ್ಲಿ ಆಯುಕ್ತ ದಯಾನಂದ್‌, ಮೆಜೆಸ್ಟಿಕ್‌ನಿಂದ ಲಗ್ಗೆರೆ ಬಸ್‌ನಲ್ಲಿ ಹೆಚ್ಚುವರಿ ಆಯುಕ್ತ ಸಂದೀಪ್‌ ಪಾಟೀಲ್‌, ಮಾರತ್ತಹಳ್ಳಿ ಮಾರ್ಗದಲ್ಲಿ ಹೆಚ್ಚುವರಿ ಆಯುಕ್ತ ಎಂ.ಚಂದ್ರಶೇಖರ್‌ ಹಾಗೂ ಕಾಫಿ ಬೋರ್ಡ್‌ನಿಂದ ಮೆಜೆಸ್ಟಿಕ್‌, ಯಶವಂತಪುರ ಮಾರ್ಗದಲ್ಲಿ ಜಂಟಿ ಆಯುಕ್ತ ಎಂ.ಎನ್‌.ಅನುಚೇತ್‌ ಸಂಚಾರ ನಡೆಸಿದರು. ಅಲ್ಲದೆ ಎಲ್ಲ ಡಿಸಿಪಿ, ಎಸಿಪಿ, ಇನ್ಸ್‌ಪೆಕ್ಟರ್‌ ಹಾಗೂ ಸಬ್‌ ಇನ್ಸ್‌ ಪೆಕ್ಟರ್‌ ಸೇರಿದಂತೆ ಎಲ್ಲ ಪೊಲೀಸರು ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದರು.

ನಗರ ಸುರಕ್ಷತೆ ಬಗ್ಗೆ ಪ್ರಾಮುಖ್ಯತೆ ನೀಡಿ ಯೋಜನೆ ರೂಪಿಸುತ್ತಿರುವ ಆಯುಕ್ತ ದಯಾನಂದ್‌ ಅವರು, ಬಿಎಂಟಿಸಿ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರ ಜತೆ ಸಂವಾದಿಸಿ ಸುರಕ್ಷತೆ ಬಗ್ಗೆ ಅರಿವು ಮೂಡಿಸಿದ್ದಾರೆ.

ಶಕ್ತಿ ಯೋಜನೆ ಪರಿಣಾಮ ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರ ಓಡಾಟ ಹೆಚ್ಚಾಗಿದೆ. ಹೀಗಾಗಿ ಬಸ್‌ಗಳ ಪ್ರಯಾಣದ ವೇಳೆ ಮಹಿಳೆಯರಿಗೆ ಎದುರಿಸುವ ಅಸುರಕ್ಷತೆ ಬಗ್ಗೆ ಖದ್ದು ಅವರಿಂದ ತಿಳಿಯುವ ಸಲುವಾಗಿ ಜಾಗೃತಿ ಅಭಿಯಾನ ನಡೆಸಲಾಯಿತು ಎಂದು ಆಯುಕ್ತ ಬಿ.ದಯಾನಂದ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಪೊಲೀಸ್‌ ಠಾಣೆಗಳಲ್ಲಿ ಆಯೋಜಿಸುವ ಜನ ಸಂಪರ್ಕ ಸಭೆ ಅಥವಾ ಬೇರೆ ಯಾವುದೇ ವೇದಿಕೆಗಳಲ್ಲಿ ಮುಕ್ತವಾಗಿ ಮಹಿಳೆಯರು ಪಾಲ್ಗೊಂಡು ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಈ ರೀತಿಯ ಸಭೆಗಳಲ್ಲಿ ಕೆಲವು ಸುಶಿಕ್ಷತ ಮಹಿಳೆಯರ ಹೊರತುಪಡಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪುರುಷ ಪ್ರಧಾನವಾಗಿರುತ್ತವೆ. ಇನ್ನು ಠಾಣೆಗಳ ಕಡೆಗೆ ಮಹಿಳೆಯರು ಸುಳಿಯುವುದಿಲ್ಲ. ಹೀಗಾಗಿ ನೇರವಾಗಿ ಮಹಿಳೆಯರನ್ನು ಭೇಟಿಯಾಗಿ ಅವರಲ್ಲಿ ಅಭದ್ರತೆ ಆತಂಕ ನಿವಾರಿಸಿ ಧೈರ್ಯ ತುಂಬುವ ಪ್ರಯತ್ನವಾಗಿತ್ತು ಎಂದು ಹೇಳಿದರು.

ಸುರಕ್ಷತಾ ದ್ವೀಪಗಳ ಸ್ಥಾಪನೆ

ನಗರ ವ್ಯಾಪ್ತಿಯ ಸೇಫ್‌ ಸಿಟಿ ಯೋಜನೆಯಡಿ ಜನ ಸಂದಣಿ ಹಾಗೂ ಮಹಿಳೆಯರು ಹೆಚ್ಚು ಓಡಾಡುವ 30 ಪ್ರದೇಶಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ‘ಸುರಕ್ಷತಾ ದ್ವೀಪ’ (ಸೇಫ್ಟಿಐಲ್ಯಾಂಡ್‌)ಗಳನ್ನು ಪೊಲೀಸರು ಸ್ಥಾಪಿಸಿದ್ದಾರೆ. ಯಾರೋ ಕಿಡಿಗೇಡಿ ಬೆನ್ನಹತ್ತಿದ್ದಾಗ ಸೇರಿದಂತೆ ಸಂಕಷ್ಟಕ್ಕೆ ಸಿಲುಕಿದ ಮಹಿಳೆಯರು, ಈ ಸುರಕ್ಷತಾ ದ್ವೀಪಗಳಿಗೆ ತೆರಳಿ ಅಲ್ಲಿನ ಕರಗಂಟೆ ಒತ್ತಿದರೆ ಕೂಡಲೇ ಪೊಲೀಸ್‌ ನಿಯಂತ್ರಣ ಕೊಠಡಿ (ಕಮಾಂಡ್‌ ಸೆಂಟರ್‌)ಯಲ್ಲಿ ಅಲಾರಂ ಶಬ್ಧವಾಗಲಿದೆ. ಆ ತುರ್ತು ಸಂದೇಶವನ್ನು ಪೊಲೀಸ್‌ ನಿಯಂತ್ರಣ ಕೊಠಡಿಯಿಂದ ಹೊಯ್ಸಳ ಸಿಬ್ಬಂದಿಗೆ ರವಾನೆಯಾಗಲಿದೆ. ಇದಾದ ಕೆಲವೇ ನಿಮಿಷದಲ್ಲಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಪೊಲೀಸರ ನೆರವು ಸಿಗಲಿದೆ. ಈ ದ್ವೀಪಗಳಲ್ಲಿ ಸಿಸಿಟಿವಿ ಕ್ಯಾಮೆರಾ ಸಹ ಅಳವಡಿಸಲಾಗಿದ್ದು, ಅವು ನೇರವಾಗಿ ಕಮಾಂಡ್‌ ಸೆಂಟರ್‌ನಿಂದ ನಿರ್ವಹಣೆಯಾಗಲಿವೆ. ಹೀಗಾಗಿ ದ್ವೀಪದಲ್ಲಿ ನಿಂತ ಮಹಿಳೆಯರ ಸುಳ್ಳು ಹೇಳಿದರೆ ಸಹ ಸಿಬ್ಬಂದಿಗೆ ಗೊತ್ತಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Bengaluru: ಮಾನ್ಯತಾ ಟೆಕ್‌ ಪಾರ್ಕ್ ಪೊಲೀಸರ ಸುಲಿಗೆ ಪ್ರಕರಣ: ಇಬ್ಬರು ಪೊಲೀಸ್ ಸಿಬ್ಬಂದಿ ಸೇವೆಯಿಂದ ವಜಾ

ಶಕ್ತಿ ಯೋಜನೆ ಬಳಿಕ ಬಿಎಂಟಿಸಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ಅಭಿಯಾನ ಸಂಬಂಧ ಎಲ್ಲ ಡಿಸಿಪಿಗಳಿಂದ ವರದಿ ಪಡೆದಿ ದ್ದೇನೆ. ಮಹಿಳೆಯರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಸುರಕ್ಷತಾ ವ್ಯವಸ್ಥೆ ಮತ್ತಷ್ಟುಬಲಪಡಿಸಲಾಗುತ್ತದೆ.

-ಬಿ.ದಯಾನಂದ್‌, ಪೊಲೀಸ್‌ ಆಯುಕ್ತ, ಬೆಂಗಳೂರು