*  ವಿಧಾನಸೌಧದ 3 ಅತ್ಯುನ್ನತ ಹುದ್ದೆಗಳು ಈಗ ಸ್ತ್ರೀಯರ ಕೈಲಿ*  39ನೇ ಸಿಎಸ್‌: ಮುಂದಿನ ವರ್ಷ ನವೆಂಬರ್‌ಗೆ ಅಧಿಕಾರ ಅಂತ್ಯ*  ರಾಜ್ಯ ಕಾರ್ಯಾಂಗದ ಅತ್ಯುನ್ನತ ಹುದ್ದೆಗೇರಿದ 4ನೇ ಮಹಿಳೆ 

ಬೆಂಗಳೂರು(ಜೂ.01): ಹಿರಿಯ ಐಎಎಸ್‌ ಅಧಿಕಾರಿ ವಂದಿತಾ ಶರ್ಮಾ ಅವರು ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಮಂಗಳವಾರ ವಿಧಾನಸೌಧದಲ್ಲಿ ಅಧಿಕಾರ ಸ್ವೀಕರಿಸಿದರು.

ನಿರ್ಗಮಿತ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಅವರ ನಿವೃತ್ತಿಯಿಂದಾಗಿ ತೆರವಾದ ಹುದ್ದೆಗೆ ಕರ್ನಾಟಕ ವೃಂದದ ಭಾರತೀಯ ಆಡಳಿತ ಸೇವೆಯ 1986ನೇ ಸಾಲಿನ ತಂಡದ ವಂದಿತಾ ಶರ್ಮಾ ಅವರನ್ನು ಸರ್ಕಾರ ಉತ್ತರಾಧಿಕಾರಿಯಾಗಿ ನೇಮಕ ಮಾಡಿತ್ತು. ಅದರಂತೆ ರಾಜ್ಯ ಸರ್ಕಾರದ 39ನೇ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ಅವರು ಅಧಿಕಾರ ಸ್ವೀಕರಿಸುವುದರೊಂದಿಗೆ ಕಾರ್ಯಾಂಗದ ಅತ್ಯುನ್ನತ ಹುದ್ದೆ ಅಲಂಕರಿಸಿದ ನಾಲ್ಕನೇ ಮಹಿಳೆಯಾಗಿದ್ದಾರೆ. ಅವರ ಅಧಿಕಾರಾವಧಿ 2023ರ ನವೆಂಬರ್‌ 30ಕ್ಕೆ ಮುಕ್ತಾಯಗೊಳ್ಳಲಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಈ ಹಿಂದೆ 2000ನೇ ಇಸವಿಯಲ್ಲಿ ತೆರೇಸಾ ಭಟ್ಟಾಚಾರ್ಯ, 2006ರಲ್ಲಿ ಮಾಲತಿ ದಾಸ್‌ ಹಾಗೂ 2017ರಲ್ಲಿ ಕೆ.ರತ್ನ ಪ್ರಭ ಅವರು ನಿರ್ವಹಿಸಿದ್ದರು. ರತ್ನಪ್ರಭ ಅವರ ಅಧಿಕಾರಾವಧಿಯಲ್ಲಿ ರಾಜ್ಯ ಪೋಲಿಸ್‌ ಮಹಾನಿರ್ದೇಶಕ ಹಾಗೂ ಮಹಾ ನಿರೀಕ್ಷಕ ಹುದ್ದೆಯನ್ನು ನೀಲಮಣಿ ಎನ್‌. ರಾಜು ಅಲಂಕರಿಸಿದ್ದರು. ಆಗ ಎರಡು ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರೇ ಇದ್ದಾರೆ ಎಂಬುದು ಗಮನಾರ್ಹ ಅಂಶವಾಗಿತ್ತು.

Chief Secretary ನೂತನ ಸಿಎಸ್‌ ಬಂದ ಬೆನ್ನಲ್ಲೇ 3 ಐಎಎಸ್‌ ಅಧಿಕಾರಿಗಳ ವರ್ಗ!

ಅದೇ ರೀತಿ ಈಗ ವಂದಿತಾ ಶರ್ಮಾ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸುವುದರೊಂದಿಗೆ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಇರುವ ಮೂರೂ ಪ್ರಮುಖ ಹುದ್ದೆಗಳನ್ನು ಮಹಿಳೆಯರೇ ಅಲಂಕರಿಸಿದಂತಾಗುತ್ತದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಹಾಗೂ ವಿಧಾನ ಪರಿಷತ್‌ ಕಾರ್ಯದರ್ಶಿ ಕೆ.ಆರ್‌. ಮಹಾಲಕ್ಷ್ಮಿ ಶಕ್ತಿ ಕೇಂದ್ರದ ಶಕ್ತಿಯಾಗಿ ಹೊಸ ದಾಖಲೆ ಸ್ಥಾಪಿಸಲಿದ್ದಾರೆ.

ವಂದಿತಾ ಶರ್ಮಾ ಅವರ ನೇಮಕಾತಿಯಲ್ಲಿ ರಾಜ್ಯ ಸರ್ಕಾರವು ಎಂದಿನಂತೆ ಸೇವಾ ಹಿರಿತನವನ್ನು ಪುರಸ್ಕರಿಸಿದೆ. ಅವರ ಪತಿ ಐಎನ್‌ಎಸ್‌ ಪ್ರಸಾದ್‌ ಕೂಡಾ ಭಾರತೀಯ ಆಡಳಿತ ಸೇವೆಯ ಅಧಿಕಾರಿಯಾಗಿ, ಪ್ರಸ್ತುತ ಹಣಕಾಸು ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜತೆಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಹುದ್ದೆಯ ಅಧಿಕ ಪ್ರಭಾರವನ್ನೂ ವಹಿಸಿಕೊಂಡಿದ್ದಾರೆ.