ಬೆಂಗಳೂರು (ನ. 21): ಕೇಂದ್ರ ಕೈಗಾರಿಕೆ ಕಾಯ್ದೆ-1948ರ ವ್ಯಾಪ್ತಿಗೆ ಬರುವ ರಾಜ್ಯದ ಎಲ್ಲಾ ಕಾರ್ಖಾನೆಗಳಲ್ಲಿ ಮಹಿಳೆಯರಿಗೂ ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕು. ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವ ಮಹಿಳಾ ಉದ್ಯೋಗಿಗಳಿಂದ ಲಿಖಿತ ಒಪ್ಪಿಗೆ ಪಡೆದು ಲೈಂಗಿಕ ದೌರ್ಜನ್ಯದಂತಹ ಪ್ರಕರಣ ಉಂಟಾಗದಂತೆ ಎಲ್ಲಾ ರೀತಿಯಲ್ಲೂ ಅಗತ್ಯ ಭದ್ರತಾ ಕ್ರಮ ಅನುಸರಿಸಬೇಕು ಎಂದು ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.

ಕೇಂದ್ರ ಕೈಗಾರಿಕೆ ಕಾಯ್ದೆ-1948ರ ಪ್ರಕಾರ ನಿಯಮ 66 (1) (ಬಿ) ಪ್ರಕಾರ ಯಾವುದೇ ಕಾರ್ಖಾನೆಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮಾತ್ರ ಮಹಿಳೆಯರು ಉದ್ಯೋಗ ಮಾಡಬೇಕು. ಆ ಬಳಿಕ ಅವರನ್ನು ಕಾರ್ಖಾನೆಗಳಲ್ಲಿ ಉಳಿಸಿಕೊಳ್ಳಬಾರದು.

ಕಚೇರಿಯ ಕೆಟ್ಟ ಪರಿಸರದಿಂದ ಕೆಟ್ಟವರಾಗುವ ತಾಯಂದಿರು!

ಜತೆಗೆ ಗಣಿಗಾರಿಕೆ ಕಾಯ್ದೆ 1952ರ 46 (1)(ಬಿ) ಪ್ರಕಾರ ಯಾವುದೇ ಗಣಿ ಪ್ರದೇಶದಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆವರೆಗೆ ಹೊರತುಪಡಿಸಿ ರಾತ್ರಿ ಪಾಳಿಯಲ್ಲಿ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ ನೀಡುವಂತಿಲ್ಲ ಎಂದು ಮಹಿಳೆಯರಿಗೆ ರಾತ್ರಿ ಪಾಳಿ ನಿಷೇಧಿಸಲಾಗಿತ್ತು.

ಇತ್ತೀಚೆಗೆ ಮದ್ರಾಸ್‌ ಹೈಕೋರ್ಟ್‌ ಮಹಿಳೆಯರಿಗೆ ರಾತ್ರಿ ಪಾಳಿ ನಿರಾಕರಿಸುವುದು ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಹೇಳಿದೆ. ಹೀಗಾಗಿ ರಾಜ್ಯದಲ್ಲೂ ಕೈಗಾರಿಕೆ ಕಾಯ್ದೆ ವ್ಯಾಪ್ತಿಗೆ ಬರುವ ಎಲ್ಲಾ ಕಾರ್ಖಾನೆಗಳಲ್ಲಿ ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ (ರಾತ್ರಿ 7ರಿಂದ ಬೆಳಿಗ್ಗೆ 6 ಗಂಟೆ) ಕಾರ್ಯ ನಿರ್ವಹಿಸಲು ಉದ್ಯೋಗದಾತರು ಅವಕಾಶ ಕಲ್ಪಿಸಬೇಕು. ಅದಕ್ಕಾಗಿ ಕಾರ್ಖಾನೆಗಳಲ್ಲಿ ಸೂಕ್ತ ಸುರಕ್ಷತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಇಚ್ಛಿಸುವವರ ಬಳಿ ಲಿಖಿತ ಒಪ್ಪಿಗೆ ಪಡೆಯಬೇಕು. ಉದ್ಯೋಗದಾತರು ಕಾರ್ಖಾನೆಯಲ್ಲಿ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ದೈಹಿಕ, ಅವಾಚ್ಯ ಮಾತು ಸೇರಿದಂತೆ ಯಾವುದೇ ರೀತಿಯಲ್ಲೂ ಲೈಂಗಿಕ ದೌರ್ಜನ್ಯ ಆಗದಂತೆ ಸೂಕ್ತ ಕಾನೂನು ರೂಪಿಸಬೇಕು. ಮಹಿಳೆಯರಿಗೆ ಕೆಲಸ ಮಾಡಲು ಕಾರ್ಯಸ್ಥಳ, ವಿಶ್ರಾಂತಿ ಸ್ಥಳ ಸೇರಿ ಪ್ರತಿಯೊಂದು ಕಡೆಯೂ ಸೂಕ್ತ ವಾತಾವರಣ ಸೃಷ್ಟಿಸಬೇಕು.

ಕಾರ್ಯಸ್ಥಳದಲ್ಲಿ ಯಾರಾದರೂ ಕ್ರಿಮಿನಲ್‌ ಆರೋಪಕ್ಕೆ ಗುರಿಯಾದರೆ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಪ್ರಕಾರ ಕ್ರಮ ಕೈಗೊಳ್ಳಬೇಕು. ಮಹಿಳೆಯರು ತಮ್ಮ ದೂರು ದಾಖಲಿಸಲು ಕಾರ್ಖಾನೆಯಲ್ಲಿ ದೂರು ವ್ಯವಸ್ಥೆಯನ್ನು ಕಲ್ಪಿಸಬೇಕು. ಉದ್ಯೋಗಿಗಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಧ್ವನಿ ಎತ್ತಲು ಮಹಿಳಾ ಉದ್ಯೋಗಿಗಳಿಗೆ ಸೂಕ್ತ ವೇದಿಕೆ ಕಲ್ಪಿಸಬೇಕು ಎಂದು ಸೂಚನೆ ನೀಡಿದೆ.

ಕಾರ್ಖಾನೆಯ ಎಲ್ಲಾ ಸಾರ್ವಜನಿಕ ಸ್ಥಳದಲ್ಲೂ ಸೂಕ್ತ ಬೆಳಕು ಹಾಗೂ ಸಿಸಿಟಿವಿ ವ್ಯವಸ್ಥೆ ಕಲ್ಪಿಸಬೇಕು. ಸಿಸಿಟಿವಿ ದೃಶ್ಯಾವಳಿಗಳನ್ನು 45 ದಿನಗಳವರೆಗೆ ಸಂಗ್ರಹಿಸಿಡಬೇಕು. ಪ್ರತಿ ಬ್ಯಾಚ್‌ನಲ್ಲೂ ಕನಿಷ್ಠ ಹತ್ತು ಮಂದಿ ಮಹಿಳಾ ಉದ್ಯೋಗಿಗಳು ಇರಬೇಕು. ಒಟ್ಟಾರೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಒಟ್ಟು ಸಿಬ್ಬಂದಿಯ 3ನೇ ಎರಡು ಭಾಗ ಮಹಿಳೆಯರು ಇರಬೇಕು.

ಹಿಂದಿ ಹೇರಿಕೆ ವಿರುದ್ಧ ಕನ್ನಡ ಹೋರಾಟಕ್ಕೆ ಜಯ; ಒಂದು ದೇಶ ಒಂದು ಭಾಷೆ ಜಾರಿ ಇಲ್ಲ

ಕಾರ್ಖಾನೆಗೆ ಪ್ರವೇಶ ಹಾಗೂ ನಿರ್ಗಮನ ದ್ವಾರದಲ್ಲಿ ಸೂಕ್ತ ಭದ್ರತೆ ಕಲ್ಪಿಸಬೇಕು. ಮಹಿಳೆಯರಿಗಾಗಿ ಪ್ರತ್ಯೇಕ ಕ್ಯಾಂಟೀನ್‌ ವ್ಯವಸ್ಥೆ, ಕಾರ್ಖಾನೆಗೆ ಬರಲು ಹಾಗೂ ವಾಪಸು ಮನೆಗೆ ಹೋಗಲು ಸಿ.ಸಿ.ಟಿವಿ ವ್ಯವಸ್ಥೆಯಿರುವ ವಾಹನಗಳ ವ್ಯವಸ್ಥೆ, 100ಕ್ಕೂ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿರುವಾಗ ತುರ್ತು ವಾಹನ ಸಿದ್ಧವಾಗಿಟ್ಟಿರಬೇಕು ಎಂದು ಹೇಳಲಾಗಿದೆ.

ವಸತಿ ವ್ಯವಸ್ಥೆ ಹೊಂದಿರುವ ಕಾರ್ಖಾನೆಗಳಲ್ಲಿ ವಸತಿ ಪ್ರದೇಶವನ್ನು ಕೇವಲ ಮಹಿಳೆಯರಿಗೆ ಮೀಸಲಿಡಬೇಕು. ರಾತ್ರಿ ಪಾಳಿಯಲ್ಲಿ ಪ್ರತಿ 3 ಮಂದಿಯಲ್ಲಿ ಒಬ್ಬರು ಮೇಲ್ವಿಚಾರಕರು ಮಹಿಳೆಯರಾಗಿರಬೇಕು. ಪೂರ್ಣಾವಧಿ ಕೆಲಸ ಮಾಡಬೇಕೇ ಅಥವಾ ಅರೆ ಅವಧಿ ಕೆಲಸ ಮಾಡಬೇಕೇ ಎಂಬ ಸ್ವಾತಂತ್ರ್ಯವನ್ನು ಉದ್ಯೋಗಿಗಳಿಗೆ ನೀಡಬೇಕು. ಪ್ರತಿ ಹದಿನೈದು ದಿನಗಳಿಗೊಮ್ಮೆ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರ ವಿವರಗಳನ್ನು ಕಾರ್ಮಿಕ ಇಲಾಖೆಯ ಕಾರ್ಖಾನೆ ನಿರೀಕ್ಷಕರಿಗೆ ಕಳುಹಿಸಬೇಕು. ಜತೆಗೆ ಅಹಿತಕರ ಘಟನೆ ನಡೆದಿದ್ದರೆ ಪೊಲೀಸರಿಗೂ ಪ್ರತಿ ಹದಿನೈದು ದಿನಗಳಿಗೊಮ್ಮೆ ವರದಿ ನೀಡಬೇಕು.

ಇದೇ ವೇಳೆ ಅಧಿಸೂಚನೆಯಲ್ಲಿ ತಿಳಿಸಿದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವಹಿಸದ ಯಾವುದೇ ಕಂಪನಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಅವಕಾಶವನ್ನು ರದ್ದುಪಡಿಸುವ ಅಧಿಕಾರ ಮುಖ್ಯ ಪರಿವೀಕ್ಷಕರಿಗೆ ಇದೆ ಎಂದು ಕಾರ್ಮಿಕ ಇಲಾಖೆ ಆದೇಶದಲ್ಲಿ ತಿಳಿಸಿದೆ.