ನವದೆಹಲಿ (ನ. 21): ಹಿಂದಿ ಹೇರಿಕೆಗೆ ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ, ‘ಒಂದು ದೇಶ, ಒಂದು ಭಾಷೆ’ ಜಾರಿ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟನೆ ನೀಡಿದೆ.

ರಾಜ್ಯಸಭೆಯಲ್ಲಿ ಈ ಕುರಿತು ಲಿಖಿತ ಹೇಳಿಕೆ ನೀಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್‌ ರೆಡ್ಡಿ, ದೇಶದಲ್ಲಿ ಒಂದೇ ಭಾಷೆ ಜಾರಿಗೊಳಿಸುವ ಯಾವುದೇ ಪ್ರಸ್ತಾವನೆ ಇಲ್ಲ. ಸಂವಿಧಾನದಲ್ಲಿ ಎಲ್ಲಾ ಭಾಷೆಗಳಿಗೂ ಸಮಾನ ಮಹತ್ವ ಕಲ್ಪಿಸಲಾಗಿದೆ.

ದೇಶಾದ್ಯಂತ NRC, ಅಕ್ರಮ ವಲಸಿಗರು ಗಡೀಪಾರು: ಈ ದಾಖಲೆ ರೆಡಿ ಇಟ್ಟುಕೊಳ್ಳಿ

ಭಾಷಾ ವಿಷಯ ಸಂವಿಧಾನದ ಸಹವರ್ತಿ ಪಟ್ಟಿಯಲ್ಲಿ ಇದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡಕ್ಕೂ ಸಂಬಂಧಿಸಿದ್ದಾಗಿದೆ. ಭಾಷಾವಾರು ಆಧಾರದ ಮೇಲೆ ರಾಜ್ಯ ಸರ್ಕಾರಗಳಿಗೆ ಅನುದಾನಗಳನ್ನು ಮಾನವ ಸಂಪನ್ಮೂಲ ಸಚಿವಾಲಯ ಬಿಡುಗಡೆ ಮಾಡಿಲ್ಲ ಎಂದು ಹೇಳಿದ್ದಾರೆ.

ಕಳೆದ ಸೆ.14ರಂದು ಹಿಂದಿ ದಿವಸ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಹಿಂದಿಯನ್ನು ದೇಶದಲ್ಲಿ ಹೆಚ್ಚಾಗಿ ಮಾತನಾಡಲಾಗುತ್ತದೆ. ಆ ಭಾಷೆ ದೇಶವನ್ನು ಒಗ್ಗೂಡಿಸಬಲ್ಲದು ಎನ್ನುವ ಮೂಲಕ ದೇಶಾದ್ಯಂತ ಹಿಂದಿ ಮಾತನಾಡುವಂತಹ ವಾತಾವರಣ ನಿರ್ಮಾಣವಾಗಬೇಕು. ಗೃಹ ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೊದಲ 10 ದಿನಗಳ ಅವಧಿಯಲ್ಲಿ ಒಂದೇ ಒಂದು ಕಡತ ಹಿಂದಿಯಲ್ಲಿ ಬರುತ್ತಿರಲಿಲ್ಲ.

ಈಗ ಶೇ.60ರಷ್ಟುಕಡತಗಳು ಹಿಂದಿಯಲ್ಲಿ ಬರುತ್ತಿವೆ. ದೇಶಾದ್ಯಂತ ಹಿಂದಿಯನ್ನು ವಿಸ್ತರಿಸಲು ಪ್ರಯತ್ನಿಸಲಾಗುವುದು. ಪ್ರತಿಯೊಬ್ಬ ವ್ಯಕ್ತಿ ಹಾಗೂ ಪ್ರತಿಯೊಂದು ಮನೆಗೂ ಹಿಂದಿ ತಲುಪಬೇಕು. 2024ರಲ್ಲಿ ನಡೆಯುವ ಸಾರ್ವತ್ರಿಕ ಲೋಕಸಭೆ ಚುನಾವಣೆ ವೇಳೆಗೆ ಹಿಂದಿ ಚಿರಸ್ಥಾಯಿಯಾಗಬೇಕು ಎಂದು ಹೇಳಿದ್ದರು.

ಕಟ್ಟಡದ ಮೇಲಿಂದ ಸುರಿಯಿತು ನೋಟಿನ ಸುರಿಮಳೆ!

ಅವರ ಈ ಹೇಳಿಕೆ ವಿರುದ್ಧ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅತ್ತ ಪಶ್ಚಿಮ ಬಂಗಾಳದಲ್ಲೂ ಮಮತಾ ಬ್ಯಾನಜಿ ಶಾ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ತಮ್ಮ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಲೇ ಸ್ಪಷ್ಟನೆ ನೀಡಿದ್ದ ಅಮಿತ್‌ ಶಾ, ನಾನು ದೇಶದಲ್ಲಿ ಹಿಂದಿ ಹೇರಿಕೆ ಮಾಡಬೇಕು ಎಂದು ಹೇಳಿಯೇ ಇಲ್ಲ. ದ್ವಿತೀಯ ಭಾಷೆಯನ್ನಾಗಿ ಹಿಂದಿಯನ್ನು ಬಳಸಿ, ಹಿಂದಿಯೊಂದಿಗೆ ಪ್ರಾದೇಶಿಕ ಭಾಷೆಯನ್ನೂ ಬೆಳೆಸಿ ಎಂದು ಹೇಳಿದ್ದೆ ಎಂದಿದ್ದರು.