Asianet Suvarna News Asianet Suvarna News

ಪಾಲಕರ ಅಕ್ರಮ ಬಂಧನದಲ್ಲಿದ್ದ ಯುವತಿಯ ಪಿಜಿ ವಾಸಕ್ಕೆ ಅನುಮತಿ

ಯುವತಿಯು ಬಯಸಿದ ಜಾಗದಲ್ಲಿ ನೆಲಸಲು ಅನುಮತಿ ನೀಡಿತು. ಅಲ್ಲದೆ, ಒಂದೊಮ್ಮೆ ಯುವತಿಗೆ ಯಾವುದೇ ಸಮಸ್ಯೆ ಎದುರಾದರೂ ಹತ್ತಿರದ ಪೊಲೀಸ್‌ ಠಾಣೆಯ ಮೊರೆ ಹೋಗಬಹುದು. ಸಂಬಂಧಪಟ್ಟ ಪೊಲೀಸರು ಯುವತಿಗೆ ಸೂಕ್ತ ನೆರವು ಕಲ್ಪಿಸಬೇಕು ಎಂದು ನಿರ್ದೇಶಿಸಿದ ನ್ಯಾಯಾಲಯ. 

Woman Who in Illegal Custody of her Parents High Court Allowed to Live in PG grg
Author
First Published May 20, 2023, 9:13 AM IST

ಬೆಂಗಳೂರು(ಮೇ.20): ಅನ್ಯ ಧರ್ಮದ ಯುವಕನನ್ನು ಪ್ರೀತಿಸಿ ವಿವಾಹವಾಗಲು ಮುಂದಾದ ಕಾರಣ ಪಾಲಕರ ಅಕ್ರಮ ಬಂಧನದಲ್ಲಿ ಇರಿಸಲಾಗಿತ್ತು ಎನ್ನಲಾದ ಯುವತಿಗೆ ಇದೀಗ ತನ್ನಿಷ್ಟದ ಜಾಗದಲ್ಲಿ (ಪಿಜಿಯಲ್ಲಿ) ನೆಲೆಸಲು ಹೈಕೋರ್ಟ್‌ ಅವಕಾಶ ಕಲ್ಪಿಸಿದೆ.

ದಕ್ಷಿಣ ಕನ್ನಡದ ಹಿಂದು ಯುವತಿಯೊಬ್ಬಳನ್ನು ಆಕೆಯ ಪಾಲಕರು ಅಕ್ರಮ ಬಂಧನದಲ್ಲಿಟ್ಟಿದ್ದಾರೆಂದು ಆರೋಪಿಸಿ ಕ್ರೈಸ್ತ ಸಮುದಾಯಕ್ಕೆ ಸೇರಿದ ಯುವಕನೊಬ್ಬ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. 2023ರ ಮೇ 11ರಂದು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಯುವತಿಗೆ ಮೇ 16ರವರೆಗೆ ಪುನರ್ವಸತಿ ಕೇಂದ್ರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿತ್ತು.

ಎಸ್ಸಿ ಒಳ ಮೀಸಲಾತಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಮೇ 16ರಂದು ಅರ್ಜಿ ಮತ್ತೆ ವಿಚಾರಣೆಗೆ ಬಂದಾಗ ಯುವತಿ ಹಾಜರಾಗಿ, ತನಗೆ 24 ವರ್ಷವಾಗಿದ್ದು, ವಯಸ್ಕಳಾಗಿದ್ದೇನೆ. ಕಚೇರಿಯೊಂದರಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದೇನೆ. ತನಗೆ ಪಾಲಕರೊಂದಿಗೆ ಹೋಗಲು ಇಷ್ಟವಿಲ್ಲ. ಸದ್ಯ ತಂಗಿರುವ ಪುನರ್ವಸತಿ ಕೇಂದ್ರದಲ್ಲಿ ಉಳಿಯಲೂ ಇಚ್ಛೆಯಿಲ್ಲ. ಮುಕ್ತವಾಗಿರಲು ಬಯಸಿದ್ದು, ತಾನು ಇಷ್ಟಪಡುವ ಪಿಜಿಯಲ್ಲಿ ನೆಲೆಸಲು ಅವಕಾಶ ಕೊಡಬೇಕು. ಆ ಜಾಗ ಸುರಕ್ಷಿತವಾಗಿದ್ದು, ಪಿಜಿಯ ವಿಳಾಸ ಬಹಿರಂಗಪಡಿಸುವುದಿಲ್ಲ. ತನಗೆ ಯಾವುದೇ ಪೊಲೀಸ್‌ ರಕ್ಷಣೆ ಸಹ ಬೇಡ ಎಂದು ತಿಳಿಸಿದಳು.

ಅದನ್ನು ಒಪ್ಪಿದ ನ್ಯಾಯಮೂರ್ತಿಗಳಾದ ಎಚ್‌.ಟಿ. ನರೇಂದ್ರ ಪ್ರಸಾದ್‌ ಮತ್ತು ಎಸ್‌.ರಾಚಯ್ಯ ಅವರಿದ್ದ ವಿಭಾಗೀಯ ಪೀಠ, ಯುವತಿಯು ಬಯಸಿದ ಜಾಗದಲ್ಲಿ ನೆಲಸಲು ಅನುಮತಿ ನೀಡಿತು. ಅಲ್ಲದೆ, ಒಂದೊಮ್ಮೆ ಯುವತಿಗೆ ಯಾವುದೇ ಸಮಸ್ಯೆ ಎದುರಾದರೂ ಹತ್ತಿರದ ಪೊಲೀಸ್‌ ಠಾಣೆಯ ಮೊರೆ ಹೋಗಬಹುದು. ಸಂಬಂಧಪಟ್ಟ ಪೊಲೀಸರು ಯುವತಿಗೆ ಸೂಕ್ತ ನೆರವು ಕಲ್ಪಿಸಬೇಕು ಎಂದು ನಿರ್ದೇಶಿಸಿತು.

ಇದೇ ವೇಳೆ ಯುವತಿಯ ತಂದೆ ಪರ ವಕೀಲರು, ಅರ್ಜಿದಾರ ಯುವಕನೊಂದಿಗೆ ಚರ್ಚಿಸಿ (ಯುವತಿ ತಂದೆ) ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಈ ಮನವಿ ಪುರಸ್ಕರಿಸಿದ ನ್ಯಾಯಪೀಠ, ಮೇ 22ರವರೆಗೆ ಸಮಯಾವಕಾಶ ಕಲ್ಪಿಸಿ ವಿಚಾರಣೆ ಮುಂದೂಡಿತು. ಅಂದು ಯುವತಿ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ನಿರ್ದೇಶಿಸಿತು.

Follow Us:
Download App:
  • android
  • ios