ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ತೊರವಿಹಕ್ಕಲದಲ್ಲಿ ಬಾಣಂತಿಯೊಬ್ಬಳು ನಾಲ್ಕು ದಿನಗಳ ತನ್ನ ಮಗುವಿನೊಂದಿಗೆ ಆಗಮಿಸಿ ಮತದಾನ ಮಾಡಿದರು. ಇತ್ತ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ ಸೊಸೆ ತುಂಬು ಗರ್ಭಿಣಿ ಹಿತಾ ಹೆಬ್ಬಾಳ್ಕರ್ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಬೆಂಗಳೂರು(ಮೇ.11): ರಾಜ್ಯದಾದ್ಯಂತ ಬುಧವಾರ ಪ್ರಜಾಪ್ರಭುತ್ವದ ಹಬ್ಬ’ದಲ್ಲಿ ಮತದಾರರು ಉತ್ಸುಕರಾಗಿಯೇ ಪಾಲ್ಗೊಂಡರು. ರಾಜ್ಯದ ಅಲ್ಲಲ್ಲಿ ಮತದಾನದ ಮಹತ್ವ ಸಾರುವ ನಿಟ್ಟಿನಲ್ಲಿ ಎಂಥ ಪರಿಸ್ಥಿತಿಯಲ್ಲೂ ಮತದಾನ ನೆರವೇರಿಸಿ ಕೆಲವರು ಕರ್ತವ್ಯ ಮೆರೆದರು. ಆಗಷ್ಟೇ ಮದುವೆಯಾದ ವಧುವರರು, ಹೆರಿಗೆಯಾದ ಬಾಣಂತಿಯರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು , ಪಾಶ್ರ್ವವಾಯು ಪೀಡಿತರು, ಕೈ ಇಲ್ಲದ ಅಂಗವಿಲಕಲರು ಮತ ಹಾಕಿ ಮಾದರಿಯಾದರು.
ಗುಂಡ್ಲುಪೇಟೆ ತಾಲೂಕಿನ ಭೋಗಯ್ಯನಹುಂಡಿಯ ನವ ವಧು ಐಶ್ವರ್ಯ ಪ್ರಸನ್ನ ಮದುವೆಗೆ ತೆರಳುವ ಮುನ್ನವೇ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದರೆ, ಹಾಸನ ದಲ್ಲಿ ಮದುವೆ ಮಂಟಪದಿಂದ ನೇರಾ ಮತಗಟ್ಟೆಗೆ ಬಂದು ನವವಧು-ವರರು ಮತ ಚಲಾಯಿಸಿದರು. ಅದೇ ರೀತಿ ಕಾಪು ವಿಧಾನಸಭಾ ಕ್ಷೇತ್ರದ ಪಲಿಮಾರು ಗ್ರಾಮದಲ್ಲಿಯೂ ನವವಧು ಮೆಲಿಚಾ ಸೊರಸ್ ಎಂಬವರು ಮದುವೆಗೆ ಮೊದಲು ಮತ ಚಲಾಯಿಸಿ, ಬಳಿಕ ಚರ್ಚಿಗೆ ತೆರಳಿದರು.
ಇನ್ನು, ಗದಗಿನಲ್ಲಿ ಪಾಶ್ರ್ವವಾಯು ಪೀಡಿತನೊಬ್ಬ ತನ್ನ ಮತ ಚಲಾಯಿಸಿ ಈ ಮೂಲಕ ಇತರರಿಗೆ ಮಾದರಿಯಾದರು. ಮಂಡ್ಯ ಹಾಗೂ ಮಂಗಳೂರಿನಲ್ಲಿ ಮಂಗಳಮುಖಿಯರು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರೆ, ವಿಜಯಪುರದ ಅಫಜಲಪೂರ ಟಕ್ಕೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ನಿರಾಶ್ರಿತ ಪರಿಹಾರ ಕೇಂದ್ರ ದ 32 ಜನ ನಿರಾಶ್ರಿತರು ಮತದಾನ ಮಾಡಿದರು.
ಮತಗಟ್ಟೆಯಲ್ಲೇ ಹೆರಿಗೆ !
ಕುರುಗೋಡು: ಮತದಾನದ ತನ್ನ ಹಕ್ಕು ಚಲಾಯಿಸಲು ಬಂದ ತುಂಬು ಗರ್ಭಿಣಿಯೋರ್ವಳು ಮತ ಚಲಾಯಿಸಿದ ಬಳಿಕ ಮತಗಟ್ಟೆ ಆವರಣದಲ್ಲೇ ಸಹಜ ಹೆರಿಗೆಯಾದ ಅಪ ರೂಪದ ಘಟನೆ ಕುರುಗೋಡು ತಾಲೂಕಿನ ಕೊರ್ಲಗುಂದಿ ಗ್ರಾಮದ ಮತಕೇಂದ್ರ 228ರಲ್ಲಿ ಬುಧವಾರ ನಡೆಯಿತು.
Karnataka Election 2023: 'ಚಾಲೆಂಜ್ ಓಟ್' ಮಾಡಿದ 95ರ ವೃದ್ಧೆ! 5 ದಿನದ ಬಾಣಂತಿಯಿಂದ ಮತದಾನ
ಕೊರ್ಲಗುಂದಿ ಗ್ರಾಮದ ಮಣಿಲಾ ಎಂಬವರು ಬೆಳಗ್ಗೆ 10 ಗಂಟೆಗೆ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. ಬಳಿಕ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅಲ್ಲಿದ್ದ ಸಿಬ್ಬಂದಿ ಮತಕೇಂದ್ರದ ಬಳಿಯ ಕೋಣೆಯಲ್ಲಿ ಕರೆದೊಯ್ದಿದ್ದು, ಅಲ್ಲಿಯೇ ಸಹಜ ಹೆರಿಗೆಯಾಗಿದೆ.
ತುಂಬು ಗರ್ಭಿಣಿ ಮತದಾನ:
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ತೊರವಿಹಕ್ಕಲದಲ್ಲಿ ಬಾಣಂತಿಯೊಬ್ಬಳು ನಾಲ್ಕು ದಿನಗಳ ತನ್ನ ಮಗುವಿನೊಂದಿಗೆ ಆಗಮಿಸಿ ಮತದಾನ ಮಾಡಿದರು. ಇತ್ತ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ ಸೊಸೆ ತುಂಬು ಗರ್ಭಿಣಿ ಹಿತಾ ಹೆಬ್ಬಾಳ್ಕರ್ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ತಮ್ಮ ಹಕ್ಕು ಚಲಾಯಿಸಿದರು.
