ಉದ್ಯೋಗಿಗಳ ಗ್ರ್ಯಾಚುಟಿ ಹಣ ಕಂಪನಿಗಳು ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ: ಕರ್ನಾಟಕ ಹೈಕೋರ್ಟ್
ಕಂಪನಿಯಿಂದ ವಜಾಗೊಂಡ ಉದ್ಯೋಗಿಗಳ ಗ್ರ್ಯಾಚುಟಿ ಹಣವನ್ನು ಕಂಪನಿಗಳು ತಡೆಹಿಡಿಯುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ನಷ್ಟದ ವಸೂಲಾತಿ ಪ್ರಕ್ರಿಯೆ ಆರಂಭವಾಗುವ ಮುನ್ನ ಗ್ರ್ಯಾಚುಟಿ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ ಎಂದು ತಿಳಿಸಿದೆ.

ಬೆಂಗಳೂರು (ಜ.22): ಉದ್ಯೋಗಿಯನ್ನು ಯಾವುದೇ ಕಾರಣಕ್ಕಾಗಿಯಾಗಿದ್ದರೂ ಕಂಪನಿಯಿಂದ ವಜಾ ಮಾಡಿದ್ದರೂ, ಅಂಥ ಉದ್ಯೋಗಿಯ ಗ್ರ್ಯಾಚುಟಿ ಹಣವನ್ನು ಉದ್ಯೋಗ ನೀಡಿರುವ ಕಂಪನಿಗಳು ತಡೆಹಿಡಿಯಲು ಅಥವಾ ಏಕಾಏಖಿ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಆ ಉದ್ಯೋಗಿ ಮಾಡಿರುವ ನಷ್ಟದ ಕುರಿತಾಗಿ ವಸೂಲಾತಿ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಉದ್ಯೋಗಿಯ ಗ್ರ್ಯಾಚುಟಿ ಹಣವನ್ನು ತಡೆಹಿಡಿಯುವ ಅಥವಾ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಇರೋದಿಲ್ಲ ಎಂದು ತಿಳಿಸಿದೆ. ನಿಯಂತ್ರಣ ಪ್ರಾಧಿಕಾರವು ಹೊರಡಿಸಿದ ಆದೇಶವನ್ನು ಪ್ರಶ್ನಿಸಿದ್ದ ಕೇಂದ್ರೀಯ ಉಗ್ರಾಣ ನಿಗಮದ ಮನವಿಯನ್ನು ತಿರಸ್ಕರಿಸುವ ಮೂಲಕ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಇತ್ತೀಚಿನ ಆದೇಶದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಪ್ರಾಧಿಕಾರವು, ಮಾಜಿ ಉದ್ಯೋಗಿ ಜಿ ಸಿ ಭಟ್ ಅವರಿಗೆ ಡಿಸೆಂಬರ್ 12, 2013 ರಿಂದ ನಿಜವಾದ ಪಾವತಿ ದಿನಾಂಕದವರೆಗೆ ಶೇಕಡಾ 10 ರಷ್ಟು ಬಡ್ಡಿಯೊಂದಿಗೆ ₹7,88,165 ಅನ್ನು ಗ್ರಾಚ್ಯುಟಿಯಾಗಿ ಪಾವತಿಸಲು ನಿಗಮಕ್ಕೆ ನಿರ್ದೇಶನ ನೀಡಿತ್ತು. ಆದರೆ, ಜಿಸಿ ಭಟ್ ತಮ್ಮ ಉದ್ಯೋಗದ ಗಂಭೀರ ದುರುಪಯೋಗ ಮಾಡಿಕೊಂಡಿದ್ದರು. ಈ ಆರೋಪದ ಮೇಲೆ ಅವರನ್ನು ವಜಾ ಮಾಡಲಾಗಿದೆ. ಅವರಿಂದ ಕಂಪನಿಗೆ 1.71 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ನಿಗಮ ವಾದ ಮಾಡಿತ್ತು.
ಅವರ ಗ್ರಾಚ್ಯುಟಿಯನ್ನು ತಡೆಹಿಡಿಯುವ ಮತ್ತು ಉಂಟಾದ ನಷ್ಟಗಳಿಗೆ ಪ್ರತಿಯಾಗಿ ಮೊತ್ತವನ್ನು ಸರಿಹೊಂದಿಸುವ ಹಕ್ಕು ತಮಗೆ ಇದೆ ಎಂದು ನಿಗಮ ವಾದ ಮಾಡಿತ್ತು. ಅದರೊಂದಿಗೆ ಅರ್ಜಿ ಸಲ್ಲಿಕೆ ಮಾಡುವಲ್ಲಿನ ವಿಳಂಬದ ಬಗ್ಗೆಯೂ ನಿಗಮ ಆಕ್ಷೇಪ ವ್ಯಕ್ತಪಡಿಸಿತ್ತು. ಭಟ್ ಅವರನ್ನು ವಜಾ ಮಾಡಿದ ಏಳು ವರ್ಷಗಳ ಬಳಿಕ ನಿಯಂತ್ರಣ ಪ್ರಾಧಿಕಾರದ ಎದುರು ಹೋಗಿದ್ದರು ಎಂದು ದೂರಿದೆ. ದಾಖಲೆಗಳನ್ನು ಪರಿಶೀಲಿಸಿದ ನಂತರ, ಭಟ್ ಅವರಿಗೆ ಬಾಕಿ ಇರುವ ಮೊತ್ತವನ್ನು ನಿಗಮವು ಮುಟ್ಟುಗೋಲು ಹಾಕಿಕೊಂಡಿದ್ದರೂ, ನಷ್ಟವನ್ನು ಮರುಪಡೆಯಲು ಯಾವುದೇ ಕ್ರಮಗಳನ್ನು ಪ್ರಾರಂಭಿಸಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.
ದುರುಪಯೋಗದ ಆರೋಪ ಹೊತ್ತಿರುವ ಉದ್ಯೋಗಿಗಳ ವಿರುದ್ಧ ಕಾನೂನು ಕ್ರಮಗಳನ್ನು ಪ್ರಾರಂಭಿಸುವ ಮೂಲಕ ನಷ್ಟವನ್ನು ಮರುಪಡೆಯಲು ಉದ್ಯೋಗದಾತರಿಗೆ ಅವಕಾಶವಿದೆ ಎಂದು ಪೀಠ ಒತ್ತಿ ಹೇಳಿದೆ. ಆದರೆ, ಕೇವಲ ಉದ್ಯೋಗಿಯನ್ನು ಅಮಾನತುಗೊಳಿಸುವುದು ಅಥವಾ ವಜಾಗೊಳಿಸುವುದರಿಂದ ಉದ್ಯೋಗದಾತರಿಗೆ ಉಂಟಾದ ಆರ್ಥಿಕ ಹಾನಿಯನ್ನು ಗ್ರ್ಯಾಚುಟಿ ಹಣದಿಂದ ಸರಿದೂಗಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ವಜಾಗೊಳಿಸುವಿಕೆಯು ನೌಕರನ ವಿರುದ್ಧ ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಿ ತೆಗೆದುಕೊಳ್ಳಲಾದ ದಂಡನಾತ್ಮಕ ಕ್ರಮವಾಗಿದೆ ಆದರೆ ಉದ್ಯೋಗದಾತನು ಬಾಕಿ ಉಳಿಸಿಕೊಳ್ಳಲು ಸ್ವಯಂಚಾಲಿತವಾಗಿ ಅರ್ಹತೆ ಪಡೆಯುವುದಿಲ್ಲ ಎಂದು ತೀರ್ಪು ಸ್ಪಷ್ಟಪಡಿಸಿದೆ. "ಉಂಟಾದ ನಷ್ಟಗಳ ಮರುಪಡೆಯುವಿಕೆಗೆ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದು ಉದ್ಯೋಗದಾತರಿಗೆ ಸೇರಿದ್ದು, ಮತ್ತು ಆ ಪ್ರಕ್ರಿಯೆಗಳ ಸಮಯದಲ್ಲಿ, ಅಗತ್ಯ ಪ್ರಕ್ರಿಯೆಗಳನ್ನು ನಡೆಸಿದ ನಂತರ ಮತ್ತು ಅಪರಾಧಿ ಉದ್ಯೋಗಿಗೆ ಆ ಪ್ರಕ್ರಿಯೆಗಳಲ್ಲಿ ಸ್ಪರ್ಧಿಸಲು ಅವಕಾಶವನ್ನು ಒದಗಿಸಿದ ನಂತರ, ಅಪರಾಧಿ ಉದ್ಯೋಗಿಗೆ ಬರಬೇಕಾದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಅಥವಾ ಸರಿಹೊಂದಿಸುವುದು ಸಾಧ್ಯವಾಗಲಿದೆ" ಎಂದು ನ್ಯಾಯಾಲಯ ಹೇಳಿದೆ.
ಪ್ಲೀಸ್ ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸಿ, ಕರ್ನಾಟಕ ಹೈಕೋರ್ಟ್ ಮೊರೆ ಹೋದ ಪ್ರಜೆ!
ವಸೂಲಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸುವಲ್ಲಿ ನಿಗಮದ ವೈಫಲ್ಯವು ಅದರ ಅಧಿಕಾರಿಗಳ ನಿರ್ಲಕ್ಷ್ಯವನ್ನು ಸೂಚಿಸುತ್ತದೆ ಎಂದು ನ್ಯಾಯಾಲಯವು ಗಮನಸೆಳೆದಿದೆ. ಅಂತಹ ಪ್ರಕ್ರಿಯೆಗಳಿಲ್ಲದೆ, ನಷ್ಟದ ನಿಗಮದ ಹಕ್ಕು ಆಧಾರರಹಿತವಾಗಿದೆ ಎಂದು ಅದು ತೀರ್ಪು ನೀಡಿತು. "ಆಪಾದಿತ ನಷ್ಟಗಳ ಮರುಪಡೆಯುವಿಕೆಗೆ ಪ್ರತಿವಾದಿ ನಂ. 1 ರ ವಿರುದ್ಧ ಯಾವುದೇ ಕ್ರಮಗಳು ಪ್ರಾರಂಭವಾಗದ ಕಾರಣ, ಉದ್ಯೋಗದಾತರು ಗ್ರಾಚ್ಯುಟಿ ಮೊತ್ತವನ್ನು ಉಳಿಸಿಕೊಳ್ಳುವ ಮತ್ತು ಅದನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದಿದೆ.
ಜನನ ಪ್ರಮಾಣ ಪತ್ರದಲ್ಲಿ ಲಿಂಗ ಬದಲಾವಣೆಗೆ ಹೈಕೋರ್ಟ್ ವಿಶೇಷ ನಿರ್ದೇಶನ
ಭಟ್ ಅವರ ಗ್ರಾಚ್ಯುಟಿಯನ್ನು ಪಾವತಿಸಲು ನಿಗಮಕ್ಕೆ ಇದ್ದ ಗಡುವನ್ನು ನ್ಯಾಯಾಲಯವು ಜನವರಿ 31 ರವರೆಗೆ ವಿಸ್ತರಿಸಿತು. ಅದರೊಂದಿಗೆ, ಭವಿಷ್ಯದಲ್ಲಿ ಹಣಕಾಸಿನ ದುರುಪಯೋಗದ ಕಾರಣ ಉದ್ಯೋಗಿಯನ್ನು ವಜಾಗೊಳಿಸುವ ಪ್ರಕರಣಗಳಲ್ಲಿ, ಗ್ರಾಚ್ಯುಟಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೊದಲು ವಸೂಲಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಬೇಕು ಎಂದು ನಿಗಮದ ಆಡಳಿತ ಮಂಡಳಿಗೆ ಅದು ಸೂಚನೆ ನೀಡಿದೆ.