ಕರ್ನಾಟಕದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು ಗುರುವಾರ ಮತ್ತೆ ಹೊಸದಾಗಿ 6 ಸಾವಿರಕ್ಕೂ ಅಧಿಕ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 2 ಲಕ್ಷದ ಗಡಿ ದಾಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು(ಆ.14): ರಾಜ್ಯದಲ್ಲಿ ವೇಗವಾಗಿ ಹಬ್ಬುತ್ತಿರುವ ಕೊರೋನಾ ವೈರಸ್‌ನಿಂದ ಗುರುವಾರ ಒಂದೇ ದಿನ ಮತ್ತೆ 6,706 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಈ ವರೆಗೂ ಸೋಂಕು ದೃಢಪಟ್ಟವರ ಒಟ್ಟು ಸಂಖ್ಯೆ ಎರಡು ಲಕ್ಷ ದಾಟಿ 2,03,200ಕ್ಕೇರಿದೆ. 103 ಮಂದಿ ಸೋಂಕಿತರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಮೊದಲ ಪ್ರಕರಣ ಮಾ.9ರಂದು ದಾಖಲಾಗಿತ್ತು. ಜುಲೈ 27ರಂದು ಸೋಂಕಿತರ ಸಂಖ್ಯೆ 1 ಲಕ್ಷ ದಾಟಿತ್ತು. 1ರಿಂದ 1 ಲಕ್ಷ ದಾಟಲು 141 ದಿನ ಸಮಯ ತೆಗೆದುಕೊಂಡಿತ್ತು. ಆದರೆ ಈಗ 1 ಲಕ್ಷದಿಂದ 2 ಲಕ್ಷ ದಾಟಲು ಕೇವಲ 17 ದಿನದ ಸಮಯ ಹಿಡಿದಿದೆ. ಇದು ಪ್ರಕರಣದ ಏರುಗತಿಯ ದ್ಯೋತಕ.

ಇದರ ನಡುವೆಯೂ ದೊಡ್ಡ ಸಮಾಧಾನದ ವಿಚಾರವೆಂದರೆ ದಾಖಲೆಯ 8,609 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 1,21,242 ತಲುಪಿದೆ. ಗುಣಮುಖರ ಪ್ರತಿಶತ ಪ್ರಮಾಣ ಶೇ.59ಕ್ಕೇರಿದೆ.

ಜೆಡಿಎಸ್ ಶಾಸಕರೊಬ್ಬರ ಕುಟುಂಬಕ್ಕೆ ವಕ್ಕರಿಸಿದ ಕೊರೋನಾ..!

ಉಳಿದಂತೆ 78,337 ಮಂದಿ ಸಕ್ರಿಯ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 328 ಮಂದಿ ಸೇರಿ ಗಂಭೀರ ಆರೋಗ್ಯ ಸ್ಥಿತಿಯ ಒಟ್ಟು 727 ಮಂದಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ, ಒಟ್ಟು ಮೃತ ಸೋಂಕಿತರ ಸಂಖ್ಯೆ 3,613ಕ್ಕೆ (ಎಂಟು ಅನ್ಯಕಾರಣದ ಸಾವು ಹೊರತುಪಡಿಸಿ) ಏರಿಕೆಯಾಗಿದೆ.

ಈ ಮಧ್ಯೆ, ಕೋವಿಡ್‌ ಪರೀಕ್ಷಾ ಸಂಖ್ಯೆಯಲ್ಲಿ ಮತ್ತಷ್ಟುಏರಿಕೆಯಾಗಿದ್ದು 27,296 ರಾರ‍ಯಪಿಡ್‌ ಆ್ಯಂಟಿಜನ್‌ ಟೆಸ್ಟ್‌ ಹಾಗೂ 28,703 ಆರ್‌ಟಿಪಿಸಿಆರ್‌ ಹಾಗೂ ಇತರೆ ಪರೀಕ್ಷೆಗಳು ಸೇರಿ ಗುರುವಾರ ಒಟ್ಟು 55,999 ಪರೀಕ್ಷೆ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಜಿಲ್ಲಾವಾರು ಸೋಂಕು ಪ್ರಕರಣಗಳು:

ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು 1,893 ಮಂದಿಗೆ ಸೋಂಕು ದೃಢಪಟ್ಟಿದೆ. ಉಳಿದ ಜಿಲ್ಲೆಗಳ ಪೈಕಿ ಮೈಸೂರಿನಲ್ಲಿ 522, ಬಳ್ಳಾರಿ 445, ಉಡುಪಿ 402, ದಾವಣಗೆರೆ 328, ಬೆಳಗಾವಿ 288, ಕಲಬುರಗಿ 285, ಧಾರವಾಡ 257, ದಕ್ಷಿಣ ಕನ್ನಡ 246, ರಾಯಚೂರು 181, ಕೊಪ್ಪಳ 148, ಬಾಗಲಕೋಟೆ, ಬೀದರ್‌ ತಲಾ 143, ಮಂಡ್ಯ 130, ಹಾಸನ 129, ವಿಜಯಪುರ 121, ಚಿಕ್ಕಮಗಳೂರು 111, ಶಿವಮೊಗ್ಗ 105, ಗದಗ 98, ಹಾವೇರಿ 96, ತುಮಕೂರು 85, ಯಾದಗಿರಿ 83, ಕೋಲಾರ 77, ಬೆಂಗಳೂರು ಗ್ರಾಮಾಂತರ 70, ಚಿತ್ರದುರ್ಗ 67, ಉತ್ತರ ಕನ್ನಡ 64, ಚಾಮರಾಜನಗರ 56, ಕೊಡಗು 55, ರಾಮನಗರ 53 ಹಾಗೂ ಚಿಕ್ಕಬಳ್ಳಾಪುರದಲ್ಲಿ 25 ಮಂದಿ ಹೊಸದಾಗಿ ಸೋಂಕಿಗೆ ತುತ್ತಾಗಿದ್ದಾರೆ.

103 ಸಾವು ಎಲ್ಲೆಲ್ಲಿ?:

ಬೆಂಗಳೂರಿನಲ್ಲಿ 22 ಮಂದಿ, ಮೈಸೂರಿನಲ್ಲಿ 12, ಬಳ್ಳಾರಿ, ಕಲಬುರಗಿ ತಲಾ 9, ಬೆಳಗಾವಿ, ಧಾರವಾಡ, ದಕ್ಷಿಣ ಕನ್ನಡ ತಲಾ 6, ಕೊಪ್ಪಳ 5, ಹಾವೇರಿ, ತುಮಕೂರು, ರಾಯಚೂರು, ದಾವಣಗೆರೆ ತಲಾ 3, ಮಂಡ್ಯ, ಹಾಸನ, ವಿಜಯಪುರ, ಚಿಕ್ಕಮಗಳೂರು, ಉತ್ತರ ಕನ್ನಡ, ರಾಮನಗರ ತಲಾ 2, ಚಾಮರಾಜನಗರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಉಡುಪಿಯಲ್ಲಿ ತಲಾ ಒಬ್ಬರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಮೃತರದಲ್ಲಿ ಆರು ಮಂದಿಯ ಸೋಂಕಿಗೆ ಸಂಪರ್ಕ ಪತ್ತೆಯಾಗಿಲ್ಲ. ಉಳಿದ ಪ್ರಕರಣಗಳಲ್ಲಿ ತೀವ್ರ ಉಸಿರಾಟ ಸಮಸ್ಯೆ, ವಿಷಮಶೀತ ಜ್ವರದ ಹಿನ್ನೆಲೆಯಿಂದ ಸೋಂಕು ದೃಢಪಟ್ಟಿದ್ದು, ಜೊತೆಗೆ ಅವರೆಲ್ಲರೂ ಬೇರೆ ಬೇರೆ ಪೂರ್ವ ಕಾಯಿಲೆಗಳಿಂದ ಬಳಲುತ್ತಿದ್ದವರು ಎಂದು ಆರೋಗ್ಯ ಇಲಾಖೆ ಹೇಳಿದೆ.