ಕರ್ನಾಟಕದಲ್ಲಿ ಚಳಿಗಾಲ ಆರಂಭವಾಗಿದ್ದು, ಬೆಂಗಳೂರು ಮತ್ತು ಉತ್ತರ ಒಳನಾಡಿನಲ್ಲಿ ಮಂಜಿನ ವಾತಾವರಣ ಶುರುವಾಗಿದೆ. ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಾಪಮಾನ ಗಣನೀಯವಾಗಿ ಕುಸಿದಿದೆ. ಆದರೆ, ಎಲ್ ನೀನೋ ಪ್ರಭಾವದಿಂದ ಈ ವರ್ಷ ಚಳಿಯ ತೀವ್ರತೆ ಕಡಿಮೆ ಇರಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಚಳಿಗಾಲ ಆರಂಭವಾಗಿದ್ದು ಉತ್ತರ ಒಳನಾಡಿನ ವಿಜಯಪುರ, ರಾಜಧಾನಿ ಬೆಂಗಳೂರು ನಗರ, ಗ್ರಾಮಾಂತರ ಸೇರಿ ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ನಸುಕಿನಲ್ಲಿ ಮಂಜಿನ ವಾತಾವರಣ ಶುರುವಾಗಿದೆ. ಕೆಲ ಜಿಲ್ಲೆಗಳಲ್ಲಿ ತಾಪಮಾನ ಸರಾಸರಿಗಿಂತ 4.7 ಡಿಗ್ರಿ ಸೆಲ್ಸಿಯಸ್ನಷ್ಟು ಕಡಿಮೆ ದಾಖಲಾಗಿದೆ.
ಕುಸಿತವಾಗುತ್ತಿರುವ ತಾಪಮಾನ
ಸೋಮವಾರದಂದು ರಾಜ್ಯದ 15 ಜಿಲ್ಲೆಗಳಲ್ಲಿ ತಾಪಮಾನ ಸರಾಸರಿಗಿಂತ ಕಡಿಮೆ ದಾಖಲಾಗಿದೆ. ಉತ್ತರ ಒಳನಾಡಿನ ವಿಜಯಪುರದಲ್ಲಿ ಸೋಮವಾರ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಸರಾಸರಿಗಿಂತ 4.7 ಡಿಗ್ರಿ ಸೆಲ್ಸಿಯಸ್ ಕಡಿಮೆ ಇತ್ತು. ಗದಗದಲ್ಲಿ ಕನಿಷ್ಠ 15.8 ಡಿಗ್ರಿ ಸೆಲ್ಸಿಯಸ್ನೊಂದಿಗೆ ಸರಾಸರಿಗಿಂತ 4.1 ಡಿಗ್ರಿ ಸೆಲ್ಸಿಯಸ್ ಕಡಿಮೆ ದಾಖಲಾಗಿದೆ. ಧಾರವಾಡ 15.4, ಬೆಳಗಾವಿ 15.6, ಬಾಗಲಕೋಟೆ 16.5, ರಾಯಚೂರಿನಲ್ಲಿ ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಮುಂದಿನ ಏಳು ದಿನಗಳ ಮುನ್ಸೂಚನೆಯ ಪ್ರಕಾರ, ರಾಜ್ಯದ ಹಲವು ಭಾಗಗಳಲ್ಲಿ ಬೆಳಗಿನ ವೇಳೆಯಲ್ಲಿ ಚಳಿ ಹಾಗೂ ಮಂಜು ಆವರಿಸುವ ಸಾಧ್ಯತೆ ಇದೆ. ದಿನದ ಅವಧಿಯಲ್ಲಿ ಎಂದಿನಂತೆ ಬಿಸಿಲಿನ ವಾತಾವರಣ ಇರಲಿದೆ. ಕೆಲವು ಕಡೆ ಹಗುರ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ಈ ವರ್ಷ ಕಡಿಮೆ ಚಳಿ?
ಪ್ರಸಕ್ತ ಸಾಲಿನ ಚಳಿಗಾಲದ ಅವಧಿಯಲ್ಲಿ ಚಳಿಯ ತೀವ್ರತೆ ಕಡಿಮೆ ಇರುವ ಮುನ್ಸೂಚನೆ ಇದೆ ಎಂದು ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ. ಎಲ್ ನೀನೋ ಪರಿಣಾಮ ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ಕಡಿಮೆಯಾಗಿದೆ. ಜೊತೆಗೆ ಚಳಿಗಾಲದ ತೀವ್ರತೆಯೂ ಕಡಿಮೆ ಇರಲಿದೆ. ಇನ್ನು ಹಿಂಗಾರು ಅವಧಿಯ ಈ ತಿಂಗಳ ಮಳೆ ಮುಕ್ತಾಯಗೊಂಡಿದೆ. ನವೆಂಬರ್ 2ನೇ ವಾರವರೆಗೂ ರಾಜ್ಯಕ್ಕೆ ಮಳೆ ಸಾಧ್ಯತೆ ಇಲ್ಲ. ಬೆಳಗಿನ ಅವಧಿಯಲ್ಲಿ ಚಳಿ ಅನುಭವ ಇದ್ದರೆ, ದಿನದ ಅವಧಿಯಲ್ಲಿ ತಾಪಮಾನ ಸಾಮಾನ್ಯದಂತೆಯೇ ಇರುತ್ತದೆ ಎಂದು ಶ್ರೀನಿವಾಸ ರೆಡ್ಡಿ ತಿಳಿಸಿದರು.
Oct 27, 2026, 12:13:26 AM







