ಬೆಂಗಳೂರು (ಸೆ.09):  ರಾಜ್ಯದಲ್ಲಿ ಮಾದಕ ವಸ್ತುಗಳ ದಂಧೆ ಮಟ್ಟಹಾಕಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ, ಯಾವುದೇ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ. ಶಾಲಾ-ಕಾಲೇಜುಗಳಲ್ಲಿ ಮಾದಕ ವಸ್ತುಗಳಿಂದ ಆಗುವ ಅನಾಹುತದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪುನರುಚ್ಚರಿಸಿದ್ದಾರೆ. ಮಂಗಳವಾರ ಪತ್ರಕರ್ತರು ಡ್ರಗ್ಸ್‌ ದಂಧೆ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎನ್ನುವ ಪತ್ರಕರ್ತರ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.

ಡ್ರಗ್ಸ್‌ ಕಾಯ್ದೆ ಬಿಗಿಗೊಳಿಸಲು ತಿದ್ದುಪಡಿ: ಬೊಮ್ಮಾಯಿ

ಮಾದಕ ವಸ್ತುಗಳ ಅಪರಾಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪ್ರಸ್ತುತ ಜಾರಿಯಲ್ಲಿರುವ ಎನ್‌ಡಿಪಿಎಸ್‌ ಕಾಯ್ದೆಯಿಂದ ಕೆಲವು ಅಪರಾಧಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಕಾಯ್ದೆಯನ್ನು ಬಿಗಿಗೊಳಿಸುವ ಸಂಬಂಧ ಕಾನೂನು ತಜ್ಞರು ಹಾಗೂ ಅಡ್ವೊಕೇಟ್‌ ಜನರಲ್‌ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಎನ್‌ಡಿಪಿಎಸ್‌ ಕಾಯ್ದೆ ತಿದ್ದುಪಡಿ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು, ಜತೆಗೆ ಮಾದಕ ವಸ್ತುಗಳ ಅಪರಾಧಗಳ ಸಂಬಂಧ ಈ ಹಿಂದೆ ಅನೇಕ ಪ್ರಕರಣಗಳಲ್ಲಿ ಹಲವರು ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಂಡಿರುವ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದರು.

ಹೇಮಾವತಿ ನೀರಿಗಾಗಿ ಸಿಎಂ ಬಳಿಗೆ ನಿಯೋಗ ...

ಕ್ಲೀನ್‌ ದಿ ಕ್ಯಾಂಪಸ್‌: ರಾಜ್ಯದಲ್ಲಿ ಮಾದಕ ವಸ್ತುಗಳ ವಿರುದ್ಧ ಸಮರ ಸಾರಿದ್ದು, ಶಾಲಾ-ಕಾಲೇಜುಗಳು ಆರಂಭವಾದ ನಂತರ ಆಡಳಿತ ಮಂಡಳಿಗಳ ಜೊತೆ ಚರ್ಚಿಸಿ ‘ಕ್ಲೀನ್‌ ದಿ ಕ್ಯಾಂಪಸ್‌’ ಅಭಿಯಾನ ಆಯೋಜಿಸುವಂತೆ ಸೂಚನೆ ನೀಡಲಾಗುವುದು. ಶಾಲಾ-ಕಾಲೇಜುಗಳ ಆವರಣದಲ್ಲಿ ಮಾದಕ ವಸ್ತು ಸಿಕ್ಕರೆ ಅದಕ್ಕೆ ಆಡಳಿತ ಮಂಡಳಿಯನ್ನೇ ಹೊಣೆ ಮಾಡಲಾಗುವುದು. ಜತೆಗೆ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಹಾನಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುವುದು ಎಂದರು.