ವಿಧಾನಸಭೆ :  ಸಕರು ರಾಜೀನಾಮೆ ನೀಡಿದಲ್ಲಿ ಅದನ್ನು ತಕ್ಷಣ ಅಂಗೀಕರಿಸುವ ಸಂಬಂಧ ವಿಧಾನಸಭೆಯ ಸ್ಪೀಕರ್‌ಗೆ 50 ಕೋಟಿ ರು. ನೀಡಲಾಗಿದೆ ಎಂಬ ಸಂಭಾಷಣೆ ಒಳಗೊಂಡಿರುವ ಆಡಿಯೋ ಸಿ.ಡಿ. ಬಹಿರಂಗ ಪ್ರಕರಣ ಕುರಿತು ವಿಧಾನಸಭೆಯ ಕಲಾಪದಲ್ಲಿ ಸತತ ಎರಡು ದಿನಗಳ ಕಾಲ ಬಿರುಸಿನ ವಾಕ್ಸಮರ ನಡೆಯುತ್ತಿದ್ದರೂ ಮೌನಕ್ಕೆ ಶರಣಾಗಿದ್ದ ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಮಂಗಳವಾರ ಸಂಜೆ ಮೌನ ಮುರಿದಿದ್ದಾರೆ.

‘ಗುರುಮಠಕಲ್‌ ಶಾಸಕ ನಾಗನನೌಡ ಅವರ ಪುತ್ರ ಶರಣಗೌಡ ಮಧ್ಯರಾತ್ರಿ 12 ಗಂಟೆ ವೇಳೆ ನನ್ನನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದು ಸತ್ಯ. ಆದರೆ, ಆ ಆಡಿಯೋದಲ್ಲಿರುವಂತೆ ಸ್ಪೀಕರ್‌ ಬಗೆಗಿನ ಆರೋಪದ ವೇಳೆ ನಾನು ಆ ಸ್ಥಳದಲ್ಲಿ ಇರಲಿಲ್ಲ. ಒಂದು ವೇಳೆ ನಾನು ಸ್ಪೀಕರ್‌ ಮೇಲಿನ ಆರೋಪದ ಸಮಯದಲ್ಲಿ ಅದೇ ಸ್ಥಳದಲ್ಲಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಸವಾಲು ಹಾಕಿದ್ದಾರೆ.

ಇದೇ ವೇಳೆ, ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಲು ಯಾವುದೇ ಕಾರಣಕ್ಕೂ ನಾವು ಒಪ್ಪುವುದಿಲ್ಲ. ಜಂಟಿ ಸದನ ಸಮಿತಿಗೆ ತನಿಖೆ ವಹಿಸಬೇಕು ಎಂದೂ ಅವರು ಒತ್ತಾಯ ಮಾಡಿದ್ದಾರೆ.

ಸದನದಲ್ಲಿ ತಮ್ಮ ಸ್ಪಷ್ಟನೆ ನೀಡಿದ ಅವರು, ಶರಣಗೌಡ ನಿದ್ದೆಯಲ್ಲಿದ್ದ ತನ್ನನ್ನು ಎಬ್ಬಿಸಿ ಮಾತನಾಡಿಸಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ತಾವೇ ಕಳುಹಿಸಿಕೊಟ್ಟಿರುವುದಾಗಿಯೂ ಒಪ್ಪಿಕೊಂಡಿದ್ದಾರೆ. ಆದರೆ 30-40 ನಿಮಿಷಗಳ ಕಾಲ ನಡೆದ ಚರ್ಚೆಯ ಆಡಿಯೋ ತುಣುಕನ್ನು ತಮಗೆ ಬೇಕಾದಂತೆ ತಿರುಚಿ ಎರಡೂವರೆ ನಿಮಿಷದ ಆಡಿಯೋ ಮಾತ್ರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಸ್ಪೀಕರ್‌ ರಮೇಶ್‌ ಕುಮಾರ್‌ ಅವರ ಘನತೆಗೆ ಚ್ಯುತಿ ತಂದಿದ್ದಾರೆ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಸ್ಪೀಕರ್‌ ಅವರ ಘನತೆಯನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ನಿಮಗೆ ಪ್ರಾಮಾಣಿಕತೆ ಇದ್ದರೆ ಸಂಪೂರ್ಣ ಆಡಿಯೋ ಬಿಡುಗಡೆ ಮಾಡಿ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿಗಳು ಪ್ರಕರಣವನ್ನು ತಮ್ಮ ಕುರ್ಚಿ ಉಳಿಸಿಕೊಳ್ಳಲು ಬಳಸಿಕೊಂಡಿದ್ದೇ ಅಲ್ಲದೆ, ಸ್ಪೀಕರ್‌ ರಮೇಶ್‌ಕುಮಾರ್‌ ಅವರಿಗೆ ಬರೆದ ಪತ್ರದಲ್ಲಿ ಸ್ಪೀಕರ್‌ ವಿರುದ್ಧ 50 ಕೋಟಿ ರು. ಹಣ ಪಡೆದ ಆರೋಪ ಮಾಡುವಾಗ ವಿರೋಧಪಕ್ಷದ ನಾಯಕ ಯಡಿಯೂರಪ್ಪ ಅವರೂ ಇದ್ದರು ಎಂದು ಆರೋಪಿಸಿದ್ದಾರೆ. ಒಂದು ವೇಳೆ ಸ್ಪೀಕರ್‌ ಬಗೆಗಿನ ಹಣಕಾಸು ಚರ್ಚೆ ವೇಳೆ ಅಲ್ಲಿ ಇದ್ದದ್ದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇದನ್ನು ಪುನರುಚ್ಚರಿಸುತ್ತೇನೆ ಎಂದರು.

ಇದು ಸಿಎಂ ಷಡ್ಯಂತ್ರ- ಬಿಎಸ್‌ವೈ:

ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮುಂದುವರೆಸಿದ ಅವರು, ‘ಶರಣಗೌಡ ಮುಖ್ಯಮಂತ್ರಿಗಳ ಬಳಿ ನನ್ನನ್ನು ಕರೆಯುತ್ತಿದ್ದಾರೆ ಎಂದು ಹೇಳಿದಾಗ ಅವರು ರೆಕಾರ್ಡ್‌ ಮಾಡಿಕೊಂಡು ಬಾ ಎಂದು ಕಳುಹಿಸಿಕೊಡಬಾರದಿತ್ತು. ಮುಖ್ಯಮಂತ್ರಿಗಳಿಗೆ ನೈತಿಕತೆ ಇದ್ದರೆ ಇಂತಹ ಕೆಲಸಕ್ಕೆ ಕೈಹಾಕಬೇಡಪ್ಪ, ಅಲ್ಲಿಗೆ ಹೋಗಬೇಡ’ ಎಂದು ಹೇಳಬೇಕಿತ್ತು. ಮುಖ್ಯಮಂತ್ರಿಗಳು ತಾವೇ ಕಳುಹಿಸಿಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲಿನ ಮಾತುಕತೆ ರೆಕಾರ್ಡ್‌ ಮಾಡಿಸಿ, ಬೇಕಾದಂತೆ ತಿರುಚಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. 30-40 ನಿಮಿಷದ ಆಡಿಯೋದಲ್ಲಿ ಎರಡೂವರೆ ನಿಮಿಷದ ಆಡಿಯೋ ಮಾತ್ರ ಬಿಡುಗಡೆ ಮಾಡಿ, ತಮ್ಮ ಅನುಕೂಲಕ್ಕೆ ತಕ್ಕಂತೆ ಪ್ರಕರಣವನ್ನು ಬಿಂಬಿಸಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.

ಸ್ಪೀಕರ್‌ಗೆ ವಿಷಯ ತಿಳಿಸಿಲ್ಲ:

ವಿಧಾನಸಭೆ ಅಧ್ಯಕ್ಷರ ಮೇಲೆ 50 ಕೋಟಿ ರು. ಹಣ ಪಡೆದ ಆರೋಪ ಬಂದಾಗ ಅಧ್ಯಕ್ಷರನ್ನು ರಕ್ಷಿಸಬೇಕು ಎಂಬ ಉದ್ದೇಶವಿದ್ದಿದ್ದರೆ ಮುಖ್ಯಮಂತ್ರಿಗಳು ಪ್ರಕರಣದ ಬಗ್ಗೆ ಗೌಪ್ಯತೆ ಕಾಪಾಡಬೇಕಿತ್ತು. ಮಾಧ್ಯಮಗಳ ಎದುರು ವಿಷಯ ಪ್ರಸ್ತಾಪ ಮಾಡದೆ ಸಭಾಧ್ಯಕ್ಷರಿಗೆ ವಿಷಯ ಮುಟ್ಟಿಸಬೇಕಿತ್ತು. ಮುಖ್ಯಮಂತ್ರಿಗಳು ನೇರವಾಗಿ ಸ್ಪೀಕರ್‌ಗೆ ಮಾತ್ರ ಆಡಿಯೋ ನೀಡಿ ವಿಚಾರ ಮುಟ್ಟಿಸಿದ್ದರೆ ಇಂದು ದೇಶಾದ್ಯಂತ ಈ ವಿಚಾರ ಸುದ್ದಿ ಆಗುತ್ತಿರಲಿಲ್ಲ. ನಿಮ್ಮ ದುರುದ್ದೇಶಕ್ಕಾಗಿ ಸಭಾಧ್ಯಕ್ಷರನ್ನು ಆರೋಪಿ ಮಾಡಿದ್ದೀರಿ ಎಂದು ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಸಮ್ಮಿಶ್ರ ಸರ್ಕಾರದ ಬಗ್ಗೆ ಶಾಸಕರಿಗೆ ವಿಶ್ವಾಸವಿಲ್ಲ. ನಾವು ಆಮಿಷ ಒಡ್ಡಿದ್ದೇವೆ ಎಂದು ಸುಳ್ಳು ಆರೋಪ ಮಾಡುತ್ತಿದ್ದೀರಿ. ಆಸೆ, ಆಮಿಷ ಒಡ್ಡುವ ಪ್ರಯತ್ನವನ್ನು ನೀವೂ ಮಾಡಿದ್ದೀರಿ ಎಂಬುದನ್ನು ಮರೆಯಬೇಡಿ. ಸುಭಾಷ್‌ ಗುತ್ತೇದಾರ್‌ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಆಮಿಷ ಒಡ್ಡಿರಲಿಲ್ಲವೇ? ಎಂಎಲ್‌ಸಿ ಮಾಡಲು 25 ಕೋಟಿ ರು. ಕೇಳಿರಲಿಲ್ಲವೇ? ತಾವೇ ಇದೆಲ್ಲಾ ಅನಿವಾರ್ಯ ಎಂದು ಒಪ್ಪಿಕೊಂಡಿರಲಿಲ್ಲವೇ? ಇದೀಗ ಸತ್ಯ ಹರಿಶ್ಚಂದ್ರರಂತೆ ಬಿಂಬಿಸಿಕೊಳ್ಳುತ್ತಿದ್ದೀರಿ ಎಂದು ದೂರಿದರು.

ಮುಖ್ಯಮಂತ್ರಿಗಳೇ ಮೊದಲ ಅಪರಾಧಿ

ಸಭಾಧ್ಯಕ್ಷರ ಬಗೆಗಿನ ಆಡಿಯೋ ಪ್ರಕರಣದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೇ ಮೊದಲ ಅಪರಾಧಿ. ಭಾರತೀಯ ದಂಡ ಸಂಹಿತೆ ಅಡಿ ನಾಲ್ಕು ಆರೋಪದ ಮೇಲೆ ಅವರು ದಂಡನಾರ್ಹ ಅಪರಾಧ ಎದುರಿಸಲಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಸದನದಲ್ಲಿ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಶರಣಗೌಡರನ್ನು ತಮ್ಮ ಬಳಿಗೆ ಕಳುಹಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ದುರುದ್ದೇಶಪೂರ್ವಕವಾಗಿ ಇದನ್ನು ಮಾಡಿರುವ ಮುಖ್ಯಮಂತ್ರಿಗಳು ಮೊದಲ ಆರೋಪಿಯಾಗುತ್ತಾರೆ.

ಅವರು ಪ್ರಕರಣದಲ್ಲಿ ನಕಲಿ ದಾಖಲೆ ಸೃಷ್ಟಿಮಾಡಿರುವುದು, ಸುಳ್ಳು ದಾಖಲೆ ಸೃಷ್ಟಿಮಾಡಿರುವುದು, ಮೋಸ ಹಾಗೂ ವಂಚನೆ ಮಾಡುವ ದೃಷ್ಟಿಯಿಂದ ಘಟನೆಗೆ ಪ್ರೇರೇಪಣೆ ನೀಡಿರುವುದು, ಜತೆಗೆ ಆಡಿಯೋ ನಕಲಿ ಎಂದು ಗೊತ್ತಿದ್ದರೂ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವುದು ಈ ಎಲ್ಲ ಆರೋಪಗಳ ಮೇಲೆ ಅವರು ಪ್ರಕರಣದ ಮೊದಲ ಆರೋಪಿಯಾಗುತ್ತಾರೆ. ಇದು ಭಾರತೀಯ ದಂಡ ಸಂಹಿತೆ ಅಡಿ ದಂಡನಾರ್ಹ ಅಪರಾಧ. ಜತೆಗೆ ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿಯಲ್ಲೂ ಅವರು ಅಪರಾಧಿಯಾಗಲಿದ್ದಾರೆ.

ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳೇ ಮೊದಲ ಆರೋಪಿಯಾಗಿದ್ದು, ಎಸ್‌ಐಟಿ ಅವರ ಅಡಿಯಲ್ಲೇ ಬರುವುದರಿಂದ ಎಸ್‌ಐಟಿಗೆ ತನಿಖೆ ವಹಿಸುವುದು ಬೇಡ. ಬದಲಿಗೆ ಸದನ ಸಮಿತಿಗೆ ವಹಿಸಬೇಕು ಎಂದು ಒತ್ತಾಯ ಮಾಡಿದರು.