Asianet Suvarna News Asianet Suvarna News

ಅ.15ಕ್ಕೆ ಮೈಸೂರು ದಸರಾ; ಏರ್ ಶೋ ನಡೆಸಲು ಚಿಂತನೆ: ಸಿಎಂ ಸಿದ್ದು

ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಈ ವರ್ಷ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದ್ದು, ಅಕ್ಟೋಬರ್‌ 15ರಂದು ದಸರಾ ಉದ್ಘಾಟನೆಗೆ ಶುಭ ಮುಹೂರ್ತ ನಿಗದಿಪಡಿಸಿದೆ. 

will organise meaningful grand mysuru dasara this year says cm siddaramaiah gvd
Author
First Published Aug 1, 2023, 4:45 AM IST

ಬೆಂಗಳೂರು (ಆ.01): ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಈ ವರ್ಷ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದ್ದು, ಅಕ್ಟೋಬರ್‌ 15ರಂದು ದಸರಾ ಉದ್ಘಾಟನೆಗೆ ಶುಭ ಮುಹೂರ್ತ ನಿಗದಿಪಡಿಸಿದೆ. ಈ ಬಾರಿಯ ದಸರಾ ಉತ್ಸವದಲ್ಲಿ ರಾಜ್ಯದ ಪರಂಪರೆ, ಜಿಲ್ಲೆಗಳ ವಿಶೇಷತೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳ ಸಾಲಿನಲ್ಲಿ ಸರ್ಕಾರದ ಶಕ್ತಿ, ಗೃಹ ಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಯುವ ನಿಧಿ ಪಂಚ ಯೋಜನೆಗಳ ಮಾಹಿತಿ ಹಾಗೂ ಮಹತ್ವವನ್ನು ಸಾರುವ ಸ್ತಬ್ಧಚಿತ್ರಗಳೂ ಇರಲಿವೆ. ಈ ವರ್ಷ ಶಕ್ತಿ ಯೋಜನೆ ಜಾರಿ ಹಿನ್ನೆಲೆಯಲ್ಲಿ ನಾಡಿನ ಮೂಲೆ ಮೂಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬರುವ ಸಾಧ್ಯತೆಯಿಂದ ದಸರಾ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯ ಸಾರಿಗೆ ಬಸ್ಸುಗಳ ಕಾರ್ಯಾಚರಣೆಗೆ ನಿರ್ಧರಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ವಿಧಾನಸೌಧದಲ್ಲಿ ನಡೆದ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ಎಲ್ಲ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಮುಖ್ಯಮಂತ್ರಿಗಳು, ದಸರಾ ಮಹೋತ್ಸವವನ್ನು ಅನಗತ್ಯ ಖರ್ಚುಗಳಿಲ್ಲದೆ ಅರ್ಥಪೂರ್ಣವಾಗಿ, ಅದ್ಧೂರಿಯಾಗಿ ಹಾಗೂ ದಸರಾ ಜನರ ಉತ್ಸವವಾಗಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅ.15ರ ಬೆಳಗ್ಗೆ 10.15ರಿಂದ 10.30ರೊಳಗೆ ಸಲ್ಲುವ ಶುಭ ಮುಹೂರ್ತದಲ್ಲಿ ದಸರಾ ಉದ್ಘಾಟನೆ ನೆರವೇರಿಸಲಾಗುವುದು.

ಆಗಸ್ಟ್‌ ಮೊದಲ ವಾರವೇ ಭದ್ರಾ ನಾಲೆಗೆ ನೀರು: ಸಚಿವ ಮಲ್ಲಿಕಾರ್ಜುನ್‌

ಪ್ರತಿ ವರ್ಷದಂತೆ ಅತ್ಯಂತ ವ್ಯವಸ್ಥಿತವಾಗಿ ದೀಪಾಲಂಕಾರ, ವಸ್ತುಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ರೈತರ ದಸರಾ, ಯುವ ದಸರಾ ಆಚರಿಸಲಾಗುವುದು. ವಿಜಯ ದಶಮಿಯ ದಿನ ಪಂಜಿನ ಕವಾಯತು ನಡೆಯಲಿದೆ. ಈ ಬಾರಿ ದೀಪಾಲಂಕಾರ ದಸರಾ ಉದ್ಘಾಟನೆಯ ದಿನದಿಂದ ದಸರಾ ಮುಗಿದ ನಂತರದ ಒಂದು ವಾರದವರೆಗೂ ಇರಬೇಕೆಂದು ಸಭೆ ತೀರ್ಮಾನಿಸಿದೆ. ಇದೇ ವೇಳೆ ಶ್ರೀರಂಗಪಟ್ಟಣ ಹಾಗೂ ಚಾಮರಾಜನಗರಗಳಲ್ಲೂ ದಸರಾ ಉತ್ಸವ ನಡೆಸಲು ನಿರ್ಧಾರವಾಗಿದೆ ಎಂದು ಹೇಳಿದರು.

5 ಗ್ಯಾರಂಟಿ ಬಿಂಬಿಸುವ ಸ್ತಬ್ಧಚಿತ್ರ: ಸ್ತಬ್ಧಚಿತ್ರಗಳಲ್ಲಿ ರಾಜ್ಯದ ಪರಂಪರೆ, ಜಿಲ್ಲಾ ವೈಶಿಷ್ಟ್ಯತೆಗಳ ಜೊತೆಗೆ ಸರ್ಕಾರದ 5 ಗ್ಯಾರಂಟಿ ಯೋಜನೆಗಳನ್ನು ಬಿಂಬಿಸಲಾಗುವುದು. ನಮ್ಮ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಸಂದೇಶವನ್ನು ನೀಡುವ ಉದ್ದೇಶ ಇದಾಗಿದೆ ಎಂದರು. ದಸರಾ ಉದ್ಘಾಟನೆಯ ದಿನವೇ ವಸ್ತುಪ್ರದರ್ಶನವೂ ಉದ್ಘಾಟನೆಯಾಗಲಿದೆ. ವಸ್ತು ಪ್ರದರ್ಶನದಲ್ಲಿ ಸರ್ಕಾರಿ ಇಲಾಖೆಗಳು ಮಳಿಗೆಗಳನ್ನು ಆರಂಭದ ದಿನದಿಂದಲೇ ತೆರೆಯಬೇಕು. ತಡವಾಗಿ ಆರಂಭಿಸಬಾರದು ಹಾಗೂ ಎಲ್ಲ ಮಳಿಗೆಗಳೂ ಕೂಡ ಭರ್ತಿಯಾಗಿರಬೇಕೆಂದು ಸೂಚಿಸಿದರು.

ಸ್ಥಳೀಯ ಕಲಾವಿದರಿಗೆ ಪ್ರಾಶಸ್ತ್ಯ: ರಾಜ್ಯದಲ್ಲಿ ಎಲ್ಲಾ ಪ್ರಕಾರಗಳಲ್ಲೂ ಉತ್ತಮ ಕಲಾವಿದರಿರುವುದರಿಂದ ಅವರಿಗೆ ಹೆಚ್ಚಿನ ಒತ್ತು ನೀಡಬೇಕು ಹಾಗೂ ಕಾಲೇಜು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಯುವ ದಸರಾದಲ್ಲಿ ವೇದಿಕೆ ಸಿದ್ಧಪಡಿಸಬೇಕು. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ದಸರಾ ನೋಡಲು ಬರುವ ಪ್ರವಾಸಿಗರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಹಾಗಾಗಿ ದಸರಾ ವೇಳೆ ರಾಜ್ಯದ ಎಲ್ಲ ಭಾಗಗಳಿಂದಲೂ ರಾಜ್ಯ ಸಾರಿಗೆ ಬಸ್ಸುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಾಚರಣೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು. ಇದಕ್ಕೂ ಮುನ್ನ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಡಾ.ಹೆಚ್‌.ಸಿ.ಮಹದೇವಪ್ಪ, ಶಿವರಾಜ ತಂಗಡಗಿ, ಹೆಚ್‌.ಕೆ.ಪಾಟೀಲ್‌, ಭೈರತಿ ಸುರೇಶ್‌, ವೆಂಕಟೇಶ್‌, ಶಾಸಕರಾದ ತನ್ವೀರ್‌ ಸೇಠ್‌, ಜಿ.ಟಿ.ದೇವೇಗೌಡ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮೈಸೂರು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮೊದಲಾದವರು ಉಪಸ್ಥಿತರಿದ್ದರು.

ಸುತ್ತೂರು ಶ್ರೀಗಳಿಂದ ಉದ್ಘಾಟನೆ?: ಈ ಬಾರಿಯ ದಸರಾ ಉದ್ಘಾಟನೆಗೆ ಯಾರಿಗೆ ಆಹ್ವಾನ ನೀಡಬೇಕು ಎಂಬುದನ್ನು ನಿರ್ಧರಿಸುವ ಹೊಣೆಯನ್ನು ಉನ್ನತ ಮಟ್ಟದ ಸಭೆಯ ಸದಸ್ಯರು ನನಗೇ ವಹಿಸಿದ್ದಾರೆ. ಚರ್ಚೆ ನಡೆಸಿ ಯಾರನ್ನು ಆಹ್ವಾನಿಸಬೇಕೆಂಬ ಬಗ್ಗೆ ತೀರ್ಮಾನಿಸುತ್ತೇನೆ ಎಂದು ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಭೆಯಲ್ಲಿ ಯಾವ ಹೆಸರೂ ಪ್ರಸ್ತಾಪ ಆಗಲಿಲ್ಲವಾ ಎಂಬ ಪ್ರಶ್ನೆಗೆ, ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್‌.ಶ್ರೀವತ್ಸ ಅವರು ಸುತ್ತೂರು ಮಠದ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿ ಅವರ ಹೆಸರನ್ನು ಪ್ರಸ್ತಾಪಿಸಿದ್ದು ಬಿಟ್ಟರೆ ಇನ್ಯಾವುದೇ ಪ್ರಸ್ತಾಪ, ಚರ್ಚೆಗಳು ನಡೆದಿಲ್ಲ. ಮುಂದಿನ ದಿನಗಳಲ್ಲಿ ಬೇರೆ ಬೇರೆಯವರೊಂದಿಗೆ ಚರ್ಚೆ ನಡೆಸಿ ಉದ್ಘಾಟಕರನ್ನು ಅಂತಿಮಗೊಳಿಸಲಾಗುವುದು ಎಂದರು.

ಈ ಸಲ ದಸರಾದಲ್ಲಿ ಏರ್‌ಶೋ?: ದಸರಾ ಸಂದರ್ಭದಲ್ಲಿ ಏರ್‌ ಶೋ ಹಮ್ಮಿಕೊಳ್ಳಲು ಉದ್ದೇಶಿಸಿದ್ದು, ಈ ಕುರಿತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರೊಂದಿಗೆ ಚರ್ಚಿಸಲಾಗುವುದು ಎಂದು ಇದೇ ವೇಳೆ ಮುಖ್ಯಮಂತ್ರಿ ಅವರು ತಿಳಿಸಿದರು. ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ದಸರಾ ವೇಳೆ ಏರ್‌ ಶೋಗೆ ಅವಕಾಶ ಮಾಡಿಕೊಡಲಾಗಿತ್ತು. ಈ ಬಾರಿಯೂ ಜನರಿಗೆ ಇಂತಹ ಅವಕಾಶ ಕಲ್ಪಿಸಿಕೊಡಬೇಕೆಂಬ ಉದ್ದೇಶವಿದೆ. ರಕ್ಷಣಾ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.

ಕಾಂಗ್ರೆಸ್‌ ಗ್ಯಾರಂಟಿಯಿಂದ ಕುಟುಂಬದ ಆರ್ಥಿಕ ಸ್ಥಿತಿ ಸದೃಢ: ಸಚಿವ ಚಲುವರಾಯಸ್ವಾಮಿ

ದಸರಾದಲ್ಲಿ ಅನಗತ್ಯ ಖರ್ಚುಗಳಾಗದಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ.ಮಹದೇವಪ್ಪ ಅವರ ನೇತೃತ್ವದ ಕಾರ್ಯಕಾರಿ ಸಮಿತಿಯು ನಾಡಹಬ್ಬದ ಖರ್ಚುವೆಚ್ಚದ ಅಂದಾಜನ್ನು ಸಿದ್ಧಪಡಿಸಿ ಸರ್ಕಾರಕ್ಕೆ ನೀಡಲಿದೆ. ಅದರ ಆಧಾರದ ಮೇಲೆ ಅನುದಾನ ಒದಗಿಸುವ ಕ್ರಮ ವಹಿಸಲಾಗುತ್ತದೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ

Follow Us:
Download App:
  • android
  • ios