'ಇನ್ಮುಂದೆ ಲಾಕ್‌ಡೌನ್ ಇಲ್ಲ, ಕೊರೋನಾ ನಡುವೆಯೇ ಅಭಿವೃದ್ಧಿಯತ್ತ ಗಮನ'
ಕೊರೋನಾ ನಡುವೆಯೇ ಇನ್ನು ಅಭಿವೃದ್ಧಿಯತ್ತ ಗಮನ: ಸಿಎಂ| ಕೊರೋನಾದಿಂದ ಅಭಿವೃದ್ಧಿ ಕುಂಠಿತ, ಇನ್ನುಮುಂದೆ ಲಾಕ್‌ಡೌನ್ ಇಲ್ಲ| ರಾಜ್ಯ ಸರ್ಕಾರದ 1 ವರ್ಷದ ಪ್ರಗತಿ ವರದಿ ಬಿಡುಗಡೆ ಮಾಡಿದ ಬಿಎಸ್‌ವೈ| ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಿ| ‘ಸವಾಲುಗಳ 1 ವರ್ಷ, ಪರಿಹಾರದ ಸ್ಪರ್ಶ’ ‘ಪುಟಕ್ಕಿಟ್ಟ ಚಿನ್ನ’ ಬಿಡುಗಡೆ
ಬೆಂಗಳೂರು(ಜು.28): ಇನ್ನುಮುಂದೆ ಮಹಾಮಾರಿ ಕೋವಿಡ್ ನಡುವೆಯೇ ರಾಜ್ಯದ ಅಭಿವೃದ್ಧಿಯತ್ತ ಎಲ್ಲರೂ ಗಮನಹರಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ.
ಕೋವಿಡ್ ನಿಯಂತ್ರಣ ಸಂಬಂಧ ಮುಂದೆ ಇನ್ನು ಮುಂದೆ ಲಾಕ್‌ಡೌನ್ ಜಾರಿಗೊಳಿಸುವುದಿಲ್ಲ. ಕೋವಿಡ್ ಜತೆಗೇ ಬದುಕುವುದು ಅನಿವಾರ್ಯ. ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಮುಂದಿನ ಕೆಲಸಗಳನ್ನು ಮಾಡಬೇಕು ಎಂದೂ ಅವರು ಹೇಳಿದ್ದಾರೆ.
ತಮ್ಮ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸವಾಲುಗಳ ಒಂದು ವರ್ಷ, ಪರಿಹಾರದ ಸ್ಪರ್ಶ’ ಎಂಬ ಪ್ರಗತಿ ವರದಿ ಮತ್ತು ಸರ್ಕಾರದ ಆಡಳಿತದ ಬಗ್ಗೆ ವಿವಿಧ ಕ್ಷೇತ್ರಗಳ ಗಣ್ಯರು ಬರೆದಿರುವ ಲೇಖನಗಳ ಸಂಗ್ರಹ ‘ಪುಟಕ್ಕಿಟ್ಟಚಿನ್ನ’ ಎಂಬ ಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪ್ರತಿಭಟನೆಯಲ್ಲಿ ಭಾರಿ ಹೈಡ್ರಾಮಾ: ಸಾಮಾಜಿಕ ಅಂತರ ಮಾಯ!
ಇನ್ನು ಮುಂದೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೋಂಕು ನಿಯಂತ್ರಣದತ್ತ ಶ್ರಮ ಹಾಕಬೇಕು. ರಾಜ್ಯದ ಆರ್ಥಿಕತೆಯ ಕಡೆಗೆ ಗಮನಹರಿಸಬೇಕು. ಸಚಿವರು, ಶಾಸಕರು ಆರ್ಥಿಕ ಸೋರಿಕೆಯಾಗದಂತೆ ಸರ್ಕಾರದ ಖಜಾನೆಯನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಅವರು ಸೂಚಿಸಿದರು.
ಕೋವಿಡ್ ಸಂಕಷ್ಟಎದುರಾಗದಿದ್ದರೆ ರಾಜ್ಯವನ್ನು ಮತ್ತಷ್ಟುಅಭಿವೃದ್ಧಿಗೆ ಕೊಂಡೊಯ್ಯಬಹುದಿತ್ತು. ಆದರೆ, ಕೋವಿಡ್‌ನಿಂದಾಗಿ ಅಭಿವೃದ್ಧಿ ಕಾರ್ಯಕ್ಕೆ ತಡೆಯಾಗಿದೆ. ಆ ನೋವು ನನಗಿದೆ. ಆದರೂ, ಧೃತಿಗೆಡದೆ ಅಭಿವೃದ್ಧಿಯ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯದ ಜನತೆಗೆ ಸುಭದ್ರ ಸರ್ಕಾರ ನೀಡುವುದು ಮತ್ತು ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಮಾಡುವುದು ನಮ್ಮ ಗುರಿಯಾಗಿದೆ. ಅದಕ್ಕಾಗಿ ನಾನು ಶಕ್ತಿ ಮೀರಿ ಶ್ರಮವಹಿಸುತ್ತೇನೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿಯೂ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಿಂತಿಲ್ಲ. ಇದಕ್ಕೆ ಸಹಕರಿಸಿದ ಸಂಪುಟದ ಎಲ್ಲಾ ಸಹೋದ್ಯೋಗಿಗಳು, ಶಾಸಕರು, ಸಂಸದರು ಮತ್ತು ಪ್ರತಿಪಕ್ಷದ ನಾಯಕರಿಗೆ ಸೇರಿದಂತೆ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬರಗಾಲದ ವೇಳೆ ನಾನು ಅಧಿಕಾರದ ಚುಕ್ಕಾಣಿ ಹಿಡಿದೆ. ಆದರೆ, ಕೆಲವು ದಿನದಲ್ಲಿ ಉತ್ತಮ ಮಳೆಯಾಗಿ ಅತಿವೃಷ್ಟಿಉಂಟಾಗಿ ಅಪಾರ ಪ್ರಮಾಣದಲ್ಲಿ ನಷ್ಟಸಂಭವಿಸಿತು. ಅದು ನನಗೆ ಅಗ್ನಿಪರೀಕ್ಷೆಯಾಯಿತು. ಸರ್ಕಾರದಲ್ಲಿ ಒಬ್ಬನೇ ಇದ್ದು, ಸಂಪುಟದಲ್ಲಿ ಸಚಿವರು ಇರಲಿಲ್ಲ. ಒಬ್ಬಂಟಿಯಾಗಿ ಪ್ರವಾಸ ಕೈಗೊಂಡು ಜನರ ಸಂಕಷ್ಟಆಲಿಸಿ, ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಯಿತು. ನಮ್ಮ ಆಡಳಿತವಧಿಯಲ್ಲಿ ರೈತ, ಆತನ ಕುಟುಂಬ ನೆಮ್ಮದಿಯಿಂದ ಬದುಕಬೇಕು ಎಂಬುದು ನನ್ನ ಆಶಯ. ಮುಂದಿನ ಮೂರು ವರ್ಷದಲ್ಲಿ ಯಾವುದೇ ಬಡವನಿಗೆ ಮನೆ ಇಲ್ಲ ಎಂದು ಆಗಬಾರದು. ಅದಕ್ಕಾಗಿ ಎಲ್ಲಾ ರೀತಿಯ ಪ್ರಯತ್ನ ಪಟ್ಟು ಕೆಲಸ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಸರ್ಕಾರ ಬಿಡುಗಡೆ ಮಾಡಿದ ಎರಡು ಪುಸ್ತಕಗಳಲ್ಲಿ ಏನಿದೆ?
ಎಪಿಎಂಸಿ ಕಾಯ್ದೆ ತಿದ್ದುಪಡಿ ಮೂಲಕ ತೈತರು ತಮ್ಮ ಕೃಷಿ ಉತ್ಪನ್ನಗಳನ್ನು ಎಲ್ಲಿ ಬೇಕಾದರೆ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಉತ್ತಮ ಬೆಲೆಗೆ ಮಾರಾಟ ಮಾಡುವ ಸ್ವಾತಂತ್ರ್ಯ ಕಲ್ಪಿಸಲಾಗಿದೆ. ಈ ಬಗ್ಗೆ ಯಾರು ಏನೇ ಟೀಕೆ ಮಾಡಿದರೂ ಅದನ್ನು ಪರಿಗಣಿಸದೆ ರೈತರ ಏಳ್ಗೆಗಾಗಿ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಯುವಜನಾಂಗಕ್ಕೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿ ಜಾರಿ ಮಾಡಲಾಗುತ್ತಿದೆ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಕೆಲವು ಟೀಕೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಶೇ.2ರಷ್ಟುಭೂಮಿಯನ್ನಷ್ಟೇ ಕೈಗಾರಿಕೆಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಅನಗತ್ಯವಾಗಿ ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ. ಕಾಯ್ದೆ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ನಾಡಿನ ಜನರ, ರೈತರ, ಕೃಷಿ ಕಾರ್ಮಿಕರ, ದೀನ-ದಲಿತರ, ಬಡವರ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ. ರೈತ ಮತ್ತು ನೇಕಾರ ನನ್ನ ಎರಡು ಕಣ್ಣುಗಳಿದ್ದಂತೆ. ರಾಜ್ಯದ ಸಮಗ್ರ ಜನತೆಯ ಋುಣ ತೀರಿಸಬೇಕಾಗಿದೆ. ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರೂ ಇನ್ನಷ್ಟುಸಾಧಿಸಬೇಕಾಗಿದೆ. ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಿಂದ ಸ್ಫೂರ್ತಿಗೊಂಡು ಅದೇ ಮಾದರಿಯಲ್ಲಿ ರೈತರಿಗೆ ಎರಡು ಕಂತಿನಲ್ಲಿ ತಲಾ ಎರಡು ಸಾವಿರ ರು. ನೀಡಲಾಗಿದೆ. ರಾಜ್ಯದ 50 ಲಕ್ಷ ರೈತರಿಗೆ ತಲಾ 4 ಸಾವಿರ ರು. ನೀಡಲಾಗುತ್ತಿದೆ. ರಾಜ್ಯದಲ್ಲಿನ ರೈತರು ಮತ್ತು ನೇಕಾರರು ಸರ್ಕಾರದ ಎರಡು ಕಣ್ಣುಗಳಿದ್ದಂತೆ. ಹೀಗಾಗಿಯೇ ಅವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಯಡಿಯೂರಪ್ಪ ನುಡಿದರು.
ದ್ವೇಷದ ರಾಜಕಾರಣ ಮಾಡುವುದಿಲ್ಲ
ನಾನು ಎಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ಯಾರು ಎಷ್ಟೇ ಟೀಕೆ ಮಾಡಿದರೂ ಅವರನ್ನು ಗೌರವದಿಂದಲೇ ಕಾಣುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಟೀಕೆಗಳಿಗೆ ಹೆಚ್ಚಿನ ಗಮನ ನೀಡುವುದಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯವನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಲು ತೀರ್ಮಾನಿಸಿದ್ದೇನೆ. ದೇಶದಲ್ಲಿ ಕರ್ನಾಟಕವನ್ನು ಎಲ್ಲಾ ಕ್ಷೇತ್ರದಲ್ಲಿಯೂ ಮಾದರಿ ರಾಜ್ಯವಾಗಬೇಕು ಎಂಬ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ. ಪ್ರತಿಪಕ್ಷಗಳು ನೀಡುವ ಸಲಹೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತೇನೆ ಎಂದು ಹೇಳಿದರು.
ಬೆಳಗ್ಗೆಯಿಂದ ಅಬ್ಬರಿಸಿ ಸಂಜೆ ಬಿಎಸ್‌ವೈಗೆ ಅಭಿನಂದನೆ ತಿಳಿಸಿದ ಸಿದ್ದು, ಇದೇ ರಾಜಕೀಯ ಗುರು...!
ಬೆಂಗಳೂರು ಅಭಿವೃದ್ಧಿಗೆ ಆದ್ಯತೆ
ದೇಶದಲ್ಲಿಯೇ ಗಮನ ಸೆಳೆದಿರುವ ಬೆಂಗಳೂರು ನಗರಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಕಲ್ಪಿಸುವ ನಿಟ್ಟಿನಲ್ಲಿ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಮುಂದಿನ ಮೂರು ವರ್ಷದಲ್ಲಿ ಬೆಂಗಳೂರು ಮಾದರಿ ನಗರವನ್ನಾಗಿ ಮಾಡಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗುವುದು. ರಸ್ತೆಗಳು ಸೇರಿದಂತೆ ಮೂಲಸೌಕರ್ಯ ಸೌಲಭ್ಯ ಕಲ್ಪಿಸಿ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಲಾಗುವುದು ಎಂದು ತಿಳಿಸಿದರು.