Asianet Suvarna News Asianet Suvarna News

ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ಭಾರಿ ಹೈಡ್ರಾಮಾ: ಸಾಮಾಜಿಕ ಅಂತರ ಮಾಯ!

ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ಭಾರಿ ಹೈಡ್ರಾಮಾ| ರಾಜಸ್ಥಾನ ಬೆಳವಣಿಗೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ| ಸಾಮಾಜಿಕ ಅಂತರ ಮರೆತು, ರಸ್ತೆಯಲ್ಲಿ ಮಲಗಿ ನಾಯಕರ ಆಕ್ರೋಶ| ಪೊಲೀಸರ ಜೊತೆ ಸಿದ್ದು, ಡಿಕೆಶಿ ವಾಗ್ವಾದ; ಎಲ್ಲರೂ ವಶಕ್ಕೆ| ರಾಜಭವನಕ್ಕೆ ತೆರಳದೆ ಅಂಚೆಯಲ್ಲಿ ಮನವಿ ಕಳಿಸಿದ ಕೆಪಿಸಿಸಿ

Karnataka Congress Leaders Protest Against BJP Forgets To Maintain Social Distancing
Author
Bangalore, First Published Jul 28, 2020, 7:14 AM IST

ಬೆಂಗಳೂರು(ಜು.28): ಬಿಜೆಪಿ ನಾಯಕರು ಬಿಜೆಪಿಯೇತರ ಸರ್ಕಾರಗಳನ್ನು ‘ಆಪರೇಷನ್‌ ಕಮಲ’ದ ಮೂಲಕ ಕೆಡವಿ ಸಂವಿಧಾನದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್‌ ಸೋಮವಾರ ನಡೆಸಿದ ಪ್ರತಿಭಟನೆ ವೇಳೆ ಭಾರಿ ಹೈಡ್ರಾಮಾ ಸೃಷ್ಟಿಯಾಯಿತು.

ಕೊರೋನಾ ಹಾಹಾಕಾರದ ನಡುವೆಯೇ ಸಾಮಾಜಿಕ ಅಂತರ ಮರೆತು ನೂರಾರು ಪ್ರತಿಭಟನಾಕಾರರು ಮನವಿ ಅರ್ಪಿಸಲು ರಾಜಭವನದತ್ತ ಸಾಗಿದಾಗ ಪೊಲೀಸರು ತಡೆದರು. ಪೊಲೀಸರ ಈ ಧೋರಣೆ ಖಂಡಿಸಿ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್‌ ನಾಯಕರು ನಡು ರಸ್ತೆಯಲ್ಲೇ ಕುಳಿತು ಧರಣಿ ಆರಂಭಿಸಿದರು. ಇದರಿಂದ ವಾಹನ ಸಂಚಾರಕ್ಕೆ ಧಕ್ಕೆಯಾದಾಗ ಪೊಲೀಸರು ಮುಖಂಡರನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಖುದ್ದು ಸಿದ್ದರಾಮಯ್ಯ ಅವರೇ ಪೊಲೀಸರನ್ನು ತರಾಟೆಗೆ ತೆಗೆದುಕೊಂಡು, ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ನಮ್ಮನ್ನು ತಡೆಯಲು ಸರ್ಕಾರ ನಿಮಗೆ ನಿರ್ದೇಶಿಸಿದೆಯೇ ಎಂದು ಪ್ರಶ್ನಿಸಿದರು.

ಇಂಡಿಯನ್‌ ಎಕ್ಸ್‌ಪ್ರೆಸ್‌ ವೃತ್ತದ ಬಳಿ ನಡು ರಸ್ತೆಯಲ್ಲೇ ಪ್ರತಿಭಟನಾಕಾರರು ಧರಣಿ ಆರಂಭಿಸಿದ್ದರಿಂದ ರಸ್ತೆ ಸಂಚಾರಕ್ಕೆ ಧಕ್ಕೆಯಾಯಿತು. ಈ ವೇಳೆ ಪೊಲೀಸರು ನಾಯಕರನ್ನು ವಶಕ್ಕೆ ತೆಗೆದುಕೊಂಡು ವಾಹನದಲ್ಲಿ ಕರೆದೊಯ್ಯಲು ಯತ್ನಿಸಿದಾಗ ಕಾಂಗ್ರೆಸ್‌ ಕಾರ್ಯಕರ್ತರು ವಾಹನಕ್ಕೆ ಅಡ್ಡ ಮಲಗುವ ಮೂಲಕ ಅಡ್ಡಿಯಾದರು. ತಮ್ಮ ಭೇಟಿಗೆ ರಾಜ್ಯಪಾಲರು ಅವಕಾಶ ನೀಡಿದ್ದರೂ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಎಂಬುದು ಕಾಂಗ್ರೆಸ್‌ ನಾಯಕರ ಆಕ್ರೋಶವಾಗಿತ್ತು.

ಆದರೆ, ರಾಜ್ಯಪಾಲರು ಭೇಟಿಗೆ ಅವಕಾಶ ನೀಡಿರುವುದು ಕೆಲವೇ ನಾಯಕರಿಗೆ ಮಾತ್ರ. ಆದರೆ, ರಾಜಭವನದತ್ತ ನೂರಾರು ಕಾರ್ಯಕರ್ತರು ಹಾಗೂ ಪ್ರತಿಭಟನಾಕಾರರು ತೆರಳುತ್ತಿದ್ದು, ಇದಕ್ಕೆ ಅವಕಾಶವಿಲ್ಲ ಎಂಬುದು ಪೊಲೀಸರ ವಾದವಾಗಿತ್ತು. ಅಂತಿಮವಾಗಿ ಪೊಲೀಸರು ನಾಯಕರ ಮನವೊಲಿಸಿ ಸ್ಥಳದಿಂದ ಕರೆದೊಯ್ದರು. ರಾಜ್ಯಪಾಲರ ಭೇಟಿಗೆ ನಿಗದಿಯಾಗಿದ್ದ ಸಮಯದೊಳಗೆ ಪೊಲೀಸರು ತಮ್ಮನ್ನು ಬಿಡುಗಡೆ ಮಾಡದ ಕಾರಣ ಕಾಂಗ್ರೆಸ್‌ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಲಿಲ್ಲ. ಬದಲಾಗಿ ಕೇಂದ್ರದ ಧೋರಣೆ ವಿರೋಧಿಸಿ ಬರೆಯಲಾಗಿದ್ದ ಮನವಿ ಪತ್ರವನ್ನು ಅಂಜೆ ಮೂಲಕ ರಾಜ್ಯಪಾಲರಿಗೆ ತಲುಪಿಸುವ ವ್ಯವಸ್ಥೆಯನ್ನು ಕೆಪಿಸಿಸಿ ಮಾಡಿತು.

ಬೆಳಗ್ಗೆಯಿಂದ ಅಬ್ಬರಿಸಿ ಸಂಜೆ ಬಿಎಸ್‌ವೈಗೆ ಅಭಿನಂದನೆ ತಿಳಿಸಿದ ಸಿದ್ದು, ಇದೇ ರಾಜಕೀಯ ಗುರು...!

ಬೆಂಗಳೂರಿನಲ್ಲಿ ಭಾರಿ ಪ್ರತಿಭಟನೆ:

ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ಘಟನೆಗಳ ಹಿನ್ನೆಲೆಯಲ್ಲಿ ‘ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಕ್ಷಿಸಿ’ ಎಂಬ ಹೆಸರಿನಲ್ಲಿ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಿಂದ ರಾಜಭವದವರೆಗೆ ಪ್ರತಿಭಟನಾ ರಾರ‍ಯಲಿಗೆ ಮುಂದಾದರು. ಪಾದಯಾತ್ರೆ ಮೂಲಕ ರಾಜಭವನದತ್ತ ಸಾಗಿದ ಪ್ರತಿಭಟನಾಕಾರರು ಹಾದಿಯುದ್ದಕ್ಕೂ ಕೇಂದ್ರ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿದರು.

ಪ್ರತಿಭಟನಾ ರಾರ‍ಯಲಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವೃತ್ತದ ಬಳಿ ಬರುತ್ತಿದ್ದಂತೆ ಮುಂದೆ ಹೋಗದಂತೆ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಹೈಡ್ರಾಮಾ ನಡೆಯಿತು. ಈ ವೇಳೆ ಪೊಲೀಸರು ಪೊಲೀಸರು ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಲೀಂ ಅಹಮದ್‌, ಎನ್‌ಎಸ್‌ಯುಐ ಘಟಕದ ಸದಸ್ಯರು, ವಶಕ್ಕೆ ಪಡೆದು ಬಿಎಂಟಿಸಿ ಬಸ್‌ಗಳಲ್ಲಿ ಅಶೋಕ ನಗರ ಪೊಲೀಸ್‌ ಠಾಣೆಗೆ ಕರೆತಂದು ನಂತರ ಬಿಡುಗಡೆ ಮಾಡಿದರು.

ಪ್ರತಿಭಟನೆ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಬಿಜೆಪಿ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಚುನಾಯಿತ ಸರ್ಕಾರಗಳನ್ನು ವಾಮಮಾರ್ಗಗಳ ಮೂಲಕ ಕೆಳಗಿಳಿಸುತ್ತಿದೆ. ಆಪರೇಷನ್‌ ಕಮಲ ಎಂಬ ಕೆಟ್ಟಪದ್ಧತಿಯನ್ನು ಮುಂದುವರೆಸಿದೆ. ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಲ್ಲಿ ಕುದುರೆ ವ್ಯಾಪಾರ ನಡೆಸುತ್ತಿದ್ದು ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಹೀಗಾಗಿ ಕಾಂಗ್ರೆಸ್‌ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ಹೋರಾಟ ನಡೆಸುತ್ತಿದೆ ಎಂದು ಹೇಳಿದರು.

'ಇನ್ಮುಂದೆ ಲಾಕ್‌‌ಡೌನ್ ಇಲ್ಲ, ಕೊರೋನಾ ನಡುವೆಯೇ ಅಭಿವೃದ್ಧಿಯತ್ತ ಗಮನ'

ನಾವು ಯಾರು ಕಾನೂನು ವಿರುದ್ಧವಾಗಿ ಹೋರಾಟ ಮಾಡುತ್ತಿಲ್ಲ. ಸಂವಿಧಾನ, ಕಾನೂನುಗಳಿಗೆ ಗೌರವ ಕೊಟ್ಟಿದ್ದೇವೆ. ಸಂವಿಧಾನ ಉಳಿಸುವ ನಿಟ್ಟಿನಲ್ಲಿ ನಮ್ಮ ಪಕ್ಷದ ಹೋರಾಟ ನಿರಂತರವಾಗಿರಲಿದೆ. ನಮ್ಮ ಪ್ರಯತ್ನವನ್ನು ಕುಗ್ಗಿಸಲು ನೀವು ಪ್ರಯತ್ನ ಮಾಡುತ್ತಿದ್ದೀರಿ ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ಅಂತರ ಮರೆತ ಕಾಂಗ್ರೆಸಿಗರು

ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಮುಖಂಡರು ಸೇರಿದಂತೆ ಎಲ್ಲರೂ ಕೋವಿಡ್‌ -19ರ ನಿಯಮ ಉಲ್ಲಂಘಿಸಿದ್ದರು. ಹಲವರು ಧರಿಸಿದ್ದ ಮಾಸ್ಕ್‌ ಮೂಗು, ಬಾಯಿಗಿಂತ ಕೆಳಗೆ ಜಾರಿದ್ದರೆ, ಇನ್ನು ಕೆಲವರ ಮಾಸ್ಕ್‌ ಬಾಯಿಗೆ ಮಾತ್ರ ಸೀಮಿತವಾಗಿತ್ತು. ನಿಯಮದಂತೆ ಕನಿಷ್ಠ ಮೂರು ಅಡಿ ಅಂತರ ಕಾಯ್ದುಕೊಳ್ಳಬೇಕೆಂಬ ಪ್ರಜ್ಞೆಯೂ ಇಲ್ಲದಂತೆ ಸಾಮಾಜಿಕ ಅಂತರವನ್ನು ಗಾಳಿಗೆ ತೂರಲಾಗಿತ್ತು. ಒಬ್ಬರಿಂದ ಮತ್ತೊಬ್ಬರ ನಡುವಿನ ಅಂತರ ಒಂದು ಅಡಿಯೂ ಇಲ್ಲದ್ದು ಕಂಡುಬಂತು. ಪ್ರತಿಭಟನೆ ನೆಪದಲ್ಲಿ ಸಾಮಾಜಿಕ ಅಂತರ ಮರೆತವರಿಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಯಾರೂ ಕೂಡ ಮುಂದಾಗಲಿಲ್ಲ.

Follow Us:
Download App:
  • android
  • ios