ಬೆಂಗಳೂರಿನ ಎಸ್‌ಬಿಐ ಶಾಖೆಯ ವ್ಯವಸ್ಥಾಪಕರು ಕನ್ನಡ ಮಾತನಾಡಲು ನಿರಾಕರಿಸಿ, ಹಿಂದಿಯಲ್ಲೇ ವ್ಯವಹರಿಸುವುದಾಗಿ ಹೇಳಿರುವ ವಿಡಿಯೋ ವಿವಾದಕ್ಕೆ ಕಾರಣವಾಗಿದೆ. ಗ್ರಾಹಕರೊಬ್ಬರು ಕನ್ನಡದಲ್ಲಿ ಸೇವೆ ನೀಡುವಂತೆ ಒತ್ತಾಯಿಸಿದಾಗ, ವ್ಯವಸ್ಥಾಪಕರು "ಇದು ಭಾರತ, ನಾನು ಹಿಂದಿಯಲ್ಲೇ ಮಾತಾಡ್ತೇನೆ" ಎಂದಿದ್ದಾರೆ. ಆರ್‌ಬಿಐ ನಿಯಮಗಳ ಪ್ರಕಾರ ಸ್ಥಳೀಯ ಭಾಷೆಯಲ್ಲಿ ಸೇವೆ ನೀಡಬೇಕೆಂಬ ನಿಯಮವಿದ್ದರೂ, ವ್ಯವಸ್ಥಾಪಕರ ಈ ನಡೆ ಟೀಕೆಗೆ ಗುರಿಯಾಗಿದೆ.
ಬೆಂಗಳೂರು(ಮೇ.20) ಎಂದಿಗೂ ಕನ್ನಡ ಮಾತನಾಡುವುದಿಲ್ಲ, ನಾನು ಹಿಂದಿಯಲ್ಲೇ ಮಾತನಾಡುತ್ತೇನೆ ಎಂದು ಹೇಳಿರುವ ವಿಡಿಯೋ ಒಂದು ಭಾರಿ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರಿನ ಚಂದ್ರಪುರದ ಎಸ್‌ಬಿಐ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ ಎನ್ನಲಾದ ಈ ವಿಡಿಯೋ ಇದೀಗ ಪರ ವಿರೋಧಗಳಿಗೆ ಕಾರಣಾಗಿದೆ. ಗ್ರಾಹಕನ ಜೊತೆ ವಾಗ್ವಾದ ನಡೆಸುತ್ತಿರುವ ಈ ವಿಡಿಯೋದಲ್ಲಿ ಗ್ರಾಹಕನೊಬ್ಬ, ಇದು ಕರ್ನಾಟಕ ಇಲ್ಲಿ ಮೊದಲ ಭಾಷೆ ಕನ್ನಡ ಎಂದು ವಾಗ್ವಾದ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬ್ರಾಂಚ್ ಮ್ಯಾನೇಜರ್ ತಾನು ಕನ್ನಡದಲ್ಲಿ ಮಾತಾನಾಡಲ್ಲ ಎಂದಿದ್ದಾರೆ.
ಇದು ಭಾರತ ಹಿಂದೆಯಲ್ಲೇ ಮಾತನಾಡುತ್ತೇನೆ
ಕನ್ನಡ ಭಾಷೆ ಕುರಿತು ಭಾರಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಹೊಸ ಘಟನೆಯೊಂದು ಬೆಳಕಿಗೆ ಬಂದಿದೆ. ಚೇ ಕೃಷ್ಣ ಎಕ್ಸ್ ಖಾತೆಯಲ್ಲಿ ಈ ಕುರಿತು ವಿಡಿಯೋ ಹಂಚಿಕೊಳ್ಳಲಾಗಿದೆ. ಬೆಂಗಳೂರಿನ ಎಸ್‌ಬಿಐ ಚಂದ್ರಾಪುರ ಬ್ಯಾಂಕ್ ಮ್ಯಾನೇಜರ್ ತಾನು ಕನ್ನಡದಲ್ಲಿ ಮಾತನಾಡುವುದಿಲ್ಲ, ಇದು ಭಾರತ ನಾನು ಹಿಂದಿಯಲ್ಲಿ ಮಾತನಾಡುತ್ತೇನೆ ಎಂದಿದ್ದಾರೆ. ಆರ್‌ಬಿಐ ಮಾರ್ಗಸೂಚಿ ಪ್ರಕಾರ, ಬ್ಯಾಂಕ್ ಸಿಬ್ಬಂದಿಗಳು ಗ್ರಾಹಕರಿಗೆ ಸ್ಥಳೀಯ ಭಾಷೆಯಲ್ಲಿ ಸೇವೆ ನೀಡಬೇಕು ಎಂದಿದೆ. ಎಸ್‌ಬಿಐ ಈ ಮ್ಯಾನೇಜರ್ ವಿರುದ್ದ ಕ್ರಮ ಕೈಗೊಳ್ಳುವಂತೆ ಎಕ್ಸ್ ಖಾತೆಯಲ್ಲಿ ಆಗ್ರಹಿಸಲಾಗಿದೆ.
ಸ್ಥಳೀಯ ಗ್ರಾಹಕರನ್ನು ಗೌರವಿಸಿ
ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಕನ್ನಡ ಭಾಷೆ, ನೆಲ,ಜಲ ಕುರಿತು ಪದೇ ಪದೇ ಅವಮಾನಿಸುವ ಘಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಇದೀಗ ಬ್ಯಾಂಕ್ ಮ್ಯಾನೇಜರ್ ವಿಡಿಯೋ ಕೋಲಾಹಲ ಸೃಷ್ಟಿಸಿದೆ. ಬ್ಯಾಂಕ್ ಮ್ಯಾನೇಜರ್ ಕ್ಷಮೆ ಕೇಳಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಹಲವರು ಆಗ್ರಹಿಸಿದ್ದಾರೆ. ಈ ಘಟನೆ ಕುರಿತು ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಸ್ಥಳೀಯ ಗ್ರಾಹಕರನ್ನು ಗೌರವಿಸಬೇಕು, ಭಾಷೆ ಬರದಿದ್ದರೂ ಗೌರವದಿಂದ ಕಾಣಬೇಕು ಎಂದು ಹಲವರು ಸಲಹೆ ನೀಡಿದ್ದಾರೆ. ದರ್ಪ, ಅಹಂಕಾರ ಸಲ್ಲದು ಎಂದಿದ್ದಾರೆ.
ಕನ್ನಡ ಬರುವುದಿಲ್ಲ ಅನ್ನೋದು ತಪ್ಪಲ್ಲ. ಮ್ಯಾನೇಜರ್ ಕಲಿಯಬಹುದು ಅಥವಾ ಕಲಿಯದೇ ಇರಬಹುದು. ಆದರೆ ಕರ್ನಾಟಕದಲ್ಲಿ ಕೆಲಸ ಮಾಡುವಾಗ ಇಲ್ಲಿನ ಭಾಷೆ ಬಗ್ಗೆ ಗೌರವ ಇಟ್ಟುಕೊಳ್ಳಬೇಕು. ಸ್ಥಳೀಯ ಭಾಷಿಗರನ್ನು ಗೌರವದಿದಂ ಕಾಣಬೇಕು. ಬ್ಯಾಂಕ್‌ನಲ್ಲಿರುವ ಕನ್ನಡ ಸಿಬ್ಬಂದಿಗಳ ಸಹಾಯದಲ್ಲಿ ಗೌರವದಿಂದ ಗ್ರಾಹಕರ ಜೊತೆ ಮಾತನಾಡಿದ ಸಮಸ್ಯೆ ಪರಿಹರಿಸಬೇಕು ಎಂದು ಎಕ್ಸ್ ಮೂಲಕ ಹಲವರು ಸಲಹೆ ನೀಡಿದ್ದಾರೆ. ಇದೇ ವೇಳೆ ಒಂದಷ್ಟು ಮಂದಿ ದರ್ಪ ತೋರಿದ ಬ್ಯಾಂಕ್ ಮ್ಯಾನೇಜರ್‌ನ್ನು ಉತ್ತರ ಭಾರತಕ್ಕೆ ವರ್ಗಾವಣೆ ಮಾಡಿ, ಕರ್ನಾಟಕದಲ್ಲಿ ಬೇಡ ಎಂದಿದ್ದಾರೆ.
ಬ್ಯಾಂಕ್ ಸಿಬ್ಬಂದಿಗಳು ದೇಶದ ಬೇರೆ ಬೇರೆ ರಾಜ್ಯಕ್ಕೆ ವರ್ಗಾವಣೆಯಾಗುತ್ತಾರೆ. ಹೀಗಾಗಿ ಅವರಿಗೆ ಸ್ಥಳೀಯ ಭಾಷೆ ಗೊತ್ತಿರಬೇಕು ಎಂದಿಲ್ಲ. ಕನ್ನಡ ಅಥವಾ ಇತರ ಸ್ಥಳೀಯ ಭಾಷೆ ಕಲಿಯಬೇಕು ಅನ್ನೋದು ಕಡ್ಡಾಯವಲ್ಲ. ಗ್ರಾಹಕರಿಗೆ ಹಿಂದಿ ಅಥವಾ ಇಂಗ್ಲೀಷ್ ಗೊತ್ತಿಲ್ಲದಿದ್ದರೆ, ಬ್ಯಾಂಕ್‌ನ ಕನ್ನಡ ಸಿಬ್ಬಂದಿಗಳ ಜೊತೆ ವ್ಯವಹರಿಸಬಹುದು. ದೂರು, ಸಮಸ್ಯೆ ಅಥವಾ ಇನ್ಯಾವುದೇ ಮಾಹಿತಿ ಮ್ಯಾನೇಜರ್‌ನಿಂದ ಬೇಕಿದ್ದರೆ ಪಡೆಯಬಹುದು. ಇದು ಉದ್ದೇಶಪೂರ್ವಕವಾಗಿ ಬ್ಯಾಂಕ್ ಸಿಬ್ಬಂದಿಯನ್ನು ಪ್ರಚೋದಿಸಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.