ಕರ್ನಾಟಕದಲ್ಲಿ ನಾಲ್ವರಿಗೆ ಕೊರೋನಾ: ದಿಟ್ಟ ಕ್ರಮಕೈಗೊಂಡ ರಾಜ್ಯ ಸರ್ಕಾರ
ಇಷ್ಟು ದಿನ ಬೇರೆ-ಬೇರೆ ರಾಷ್ಟ್ರ-ರಾಜ್ಯಗಳಲ್ಲಿ ಸುತ್ತಾಡುತ್ತಿದ್ದ ಡೆಡ್ಲಿ ಕೊರೋನಾ ವೈರಸ್ ಇದೀಗ ಕರ್ನಾಟಕಕ್ಕೆ ವಕ್ಕರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬಿಎಸ್‌ವೈ ಸರ್ಕಾರ ದಿಟ್ಟ ಕ್ರಮಕೈಗೊಂಡಿದೆ. ಇನ್ನು ಈ ಬಗ್ಗೆ ಬಿಎಸ್‌ವೈ ಸುದ್ದಿಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಬೆಂಗಳೂರು, (ಮಾ.10): ರಾಜ್ಯದಲ್ಲಿ ನಾಲ್ವರಿಗೆ ಕೊರೋನಾ ಸೋಂಕು ತಗುಲಿದ್ದು ದೃಢವಾಗಿದ್ದು, ಸೋಂಕು ಹರಡದಂತೆ ತಡೆಯಲು ಸಮಿತಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು (ಮಂಗಳವಾರ) ಕೊರೋನಾ ಸೋಂಕು ಸಂಬಂಧ ಸಚಿವರು ಮತ್ತು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಬೆಂಗಳೂರಿಗೂ ಬಂತು ಕೊರೋನಾ ; ಟೆಕ್ಕಿಗೆ ಶುರುವಾಗಿದೆ ಚಿಕಿತ್ಸೆ
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್‌ವೈ, ಕಳೆದ ಎರಡು ದಿನಗಳಲ್ಲಿ ಕರ್ನಾಟಕದಲ್ಲಿ 4 ಮಂದಿಗೆ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ರಾಜ್ಯದ ಪರಿಸ್ಥಿತಿ ಹಾಗೂ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ರಾಜ್ಯದಲ್ಲಿ ಈ ಸೋಂಕು ಹರಡುವ ಸಾಧ್ಯತೆಯನ್ನು ತಡೆಗಟ್ಟಲು ನಮ್ಮ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದರು.
ಈವರೆಗೆ ಕರೋನಾ ವೈರಸ್ ಸೋಂಕು ಇರುವ ದೇಶಗಳಿಂದ ಪ್ರಯಾಣಿಸಿರುವ ಹಾಗೂ ಸೋಂಕಿತರ ಸಂಪರ್ಕದಲ್ಲಿದ್ದ 1048 ಜನರನ್ನು ಅವಲೋಕನೆಗಾಗಿ ಗುರುತಿಸಲಾಗಿದೆ. ಈ ವರೆಗೆ ರೋಗ ಲಕ್ಷಣ ಇರುವ 446 ಮಾದರಿಗಳನ್ನು ಪರೀಕ್ಷೆಗಾಗಿ ಕಳಿಸಲಾಗಿದೆ. 389 ಮಾದರಿಗಳು ನೆಗೆಟಿವ್ ಎಂದು ವರದಿಯಾಗಿದ್ದು, 4 ಮಾದರಿಗಳು ಪಾಸಿಟಿವ್ ಎಂದು ತಿಳಿದುಬಂದಿದೆ. ಬಾಕಿ ಮಾದರಿಗಳ ವರದಿಯನ್ನು ನಿರೀಕ್ಷಿಸಲಾಗಿದೆ ಎಂದರು.
ದೇಶದಲ್ಲೆಲ್ಲೂ ಕೈಗೊಳ್ಳದಷ್ಟು ಕಟ್ಟೆಚ್ಚರ ರಾಜ್ಯದಲ್ಲಿ!
ಅಮೆರಿಕದಿಂದ ಬಂದ ಟೆಕ್ಕಿ, ಅವರ ಪತ್ನಿ, ಮಗು ಸೋಂಕಿತರು. ಇವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಂಡಿದ್ದಾರೆ. ಮತ್ತೊಬ್ಬ ವ್ಯಕ್ತಿಗೆ ಸೋಂಕು ತಗುಲಿರುವುದು ಖಚಿತ ಪಟ್ಟಿದ್ದು, ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ಎಂದು ತಿಳಿಸಿದರು.
ಬೆಂಗಳೂರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಂಗಳೂರು ಹಾಗೂ ಕಾರವಾರ ಕಡಲ ಬಂದರುಗಳಲ್ಲಿ ಸುಮಾರು 95 ಸಾವಿರಕ್ಕೂ ಹೆಚ್ಚು ಪ್ರಯಾಣಿಕರ ತಪಾಸಣೆ ಮಾಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ಕಟ್ಟುನಿಟ್ಟಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕೊರೋನಾ ಭೀತಿ, ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಮುನ್ನೆಚ್ಚರಿಕೆಯ ಕ್ರಮವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಶಿಶುವಿಹಾರ, ಎಲ್‍ಕೆಜಿ, ಯುಕೆಜಿ ಶಾಲೆಗಳು, ಅಂಗನವಾಡಿಗಳಿಗೂ ರಜೆ ಘೋಷಿಸಲಾಗಿದೆ. ಪ್ರತಿ ದಿನ ವೈದ್ಯಕೀಯ ಶಿಕ್ಷಣ ಸಚಿವರು, ಆರೋಗ್ಯ ಸಚಿವರು ಅಧಿಕಾರಿಗಳ ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಸರ್ಜಿಕಲ್ ಮಾಸ್ಕ್, ಔಷಧಿ ಇತ್ಯಾದಿ ಯಾವುದೇ ಕೊರತೆ ಇಲ್ಲ. ಎಲ್ಲರೂ ಮಾಸ್ಕ್ ಧರಿಸುವ ಅಗತ್ಯ ಇಲ್ಲ. ಸೋಂಕಿತರು ಮತ್ತು ಅವರ ನಿಕಟ ಸಂಪರ್ಕ ಹೊಂದಿರುವವರು ಮಾಸ್ಕ್ ಧರಿಸಿದರೆ ಸಾಕು. ಜನರು ಆತಂಕಕ್ಕೆ ಒಳಗಾಗುವುದು ಬೇಡ. ಹೆಚ್ಚು ಹಣ ವಸೂಲಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಡ್ರಗ್ ಕಂಟ್ರೋಲರ್ ಅವರಿಗೆ ಸೂಚಿಸಿದೆ. ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಈ ಸೋಂಕು ಹರಡದಂತೆ ತಡೆಗಟ್ಟುವುದು ನಮ್ಮ ಆದ್ಯತೆಯಾಗಿದೆ. ಇದಕ್ಕೆ ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು.