ಬೇರೆ ಪಕ್ಷದ ಕಾರ್ಯಕರ್ತ ಹತ್ಯೆಯಾಗಿದ್ರೆ ಸಿಎಂ ಶೂಟೌಟ್ ಅಂತಿದ್ರಾ?
JDS ಕಾರ್ಯಕರ್ತ ಎನ್ನುವ ವ್ಯಾಮೋಹದ ಮೇಲೆ ಹಂತಕರನ್ನು ಶೂಟೌಟ್ ಮಾಡಿ ಎನ್ನುವ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.
ಬೆಂಗಳೂರು, (ಡಿ.25): ಮಂಡ್ಯ ಜಿಲ್ಲೆಯ ಮದ್ದೂರಿನ ಜೆಡಿಎಸ್ ಮುಖಂಡ ಪ್ರಕಾಶ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನ ಶೂಟೌಟ್ ಮಾಡಿ ಎನ್ನುವ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಹೀಗೆ ಆವೇಶದಿಂದ ಮಾತನಾಡುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾತಣಗಳಲ್ಲಿ ವ್ಯಕ್ತವಾಗಿವೆ.
ಮಂಡ್ಯ JDS ಮುಖಂಡನ ಹತ್ಯೆ; ಆರೋಪಿಗಳನ್ನು ಶೂಟೌಟ್ ಮಾಡಿ ಎಂದ ಸಿಎಂ
ತಮ್ಮ ಪಕ್ಷದ ಕಾರ್ಯಕರ್ತ ಅಂತ ಆರೋಪಿಗಳನ್ನು ಶೂಟೌಟ್ ಮಾಡಿ ಎಂದು ಹೇಳಿರುವುದು ಎಷ್ಟು ಸರಿ? ಹಿಂದೂ ಸಂಘಟನೆ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಹತ್ಯೆಯಾದಾಗ ಇದೇ ರೀತಿ ಹೇಳುತ್ತಾರೆಯೇ? ಎಂದು ಕುಮಾರಸ್ವಾಮಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಇನ್ನು ಕುಮಾರಸ್ವಾಮಿ ಶೂಟೌಟ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಸುರೇಶ್ ಕುಮಾರ್, ‘ತನ್ನ ಜೆಡಿಎಸ್ ಕಾರ್ಯಕರ್ತನನ್ನು ಹತ್ಯೆ ಮಾಡಿದ ದುರುಳರ ವಿರುದ್ಧ ಮುಖ್ಯಮಂತ್ರಿಗಳ ಆಕ್ರೋಶ ಅರ್ಥವಾಗುವಂತಹದ್ದು.
ಯಾವುದೇ ಪಕ್ಷದ ಕಾರ್ಯಕರ್ತನ ಹತ್ಯೆಯಾದಾಗ ಇದೇ ಭಾವನೆ ರಾಜ್ಯದ ಮುಖ್ಯಸ್ಥನಿಗೆ ಇರುತ್ತದೆಯೇ ಮತ್ತು ಇದೇ ರೀತಿಯ ಶೂಟ್ ಔಟ್ ಆದೇಶ ಹೊರಬೀಳುತ್ತದೆಯೇ’? ಎಂದು ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.
JDS ಮುಖಂಡ ಹತ್ಯೆ: ಶೂಟೌಟ್ ಹೇಳಿಕೆಗೆ ಸಿಎಂ ಸ್ಪಷ್ಟೀಕರಣ
ತನ್ನ ಜೆಡಿಎಸ್ ಕಾರ್ಯಕರ್ತನನ್ನು ಹತ್ಯೆ ಮಾಡಿದ ದುರುಳರ ವಿರುದ್ಧ ಮುಖ್ಯಮಂತ್ರಿಗಳ ಆಕ್ರೋಷ ಅರ್ಥವಾಗುವಂತಹದ್ದು.
— Sureshkumar (@nimmasuresh) December 24, 2018
ಯಾವುದೇ ಪಕ್ಷದ ಕಾರ್ಯಕರ್ತನ ಹತ್ಯೆಯಾದಾಗ ಇದೇ ಭಾವನೆ ರಾಜ್ಯದ ಮುಖ್ಯಸ್ಥನಿಗೆ ಇರುತ್ತದೆಯೇ ಮತ್ತು ಇದೇ ರೀತಿಯ ಶೂಟ್ ಔಟ್ ಆದೇಶ ಹೊರಬೀಳುತ್ತದೆಯೇ?
ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಸದಾನಂದ ಗೌಡ ಅವರು ಕುಮಾರಸ್ವಾಮಿ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.
ರಾಜಕೀಯ ಪಕ್ಷದ ಕಾರ್ಯಕರ್ತರ ಕೊಲೆಗಳು ಪ್ರಜಾಪ್ರಭುತ್ವಕ್ಕೆ ಮಾರಕ . ಇಂದು ಅಂತಹ ಒಂದು ಘಟನೆ ಮದ್ದೂರಿನಲ್ಲಿ ನಡೆದಿದೆ . ಖಂಡನೀಯ .ಮಾನ್ಯ ಮುಖ್ಯಮಂತ್ರಿಗಳೇ ಅದೇ ರೀತಿನಾವು ಕಳೆದುಕೊಂಡ ನಮ್ಮ ಪಕ್ಷದ ಕಾರ್ಯಕರ್ತರ ಜೀವ , ಕುಟುಂಬಸ್ಥರ ಕಣ್ಣೀರು ಅಷ್ಟೇ ಅಮೂಲ್ಯದ್ದು . ಸ್ವಲ್ಪ ಗಮನಿಸಿ .
— Sadananda Gowda (@DVSBJP) December 24, 2018
ಕುಮಾರಸ್ವಾಮಿ ಅವರು ಹಂತಕರನ್ನು ಶೂಟೌಟ್ ಮಾಡಿ ಎಂದು ಹೇಳಿಕೆ ನೀಡಿರುವುದು ತಪ್ಪು. ಅವರು ಕೂಡಲೇ ಈ ಬಗ್ಗೆ ರಾಜ್ಯದ ಜನರ ಕ್ಷಮೆ ಕೋರಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಹೇಳಿಕೆ ಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಅಧಿಕಾರಿಗಳಿಗೆ ಮುಕ್ತ ಅವಕಾಶ ಕೊಟ್ಟಂತೆ ಆಗುತ್ತದೆ. ಸಿಎಂ ಆಗಿ ಈ ರೀತಿ ಹೇಳಿಲ್ಲ, ಆವೇಶದಿಂದ ಹೇಳಿದ್ದೇನೆ ಎಂದು ಸಿಎಂ ಹೇಳಿದ್ದಾರೆ.
ಹಾಗಾದರೆ ಅವರು ಈಗ ಮುಖ್ಯಮಂತ್ರಿ ಆಗಿಲ್ಲವೇ ಎಂದು ಯಡಿಯೂರಪ್ಪ ಪ್ರಶ್ನಿಸಿದರು. ಜೆಡಿಎಸ್, ಬಿಜೆಪಿ ಅಥವಾ ಕಾಂಗ್ರೆಸ್ ಆಗಲಿ, ಯಾವುದೇ ಪಕ್ಷದ ಕಾರ್ಯಕರ್ತರ ಹತ್ಯೆಯನ್ನು ಸಹಿಸುವುದು ಸಾಧ್ಯವಿಲ್ಲ. ಹಂತಕರಿಗೆ ಶಿಕ್ಷೆಯಾಗಬೇಕು. ಅದರಲ್ಲಿ ಎರಡು ಮಾತಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.